ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ
ಬೇರೆ ಹಣ ಸಂಗ್ರಹಿಸಿದರೆ ಶಿಸ್ತುಕ್ರಮ.
ಧಾರವಾಡ : ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣು ಇಲ್ಲವೇ ಶೇಂಗಾಚೆಕ್ಕಿ ವಿತರಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಪಾಲಕರಿಂದ ಇಲ್ಲವೇ ಪೋಷಕರಿಂದ ಬೇರೆ ರೀತಿಯ ಹಣ ಸಂಗ್ರಹಕ್ಕೆ ಮುಂದಾದರೆ ಇಲಾಖಾ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಎಚ್ಚರಿಸಿದ್ದಾರೆ.
ಶಾಲಾ ಮಕ್ಕಳಿಗೆ ವಿತರಣೆ ಮಾಡುವ ಪ್ರತೀ ಮೊಟ್ಟೆ ಅಥವಾ ಬಾಳೆಹಣ್ಣು ಇಲ್ಲವೇ ಶೇಂಗಾಚೆಕ್ಕಿ ಖರೀದಿಸುವಾಗ ಸರಕಾರ ಪ್ರತೀ ವಿದ್ಯಾರ್ಥಿಗೆ ನಿಗದಿಗೊಳಿಸಿರುವ 6 ರೂ.ಗಳ ದರದ ಮಿತಿಯೊಳಗೇ ವೆಚ್ಚವನ್ನು ಭರಿಸುವಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಯೋಜಿಸಬೇಕು. ಯಾವುದೇ ಕಾರಣಕ್ಕೂ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗಾಗಿ ಹೆಚ್ಚುವರಿ ಹಣವನ್ನು ವಿದ್ಯಾರ್ಥಿಗಳ ಪಾಲಕರು ಇಲ್ಲವೇ ಪೋಷಕರುಗಳಿಂದ ವಸೂಲಿ ಮಾಡಲು ಇಲಾಖಾ ನಿಯಮಾವಳಿಯಲ್ಲಿ ಅವಕಾಶವಿಲ್ಲದೇ ಇರುವುದನ್ನು ಶಾಲಾ ಮುಖ್ಯ ಶಿಕ್ಷಕರು ಮನಗಾಣಬೇಕು ಎಂದಿದ್ದಾರೆ.
ಕಠಿಣ ಕ್ರಮ : ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗಾಗಿ ವಿದ್ಯಾರ್ಥಿಗಳ ಪಾಲಕರು ಇಲ್ಲವೇ ಪೋಷಕರುಗಳಿಂದ ಹೆಚ್ಚುವರಿ ಹಣವನ್ನು ಸಂಗ್ರಹಿಸಿದ ಬಗ್ಗೆ ಲಿಖಿತ ದೂರುಗಳು ಬಂದರೆ ಇಲಾಖಾ ವಿಚಾರಣೆ ನಡೆಸಲಾಗುತ್ತಿದ್ದು, ಅದು ನಿಜಾಂಶಗಳಿಂದ ಸಾಬೀತಾದಲ್ಲಿ ಶಾಲಾ ಮುಖ್ಯ ಶಿಕ್ಷಕರು ಇಲ್ಲವೇ ಸಹ ಶಿಕ್ಷಕ-ಶಿಕ್ಷಕಿಯರು ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದವರು ಎಚ್ಚರಿಕೆ ನೀಡಿದ್ದಾರೆ.
ತಾವು ಬೆಳಗಾವಿ ವಿಭಾಗದ ಬಾಗಲಕೋಟ, ವಿಜಯಪೂರ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ ಹಾಗೂ ಗದಗ ಕಂದಾಯ ಜಿಲ್ಲೆಗಳು, ಜೊತೆಗೆ ಶಿರಸಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಶಾಲೆಗಳಿಗೆ ಆಕಸ್ಮಿಕ ಸಂದರ್ಶನ ನೀಡಿದ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು, ವಿದ್ಯಾರ್ಥಿಗಳ ಪಾಲಕ-ಪೋಷಕರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದಿದ್ದಾರೆ.
ಪ್ರತೀ ಬಿಇಓ ಹಾಗೂ ಡಿಡಿಪಿಐ ಅವರು ತಮ್ಮ ವ್ಯಾಪ್ತಿಯಲ್ಲಿಯ ಶಾಲೆಗಳಿಗೆ ಸಂದರ್ಶನ ನೀಡಿ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾಚೆಕ್ಕಿ ಖರೀದಿಗೆ ಸಂಬಂಧಿಸಿದಂತೆ ಸರಕಾರ ಪ್ರತೀ ವಿದ್ಯಾರ್ಥಿಗೆ ನಿಗದಿಗೊಳಿಸಿರುವ 6 ರೂ.ಗಳ ದರದ ಮಿತಿಯೊಳಗೇ ವೆಚ್ಚವನ್ನು ಭರಿಸಿದ ಬಗ್ಗೆ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿಶೇಷ ಗಮನ ನೀಡಿ ತಪಾಸಣೆ ಮಾಡಬೇಕೆಂದು ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ಅವರು ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.