7ನೇ ವೇತನ ಆಯೋಗದ ವರದಿ ನವೆಂಬರ್ 16ರಂದು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಅದನ್ನು ರಾಜ್ಯ ಸರ್ಕಾರ ಜಾರಿ ಮಾಡುವ ಮೂಲಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್. ಷಡಕ್ಷರಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಆಯೋಗ ಕಾಲವಕಾಶ ಕೇಳಿದರೆ ಆ ಮಾತು ಬೇರೆ. ಆದರೆ, ವೇತನ ಆಯೋಗವೇ ಸಂಪೂರ್ಣ ವರದಿ ಸಲ್ಲಿಕೆ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರ ಅದನ್ನು ಮತ್ತೆ ವಿಸ್ತರಣೆ ಮಾಡುವುದಿಲ್ಲ ಎನ್ನುವ ವಿಶ್ವಾಸ ನಮ್ಮದು ಎಂದರು.
ಸಿಎಂ ಸಿದ್ದರಾಮಯ್ಯ ನೌಕರರ ಪರ ಇದ್ದಾರೆ. ಈ ಹಿಂದೆ ಅವರೇ ಸಿಎಂ ಆಗಿದ್ದ ವೇಳೆ 6ನೇ ವೇತನ ಆಯೋಗದ ಜಾರಿ, ಶೇ. 30 ಹೆಚ್ಚಳ ಮಾಡಿದ್ದಾರೆ. ಈ ಬಾರಿಯೂ ಮಾಡುತ್ತಾರೆ ಎನ್ನುವುದು ನಮ್ಮ ನಂಬಿಕೆ. ತುಮಕೂರಿನಲ್ಲಿ ಇದೇ 27, 28, 29ರಂದು ಸರ್ಕಾರಿ ನೌಕರರ ಕ್ರೀಡಾಕೂಟ ನಡೆಯಲಿದೆ. ಆಗ ಸಿಎಂಗೆ ನೌಕರರ ಪರವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಅವರು ಸಹ ಈಕುರಿತು ಮಾತನಾಡಲಿದ್ದಾರೆ ಎಂದರು.
ವೇತನ ಆಯೋಗದವರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ನೌಕರರ ವೇತನ ಹೆಚ್ಚಳಕ್ಕೆ ಸಮಸ್ಯೆಯಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 21.25 ಲಕ್ಷ ಕೋಟ ಬಜೆಟ್ ಮಂಡಿಸುವ ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ವೇತನ ಹೆಚ್ಚಳ ಹೊರೆಯಾಗುವುದಿಲ್ಲ. ಈಗಾಗಲೇ 17 ರ್ಪಂಟೇಜ್ ನೀಡಿರುವುದರಿಂದ ಆಯೋಗದ ಶಿಫಾರಸಿನಲ್ಲಿ ಇದನ್ನು ಕಡಿತ ಮಾಡಿ ಕೊಡಬೇಕಾಗಿರುವುದರಿಂದ ಹೊರೆಯಾಗುವುದಿಲ್ಲ ಎಂದರು.
ನಾವು ಶೆಕಡ 40 ಕೇಳಿದ್ದೇವೆ, ಅವರು ಎಷ್ಟು ಕೊಡುತ್ತಾರೆ. ಎನ್ನುವುದನ್ನು ಕಾದು ನೋಡಬೇಕು, ಆಯೋಗ ವರದಿ ಆಧಾರದಲ್ಲಿ ನಿರ್ಧಾರವಾಗುತ್ತದೆ. ಎಂದರು. ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಹೇಳಿಕೆ ಅವರಿಗೆ ಬಿಟ್ಟಿ ವಿಷಯ. ಆದರೆ, ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಎಲ್ಲ ವರ್ಗ ದವರನ್ನು ಪ್ರತಿನಿಧಿಸುತ್ತೇನ. ಇಲ್ಲಿ ನಮ್ಮ ಸದಸ್ಯರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ನನಗೆ ಲಿಂಗಾಯತರಿಗೆ ಅನ್ಯಾಯವಾಗಿದೆ ಎನಿಸಿಲ್ಲ ಎಂದರು.