ಗಾಂಧೀಜಿ ಮತ್ತು ಶಾಸ್ತೀಜಿ ಸ್ಮರಣೆ
ಇತ್ತೀಚಿಗೆ ನಾನು ಬೆಂಗಳೂರಿನ ಗಾಂಧಿ ಭವನಕ್ಕೆ ಭೇಟಿ ನೀಡಿದ್ದೆ.ಅಲ್ಲಿ ಗಾಂಧೀಜಿಯವರ ಸ್ಮರಣೆಯ ಕೊಠಡಿಗಳನ್ನು ಗಮನಿಸಿದೆ.ಇಡೀ ಭವನ ಇಂದು ಬಹಳಷ್ಟು ವಿಭಿನ್ನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.ಶೇಷಾಧ್ರಿಪುರಂನ ಈ ಗಾಂಧಿಭವನ ನಿಜಕ್ಕೂ ಅವರ ಕುರಿತ ಸ್ಮರಣಿಕೆಗಳು ಚಿತ್ರಗಳು ಅಲ್ಲಲ್ಲಿ ಗಾಂಧೀಜಿ ಬದುಕಿನ ಘಟನೆಗಳ ಚಿತ್ರಗಳನ್ನು ಒಳಗೊಂಡಿದೆ.ಇದನ್ನು ೧೯೬೫ ರಲ್ಲಿ ಅಂದಿನ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ಎಸ್.ರಾಧಾಕೃಷ್ಣನ್ ಅವರು ಉದ್ಘಾಟಿಸಿದ ಸಂಗತಿ ಗಮನಿಸಿದೆನು.ಇಲ್ಲಿ ಕಾರ್ಯಕ್ರಮ ಜರುಗಿಸಲು ಹಲವು ಸಭಾಭವನಗಳಿವೆ.ಒಂದೆಡೆ ಆಯುರ್ವೇದ ಉಪಚಾರದ ಕೊಠಡಿ ಇದೆ.ಚಿತ್ರಕಲಾ ಗ್ಯಾಲರಿ ಇದೆ.ಮತ್ತೊಂದೆಡೆ ಖಾದಿ ಭಂಡಾರವಿದೆ.ಹಲವು ವೈಶಿಷ್ಟö್ಯತೆಗಳು ಗಾಂಧೀಜಿಯವರ ಸ್ಮರಣೆಗೆ ಸಾಕ್ಷಿಯಾಗಿವೆ.ಗಾಂಧೀಜಿಯವರನ್ನು ಮತ್ತು ಶಾಸ್ತ್ರೀಜಿಯವರ ಬದುಕಿನ ಮೌಲ್ಯಗಳನ್ನು ನಾವಿಂದು ಸ್ಮರಿಸುವ ಜೊತೆಗೆ ನಿತ್ಯದ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು.ಅಂದಾಗ ಇಂತಹ ದಿನಾಚರಣೆಗಳು ಸಾರ್ಥಕ ಪಡೆಯುತ್ತವೆ.ಈ ದಿಸೆಯಲ್ಲಿ ಈ ಇಬ್ಬರೂ ಮಹಾತ್ಮರ ಕುರಿತು ನಾಲ್ಕು ಸಾಲುಗಳು.
ಗಾಂಧೀಜಿ..
ನೀವು ಪ್ರಾರ್ಥನೆಯಿಂದ ನಿಮ್ಮ ದಿನವನ್ನು ಅರಂಭಿಸಿರಿ.ನಮ್ಮ ಪ್ರಾತಃಸ್ಮರಣೆಯ ಪ್ರಭಾವವು ಸಂಜೆಯವರೆಗೂ ನಿಮ್ಮನ್ನು ರಕ್ಷಿಸುವಂತಾಲಿ
-ಮಹಾತ್ಮಾಗಾಂಧೀಜಿ
ಮಹಾತ್ಮಾಗಾಂಧೀಜಿಯವರು ಭಾರತದ ರಾಷ್ಟ್ರಪಿತ.ಜಗತ್ತಿಗೆ ಅವರ ಜೀವನ ಮಹಾತ್ಮರ ಜೀವನವಾಗಿ ತೋರಿದೆ.ತಮ್ಮ ಬದುಕಿನ ಪ್ರಯೋಗಗಳನ್ನು ಕುರಿತು ಅವರು ಬರೆದ ಆತ್ಮಕಥೆ ಜಗತ್ತಿನ ಹಲವು ಭಾಷೆಗಳಿಗೆ ಅನುವಾದವಾಗಿದೆ.ಅದನ್ನು ಕನ್ನಡಕ್ಕೆ”ಆತ್ಮಕಥೆ ಅಥವಾ ನನ್ನ ತತ್ವಾನ್ವೇಷಣೆ”ಎಂಬ ಹೆಸರಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ್ದಾರೆ.
ಮಹಾತ್ಮಗಾಂಧಿಯವರ ಜನ್ಮದಿನವನ್ನು ಅಹಿಂಸಾ ದಿನವೆಂದು ವಿಶ್ವಸಂಸ್ಥೆಯು ೨೦೦೭ರ ಜೂನ್ ೧೫ ರಂದು ಘೋಷಿಸಿದೆ.ನಾವಿಂದು ಅಕ್ಟೋಬರ್ ೨ ನ್ನು ಗಾಂಧೀಜಿಯವರ ಜನ್ಮದಿನವನ್ನಾಗಿ ಮಾತ್ರ ಆಚರಿಸುತ್ತಿಲ್ಲ ಅವರ ಬದುಕಿನ ಆದರ್ಶವನ್ನು ಕೂಡ ಅಂದರೆ ವಿಶ ್ವ ಅಹಿಂಸಾ ದಿನವನ್ನಾಗಿ ಇಡೀ ವಿಶ್ವವೇ ಆಚರಿಸುವಂತೆ ಬದುಕಿನ ಮಹಾತ್ಮನ ನೆನಪಲ್ಲಿ ಆಚರಿಸುತ್ತಿದ್ದೇವೆ.
ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ.ಇವರು ೧೮೬೯ ರ ಅಕ್ಟೋಬರ್ ೨ ರಂದು ಈಗಿನ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು.ತಂದೆ ಕರಮಚಂದ ಗಾಂಧಿ.ತಾಯಿ ಪುತಲೀಬಾಯಿ. ಇವರ ಪ್ರಾಥಮಿಕ ಶಿಕ್ಷಣ ಪೋರಬಂದರನಲ್ಲಿಯೂ ಮುಂದೆ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ರಾಜಕೋಟ ಮತ್ತು ಭಾವನಗರದಲ್ಲಿ ಪೂರೈಸಿದರು. ತಮ್ಮ ೨೨ ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ವಕೀಲಿ ಪರೀಕ್ಷೆಯನ್ನು ಪಾಸಾಗುವುದರೊಂದಿಗೆ ಬ್ಯಾರಿಸ್ಟರ್ ಪದವಿಯನ್ನೂ ಪಡೆದರು.
ಗಾಂಧೀಜಿಯವರ ಶಾಲಾ ದಿನಗಳಲ್ಲಿ ಹಲವು ಘಟನೆಗಳು ಅವರ ಜೀವನದ ಮೇಲೆ ಅಗಾಧ ಪರಿಣಾಮ ಬೀರಿದವು.ಅದರಲ್ಲಿಯೂ ಸತ್ಯಹರಿಶ್ಚಂದ್ರನ ಕಥೆಯು ಅವರನ್ನು ಜೀವನದುದ್ದಕ್ಕೂ ಸತ್ಯಸಂಧರನ್ನಾಗಿ ಮಾಡಿತು.ಬಿಳಿಯರು ಕಪ್ಪುಜನರಿಗೆ ಕೊಡುತ್ತಿದ್ದ ತೊಂದರೆಗಳನ್ನು ಸ್ವತಃ ಅನುಭವಿಸಿದರು.ಇದು ಅವರಿಗೆ ಅಸಮಾನತೆಯ ವಿರುದ್ದ ಹೋರಾಡುವ ಛಲವನ್ನು ನೀಡಿತು.ಅಷ್ಟೇ ಅಲ್ಲ ಭಗವದ್ಗೀತೆಯಲ್ಲಿನ
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ
ಕ್ರೋಧಾತ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ
ಸ್ಮೃತಿ ಭ್ರಂಶಾತ್ ಬುದ್ದಿನಾಶಃ ಬುದ್ದಿನಾಶಾತ್ ಪ್ರಣಶ್ಯತಿ
ಈ ವಾಕ್ಯಗಳು ಅವರಲ್ಲಿ ಚೇತನವನ್ನು ತುಂಬಿದವು ಅಷ್ಟೇ ಅಲ್ಲ ಗುಜರಾತಿ ಭಾಷೆಯಲ್ಲಿ ಭಗವದ್ಗೀತೆಯ ಕುರಿತು ಪುಸ್ತಕ ಬರೆದರು.ಜೊತೆಗೆ ೧೯೦೪ ರಲ್ಲಿ ಅವರು ಓದಿದ “ರಸ್ಕಿನ್ರ ಕಟ್ಟ ಕಡೆಯವನಿಗೆ”ಕೃತಿಯಲ್ಲಿನ ಅನೇಕ ಸಂಗತಿಗಳು ಅವರಿಗೆ ಹಿಡಿಸಿದವು.ಆ ಕೃತಿಯನ್ನು ಗುಜರಾತಿ ಭಾಷೆಗೆ ಅನುವಾದಿಸಿ“ಸರ್ವೋದಯ” ಎಂಬ ಹೆಸರಿನೊಂದಿಗೆ ಪ್ರಕಟಿಸಿದರು. ಹೀಗೆ ಗಾಂಧೀಜಿಯವರ ಬದುಕಿನಲ್ಲಿ ಅನೇಕ ಸಂಗತಿಗಳು ಅವರ ಮೇಲೆ ಪ್ರಭಾವಬೀರುವ ಮೂಲಕ ಅವರನ್ನು ಸ್ವಾತಂತ್ರö್ಯ ಚಳುವಳಿಯಲ್ಲಿ ಧುಮುಕುವಂತೆ ಮಾಡಿದ್ದವು.
ನಮ್ಮ ದೇಶದ ಜನ ಉದ್ದಾರವಾಗಬೇಕಾದರೆ “ಸಣ್ಣಕೈಗಾರಿಕೆ””ಗುಡಿ ಕೈಗಾರಿಕೆ”ಗಳಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ಅವರು ನಮ್ಮ ಜನ ತಮಗೆ ಬೇಕಾದ ವಸ್ತುಗಳನ್ನು ತಾವೇ ತಯಾರಿಸಿ ಮಾರಾಟ ಮಾಡಬೇಕೆಂದು ಕರೆಯಿತ್ತು ತಾವೂ ಕೂಡ ಚರಕವನ್ನು ಬಳಸಿ ತಯಾರಿಸಿದ ಬಟ್ಟೆಯನ್ನು ಬಳಸಿದ ಆದರ್ಶ ಪುರುಷರು.
ನಾವಿಂದು ಎಲ್ಲೆಡೆ ಗಾಂಧಿಜಯಂತಿಯನ್ನು ಆಚರಿಸುತ್ತೇವೆ. ಕೇವಲ ಪೋಟೋ ಪೂಜಿಸಿದರೆ ಆಚರಣೆಯಾಗದು. ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಶ್ರಮ ಜೀವನದಲ್ಲಿ ಒಂದು ಗೌರವ ಭಾವನೆ ಮೂಡುವಂತೆ ದುಡಿಮೆಯನ್ನು ಪ್ರೀತಿಸುವನ್ನು ಕಲಿಸಬೇಕಾಗಿದೆ.ಅನುದಿನವೂ ಪ್ರಾರ್ಥನೆಯು ತನ್ನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ತಿಳುವಳಿಕೆ ನೀಡಬೇಕಾಗಿದೆ.ಇಂದಿಗೂ ಗಾಂಧಿ ಹೆಸರಲ್ಲಿ ಗಾಂಧೀ ಭವನಗಳು.ಶಾಲೆಗಳೂ.ಸ್ವ ಉದ್ಯೋಗ ತರಭೇತಿ ಕೇಂದ್ರಗಳು ಗಾಂಧೀ ಚಿಂತನೆಗಳನ್ನು ಜನರಿಗೆ ತಲುಪಿಸುವ ಕರ್ಯಗಳಲ್ಲಿ ತೊಡಗಿವೆ. ಜಾಗತೀಕರಣದ ಇಂದಿನ ಯುಗದಲ್ಲಿ ಗಾಂಧಿ ಹುಟ್ಟಿದ ನಾಡಿನಲ್ಲಿಯೇ ಜನರು ಗಾಂಧೀ ಚಿಂತನೆಗಳಿಂದ ವಿಮುಖರಾಗುತ್ತಿದ್ದಾರೆಯೇ ಎಂಬ ಆತಂಕ ಕಾಡುತ್ತಿದೆ.
ಇಂಥ ಸಂದರ್ಭದಲ್ಲಿ ಕೇವಲ ಆಚರಣೆಗಷ್ಟೇ ಸೀಮೀತಗೊಳಿಸದೇ ಗಾಂಧೀ ಚಿಂತನೆಗಳನ್ನು ಜನರಿಗೆ ಮಕ್ಕಳಿಗೆ ತಲುಪಿಸುವ ಜೊತೆಗೆ ಎಲ್ಲರೂ ಅವರ ಬದುಕಿನ ಆದರ್ಶಗಳಾಗ ಸತ್ಯ.ನಿಷ್ಠೆ.ಅಹಿಂಸೆ ತತ್ವಗಳ ಜೊತೆಗೆ ಸ್ವದೇಶಿ ನಿರ್ಮಿತ ವಸ್ತುಗಳ ಬಳಸುವ ಮೂಲಕ ದೇಶೀಯ ಚಿಂತನೆಗೆ ಅವಕಾಶ ಕಲ್ಪಿಸಿದರೆ ಬದುಕು ಸಾರ್ಥಕ.ಇಂದು ಜಗತ್ತಿನೆಲ್ಲೆಡೆ ಮಹಾತ್ಮಾಗಾಂಧೀಜಿಯವರ ಸ್ಮರಣೆಗಳು ಜರುಗುತ್ತಿವೆ ಅದಕ್ಕೆ ಕಾರಣ ಅವರ ಬದುಕಿನ ಆದರ್ಶಗಳು.ಅವರ ಬಗ್ಗೆ ಸಾವಿರಾರು ಪುಸ್ತಕಗಳು ರಚನೆಯಾಗಿವೆ.ಅವರ ಜೀವನವನ್ನೇ ತಮ್ಮ ಆದರ್ಶವಾಗಿ ಜೀವಿಸಿದ ಜನರು ಇಂದು ನಮಗೆ ಸಿಗುತ್ತಾರೆ.ಗಾಂಧೀಯಂತೆ ಬದುಕಿನ ಆದರ್ಶವಾದಿಗಳನ್ನು ಕೂಡ ನಾವು ಆದರಿಸಬೇಕು.
ಮಹಾತ್ಮ ಗಾಂಧಿಯವರನ್ನು ಕುರಿತು ಬೆನ್ಕಿಂಗ್ಸಲೀಯವರು ೧೯೮೨ ರಲ್ಲಿ ಗಾಂಧಿ ಎಂಬ ಚಲನಚಿತ್ರದಲ್ಲಿ ಗಾಂಧಿಯಾಗಿ ಅಭಿನಯಿಸುವ ಮೂಲಕ ಈ ಚಲನಚಿತ್ರ ವಿಶ್ವದಾದ್ಯಂತ ಪ್ರಸಿದ್ದಿ ಪಡೆಯಿತು.೧೯೯೬ ರಲ್ಲಿ “ದ ಮೇಕಿಂಗ್ ಆಫ್ ಮಹಾತ್ಮ” ಚಲನಚಿತ್ರದಲ್ಲಿ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಕಳೆದ ೨೧ ವರ್ಷಗಳ ಬದುಕನ್ನು ಕುರಿತು ಚಿತ್ರಿಸಲಾಗಿದ್ದು ೨೦೦೭ ರಲ್ಲಿ “ಗಾಂಧಿ.ಮೈ ಪಾದರ್”ಚಲನಚಿತ್ರದಲ್ಲಿ ಗಾಂಧಿಯವರು ಮತ್ತು ಅವರ ಮಗ ಹರಿಲಾಲ್ ನಡುವಿನ ಸಂಬಂಧವನ್ನು ತೋರಿಸಲಾಗಿದೆ.ಹೀಗೆ ಗಾಂಧೀಜಿಯವರ ಬದುಕನ್ನು ಪುಸ್ತಕಗಳಲ್ಲಷ್ಟೇ ಅಲ್ಲ ಚಲನಚಿತ್ರಗಳಲ್ಲೂ ತೋರಿಸುವ ಮೂಲಕ ಅವರ ಬದುಕಿನ ಆದರ್ಶಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದ್ದು.ಗಾಂಧೀಜಿಯವರ ಬದುಕಿನ ಕೆಲವು ಆದರ್ಶಗಳನ್ನು ಅವರ ನುಡಿಮುತ್ತುಗಳ ಮೂಲಕ ನಾವು ನೋಡಬಹುದು.ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.
• ಒಬ್ಬ ವ್ಯಕ್ತಿಯ ಹಿತ ಎಲ್ಲಾ ಜನರ ಹಿತದಲ್ಲಿದೆ.
• ರೈತ ಮತ್ತು ಕಾರ್ಮಿಕನ ಉದ್ಯೋಗಗಳು ಶ್ರೇಷ್ಟವಾದವುಗಳು
• ಕೆಲಸವಿಲ್ಲದೆ ಕ್ಷಣ ಕಳೆದರೂ ಅದು ಕಳ್ಳತನ ಮಾಡಿದಂತೆ.ಮೈಗಳ್ಳತನವೇ ಮಹಾಪಾಪ.ಅದು ಮನಸ್ಸನ್ನು ಹಾಳುಗೆಡವುತ್ತದೆ.
• ಸಹನೆ ಬೆಳೆಸಿಕೊಂಡವನು ಮಾತ್ರ ಅಹಿಂಸೆಯನ್ನು ಪರಿಪಾಲಿಸಬಲ್ಲ. ಹಿಂಸೆಗೆ ಅಸಹನೆಯೇ ಮೂಲ.ಅಸಹನೆಯಿಂದಲೇ ಎಲ್ಲ ಅಪಘಾತಗಳು ಸಂಭವಿಸುವವು.
• ನೀವು ಬದುಕಿ,ಇತರರನ್ನು ಬದುಕಲು ಬಿಡಿ.ಮತ್ತೊಬ್ಬರ ಬದುಕನ್ನು ಕಸಿಯಲು ಯಾರಿಗೂ ಹಕ್ಕಿಲ್ಲ.
• ಒಳ್ಳೆಯ ಕೆಲಸಗಳೇನಿವೆಯೋ ಅವು ನಿನ್ನಿಂದಲೇ ಶುರುವಾಗಲಿ.
ಲಾಲ್ ಬಹದ್ದೂರ್ ಶಾಸ್ತ್ರೀ
ಉತ್ತರ ಪ್ರದೇಶದ ವಾರಣಾಸಿಯಿಂದ ಏಳು ಕಿಲೋ ಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ ೨, ೧೯೦೪ ರಂದು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ ಜನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರೀಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು. ತಂದೆ ಶಾರದ ಪ್ರಸಾದ ಶ್ರೀವಾತ್ಸವ.ತಾಯಿ.ರಾಮದುಲಾರಿ ದೇವಿ. ಶಾಸ್ತ್ರೀಯವರು ಒಂದೂವರೆ ವರ್ಷದವರಿದ್ದಾಗಲೇ ಅವರ ತಂದೆ ತೀರಿಕೊಂಡರು. ಆಗ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತಮ್ಮ ತವರು ಮನೆಗೆ ಹೋದರು.ಕಿತ್ತು ತಿನ್ನುವ ಬಡತನ.ಪುಟ್ಟ ಹಳ್ಳಿಯಲ್ಲಿ ವಾಸ.ಅವರಿಗೆ ಶಿಕ್ಷಣದ ಸ್ಥಿತಿ ಗಮನಾರ್ಹವಾಗಿರಲಿಲ್ಲ. ಪ್ರಾಥಮಿಕ ಶಿಕ್ಷಣ ಮುಗಿಯುವಷ್ಟರಲ್ಲಿ ಅವರ ಮಾವನ ಮನೆಗೆ ಇವರ ಶಿಕ್ಷಣ ಮುಂದುವರೆಸಲು ಕಳಿಸಲಾಯಿತು. ಅವರ ಪ್ರೌಢ ಶಾಲಾ ಶಿಕ್ಷಣ ಕೂಡ ಕಷ್ಟಗಳಲ್ಲಿ ಸಾಗುತ್ತಿತ್ತು.ಚಪ್ಪಲಿಯಿಲ್ಲದೇ ಬರಿಗಾಲಿನಿಂದ ನಡೆದುಕೊಂಡು ಬಿರು ಬಿಸಿಲಿನಲ್ಲಿ ಕಿಲೋ ಮೀಟರುಗಟ್ಟಲೇ ನಡೆದು ಹೋಗಿ ಶಿಕ್ಷಣ ಕಲಿಯುವಂತಾಗಿತ್ತು.
ಇದೇ ಸಂದರ್ಭದಲ್ಲಿ ಗಾಂಧೀಜಿಯವರು ಸ್ವಾತಂತ್ರö್ಯ ಹೋರಾಟಕ್ಕೆ ಕರೆ ಕೊಟ್ಟ ವಿಷಯದಿಂದ ಪ್ರಭಾವಿತರಾದ ಶಾಸ್ತ್ರೀಯವರು ತಮ್ಮ ವ್ಯಾಸಾಂಗ ನಿಲ್ಲಿಸಿ ಸ್ವಾತಂತ್ರö್ಯ ಹೋರಾಟಕ್ಕೆ ತಮ್ಮನ್ನು ತೊಡಗಿಸಿಕೊಂಡರು.ಆಗ ಅವರಿಗೆ ಹನ್ನೊಂದು ವರ್ಷ ವಯಸ್ಸು.ಇದು ಅವರ ತಾಯಿಯನ್ನು ಚಿಂತೆಗೀಡು ಮಾಡಿತು.ಹೀಗೆ ತಮ್ಮ ಹದಿನಾರನೆಯ ವಯಸ್ಸಿನವರೆಗೆ ಸ್ವಾತಂತ್ರö್ಯದ ಚಟುವಟಿಕೆಗಳಲ್ಲಿ ತೊಡಗಿದರು.ಇವರ ಕಲ್ಲು ಮನಸ್ಸು ಕರಗದೆಂದು ಗೊತ್ತಾಗಿದ್ದ ತಾಯಿ ಅದನ್ನು ತಡೆಯಲಿಲ್ಲ.
ಬ್ರಿಟಿಷ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಣಾಸಿಯ ಕಾಶಿ ವಿದ್ಯಾಪೀಠವನ್ನು ಸೇರುವ ಮೂಲಕ ಅಲ್ಲಿನ ದೇಶದ ಶ್ರೇಷ್ಟ ಬುದ್ಧಿ ಜೀವಿಗಳ ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. “ಶಾಸ್ತ್ರೀ” ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿ ಪದವಿ.ಆದರೆ ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿಯಿತು.
ವೈವಾಹಿಕ ಬದುಕು
೧೯೨೭ ರಲ್ಲಿ ತಮ್ಮ ಹಳ್ಳಿಯ ಪಕ್ಕದ ಹಳ್ಳಿ ಮಿರ್ಜಾಪುರದ “ಲಲಿತಾದೇವಿ”ಯೊಡನೆ ಇವರ ವಿವಾಹವಾಯಿತು.ಇವರ ವಿವಾಹದಲ್ಲಿ ಕೈಮಗ್ಗದ ಬಟ್ಟೆ ಮತ್ತು ಚರಕವನ್ನು ಇವರಿಗೆ ನೀಡಲಾಗಿತ್ತು.ಭಾರತೀಯ ಸಾಂಪ್ರದಾಯದಂತೆ ಇವರ ವಿವಾಹ ಜರುಗಿತು.ಇವರಿಗೆ ಕುಸುಮ.,ಹರಿಕೃಷ್ಣ,ಸುಮನ.ಅನಿಲ.ಸುನಿಲ.ಅಶೋಕ ಎಂಬ ಮಕ್ಕಳು ಜನಿಸಿದರು.
ಸ್ವಾತಂತ್ರ್ಯ ಹೋರಾಟದ ಬದುಕು
ವಿವಾಹ ನಂತರವೂ ಇವರು ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.೧೯೩೦ ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ತೊಡಗಿಸಿಕೊಂಡರು ಇದು ಬಹಳ ತೀವ್ರತರವಾಗಿತ್ತು. ಈ ಸಂದರ್ಭದಲ್ಲಿ ಇವರನ್ನು ಬಂಧಿಸಿದ ಬ್ರಿಟಿಷರು ಏಳು ವರ್ಷಗಳ ಕಾಲ ಕಾರಾಗೃಹದಲ್ಲಿ ಇರಿಸಿದರು.ಇದರಿಂದ ಇವರ ಹೋರಾಟಕ್ಕೆ ಕೆಚ್ಚು ಹೆಚ್ಚಾಯಿತು.೧೯೪೬ ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಇವರ ಶಕ್ತಿಯನ್ನು ಅರಿತ ಸರ್ಕಾರದವರು ಇವರನ್ನು ಉತ್ತರ ಪ್ರದೇಶದ ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.ನಂತರದ ದಿನಗಳಲ್ಲಿ ಇವರು ಗೃಹ ಸಚಿವ ಸ್ಥಾನಕ್ಕೆ ಏರಿದ್ದು ಇತಿಹಾಸ.
ರೈಲ್ವೇ ಸಚಿವ ಸ್ಥಾನಕ್ಕೆ ರಾಜೀನಾಮೆ
೧೯೫೧ ರಲ್ಲಿ ಇವರನ್ನು ದೆಹಲಿಗೆ ಕರೆಸಿಕೊಳ್ಳುವ ಮೂಲಕ ಕೇಂದ್ರ ಮಂತ್ರಿಮಂಡಲ ವಿವಿಧ ಖಾತೆಗಳಲ್ಲಿ ಇವರಿಗೆ ಅವಕಾಶ ನೀಡಲಾಯಿತು.ರೈಲ್ವೆ ಸಚಿವ,ಸಾರಿಗೆ ಸಚಿವ,ಸಾರಿಗೆ ಸಂಪರ್ಕ ಸಚಿವ,ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗೃಹ ಸಚಿವ.ಇಂಥ ಸಂದರ್ಭದಲ್ಲಿ ನಡೆದ ರೈಲ್ವೆ ಅಪಘಾತವೊಂದಕ್ಕೆ ಇವರ ಮೇಲೆ ಜವಾಬ್ದಾರಿ ಎಂದು ಅನಿಸಿದ್ದರಿಂದ ತಮ್ಮ ರೈಲ್ವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇಡೀ ದೇಶದಲ್ಲೇ ಪ್ರಶಂಸೆಗೆ ಪಾತ್ರವಾಯಿತು.ಈ ವಿಚಾರವಾಗಿ ನೆಹರೂರವರು ಮಾತನಾಡುತ್ತ “ಶಾಸ್ತ್ರೀಯವರು ಈ ಅವಘಡಕ್ಕೆ ಜವಾಬ್ದಾರರಲ್ಲ.ಅವರ ಉನ್ನತ ಆದರ್ಶಗಳು ದೃಢ ನಿಷ್ಠೆಗಳು ಎಲ್ಲರಿಗೂ ಮಾದರಿ” ಎಂದು ಹೇಳಿದರು.
ಯುದ್ದದ ಘಟನೆಗಳು
ಇವರು ಪ್ರಧಾನಿಯಾಗಿದ್ದು ಅಲ್ಪ ಅವಧಿ ಆದರೆ ಎರಡು ಪ್ರಮುಖ ಯುದ್ದಗಳ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಹಲವು ಪ್ರಯತ್ನಗಳನ್ನು ಅವರ ಮಾಡಬೇಕಾಯಿತು.೧೯೬೨ ರ ಚೀನಾ ಯುದ್ದದ ಸೋಲು ೧೯೬೫ ರ ಪಾಕಿಸ್ತಾನದ ವಿರುದ್ದದ ಗೆಲುವು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಶಾಸ್ತ್ರೀಯವರು ತಳೆದ ನಿಲುವು ವಿಶ್ವಸಂಸ್ಥೆ ಭಾರತಕ್ಕೆ ಸಹಾಯ ಹಸ್ತ ಚಾಚುವಂತೆ ಮಾಡಿತಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಇವರು ಕೇವಲ ಹದಿನೇಳು ತಿಂಗಳು ಪ್ರಧಾನಿಯಾಗಿದ್ದು. ಸ್ವತಃ ಒಂದು ಹೊತ್ತಿನ ಉಪವಾಸಕ್ಕೆ ಕರೆ ಕೊಡುವ ಮೂಲಕ ದೇಶದ ಆರ್ಥಿಕತೆಗೆ ಜನರಿಗೆ ಪ್ರೇರಣೆಯಾದರು.ಅಷ್ಟೇ ಅಲ್ಲ “ ಜೈ ಹಿಂದ್,ಜೈಜವಾನ್ ಜೈ ಕಿಸಾನ್” ಘೋಷಣೆ ದೇಶದ ಯೋಧ ಮತ್ತು ರೈತನ ಬಗ್ಗೆ ಅವರಿಗಿರುವ ಅಪಾರ ಕಾಳಜಿಗೆ ಹಿಡಿದ ಕೈಗನ್ನಡಿ.೧೯೬೬ ಜನೆವರಿಯಲ್ಲಿ ಮಹಮ್ಮದ ಅಯೂಬ್ ಖಾನ್ ಅಲೆಕ್ಸ ನಿಕೊಯೆವಿಟ್ ಕೊಸಿಜಿನ್ ಅವರಿಂದ ಆಯೋಜಿಸಲಾದ ತಾಷ್ಕೆಂಟ್ ಒಪ್ಪಂದದಲ್ಲಿ ಭಾಗವಹಿಸಿದ ಶಾಸ್ತ್ರೀ. ಅದರ ಮರುದಿನವೇ ಹೃದಯಾಘಾತದಿಂದ ಸಾವನ್ನಪ್ಪಿದರು.
ಪಾರದರ್ಶಕ ವ್ಯಕ್ತಿತ್ವ.
ಇವರು ಪ್ರಧಾನಿಯಾಗಿದ್ದ ಸಂದರ್ಭ ಒಂದು ದಿನ ಇವರ ಮಗ ಸುನೀಲ್ ಶಾಸ್ತ್ರೀ ವೈಯುಕ್ತಿಕ ಕಾರಣಕ್ಕೆ ಕಾರನ್ನು ಬಳಸಿಕೊಂಡಿದ್ದ.ಇದನ್ನು ಕಂಡ ಶಾಸ್ತ್ರೀಯವರು ಚಾಲಕನನ್ನು ಕರೆದು ಅವನು ಕ್ರಮಿಸಿದ ದೂರ ಅದರ ವೆಚ್ಚ ತಿಳಿದು ಆ ಹಣವನ್ನು ತಮ್ಮ ಸ್ವಂತ ಹಣದಿಂದ ಕಟ್ಟಿದ್ದು ಅವರ ಪಾರದರ್ಶಕ ವ್ಯಕ್ತಿತ್ವಕ್ಕೆ ಒಂದು ನಿದರ್ಶನ.ಸರಕಾರದ ಹಣ ಯಾವತ್ತೂ ಪೋಲು ಆಗಲು ಅನಗತ್ಯ ವೆಚ್ಚಕ್ಕೆ ಅವಕಾಶ ನೀಡದಂತೆ ಆಡಳಿತ ನಡೆಸಿದ ಶಾಸ್ತ್ರೀಯವರು ಇಂದಿಗೂ ಮಾದರಿ.ಬಡತನದಲ್ಲಿ ಹುಟ್ಟಿ ಬಡತನದ ಅನುಭವದಲ್ಲಿ ಬೆಳೆದು ಜಗತ್ತಿಗೆ ತಮ್ಮ ಆದಶದ ಬದುಕನ್ನು ನಿಷ್ಠೆಯಿಂದ ಬದುಕುವ ಮೂಲಕ ಬದುಕಿನ ಯಾತ್ರೆ ಮುಗಿಸಿದ ಶಾಸ್ತ್ರೀ ನಿಧನರಾದಾಗ ಅವರ ಬ್ಯಾಂಕ್ ಖಾತೆಯಲ್ಲಿದ್ದಿದ್ದು ಕೇವಲ ಒಂದು ಸಾವಿರ ರೂಪಾಯಿಗಳು ಮಾತ್ರ.
ಸತ್ಯ.ಸರಳತೆ,ಪ್ರಾಮಾಣಿಕತೆಗಳ ಪಾಠವನ್ನು ಮೈಗೂಡಿಸಿಕೊಂಡಿದ್ದ ಶಾಸ್ತ್ರೀಜಿ ಅವರ ಸರಳ ಪ್ರಾಮಾಣಿಕ ಜೀವನ ಇಂದಿನ ಜನರಿಗೆ ದಾರಿದೀಪವಾಗಲಿ.ಅವರು ನಡೆದು ಬಂದ ದಾರಿಯಲ್ಲಿ ಎಲ್ಲರೂ ಬದುಕನ್ನು ರೂಢಿಸಿಕೊಳ್ಳುವಂತಾಗಲಿ,ಅವರ ಆತ್ಮಕ್ಕೆ ಶಾಂತಿ ಕೋರೋಣ.
ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ತಾಲೂಕಃಸವದತ್ತಿ ಜಿಲ್ಲೆಃಬೆಳಗಾವಿ
೯೪೪೯೫೧೮೪೦೦ ೮೯೭೧೧೧೭೪೪೨