ಲೇಖನ :- ಜ್ಯೇಷ್ಟಾಗೌರಿ ಕಥೆಯ ಹಿನ್ನಲೆ
ಕೈಲಾಸ ದಲ್ಲಿ ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಿಗೆ ಕೇಳುತ್ತಾಳೆ. ಜನರಿಗೆ ಮತ್ತು ಸ್ತ್ರೀಯರಿಗೆ ಸೌಭಾಗ್ಯ, ಸಂಪತ್ತು, ಇಷ್ಟವಾದ ಕಾರ್ಯಗಳು ಇಡೇರಿಸುವ ಒಂದು ವೃತ ಕೇಳುತ್ತಾಳೆ.
ಶಂಕರನು ಮುಗಳ್ನಗುತ್ತಾ , ಹೇಳುತ್ತಾನೆ. ಹೇ! ಪಾರ್ವತಿ ಜ್ಯೇಷ್ಟ ದೇವಿಯ ವೃತವಿದೆ.ಈ ವೃತವನ್ನು ಸುಹಾಸಿನಿಯರು ಮಾಡಿದರೆ; ಮುಕ್ತಿಯನ್ನು ಕೊಡುವುದಲ್ಲದೇ; ಸುಖ,ಇಷ್ಟಗಳನ್ನು ಹೊಂದುವಳು ಎಂದು ಹೇಳುತ್ತಾನೆ.
ಆಗ ಪಾರ್ವತಿಯು ಪತಿಯಾದ ಶಿವನಿಗೆ ,ವೃತದ ವಿಧಿವಿಧಾನ ತಿಳಿಸಬೇಕೆಂದು ಕೇಳಿಕೊಳ್ಳುತ್ತಾಳೆ.
ಈ ವೃತ ಮಾಡಬೇಕಾದರೆ ಮುನಿಗಳು ಇರುವ ಸ್ಥಾನಕ್ಕೆ ಹೋಗಿ ವೃತ ಆಚರಿಸಿದರೆ ಶ್ರೇಷ್ಟ ಎಂದು ಹೇಳುತ್ತಾನೆ.
ಅದರಂತೆ ಪಾರ್ವತಿ ಕೈಲಾಸದಿಂದ ಧರೆಗೆ ಬಂದು ಗಂಗಾ ನದಿಯ ತೀರದಲ್ಲಿದ್ದ ಋಷಿಗಳ ಆಶ್ರಮಕ್ಕೆ
ಬಂದು; ಋಷಿಗಳ ಮುಂದೆ ಶಿವನು ಹೇಳಿದ ಎಲ್ಲ ವಿಷಯಗಳನ್ನು ಹೇಳುತ್ತಾಳೆ. ಆಗ ಋಷಿಗಳು ಜ್ಯೇಷ್ಟಾ ಗೌರಿಯ ವೃತ ವಿಧಿ ವಿಧಾನ ಹೇಳುತ್ತಾರೆ.
ನಾನು ಲೋಕಾರ್ಥವಾಗಿ ಹೇಳುತ್ತೆನೆ ಕೇಳು.ವರ್ಷಾಗಾಲದಲ್ಲಿ ಬರುವ ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ,ಜ್ಯೇಷ್ಟಾ ನಕ್ಷತ್ರವಿರುವ ದಿನ ಈ ವೃತ ಮಾಡಬೇಕು.ಅಷ್ಟಮಿ ದಿನ ಜ್ಯೇಷ್ಟ ನಕ್ಷತ್ರ ಪ್ರಾಪ್ತವಾದರೆ ಒಳ್ಳೆಯದಲ್ಲವೆಂದು ; ಹಾಗೇ
ಅಷ್ಟಮಿ ದಿನ ಜ್ಯೇಷ್ಟ ನಕ್ಷತ್ರ ಇಲ್ಲದಿದ್ದರೆ ಎರಡನೇ ದಿನದ ಸುರ್ಯೋದಯದದಿಂದ ಮಧ್ಯಾಹ್ನವರೆಗೆ ಇದ್ದರೆ ಅಂದು ಮಾಡಬೇಕು. ಅನುರಾಧಾ ನಕ್ಷತ್ರದ ಮೇಲೆ ಅಹ್ವಾನ ಮಾಡಿ ಪೂಜಿಸಬೇಕು. ಮೂಲಾ ನಕ್ಷತ್ರದ ಮೇಲೆ ಜ್ಯೇಷ್ಟಾ ದೇವಿಗೆ, ನೈವೀದ್ಯ ತೋರಿಸಿ ವಿಸರ್ಜೀಸಬೇಕು.
ಪೂಜೆಯ ವಿವರಣೆ:-
ಮುತ್ತೈದೆಯರಿಗೆ ಅಷ್ಟ ಸೌಭಾಗ್ಯಗಳನ್ನು ನೀಡಲು ಸಾಕ್ಷಾತ್ ಶಿವನ ಪತ್ನಿ ಗೌರಿಯು ಭೂಲೋಕಕ್ಕೆ ಬರುವ ದಿನವೇ ಭಾದ್ರಪದ ಮಾಸದ ಅಷ್ಟಮಿ ತಿಥಿ. ಭಾದ್ರಪದ ಮಾಸವೆಂದರೆ ಶಿವನ ಪರಿವಾರವೇ ಭೂಲೋಕಕ್ಕೆ ಬಂದು ಪೂಜೆಗೊಳ್ಳುವ ಮಾಸ. ಚತುರ್ಥಿಯೆಂದು ಗಣಪನಿಗೆ ಪೂಜೆಯಾದರೆ, ಅಷ್ಟಮಿಯಂದು ಗೌರಿಗೆ ಪೂಜೆ. ರಾಜ್ಯದ ಎಲ್ಲ ಭಾಗಗಳಲ್ಲಿಯೂ ಗೌರಿಯನ್ನು ಪೂಜಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಅಷ್ಟಮಿ ಗೌರಿ ಪೂಜೆ ವಿಶೇಷ ಮತ್ತು ವಿಭಿನ್ನವಾದುದು. ಇಲ್ಲಿನ ಆಚರಣೆ ಮಹಾರಾಷ್ಟ್ರದ ಸಂಪ್ರದಾಯದ ಪ್ರಭಾವಕ್ಕೆ ಒಳಪಟ್ಟಿದೆ. ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಅಷ್ಟಮಿ ತಿಥಿಯ ಅನುರಾಧಾ ನಕ್ಷತ್ರದಂದು ಗೌರಿಯನ್ನು ಆಹ್ವಾನಿಸುತ್ತಾರೆ.
ಎರಡನೆಯ ದಿನ ಜ್ಯೇಷ್ಠಾ ನಕ್ಷತ್ರದಂದು ಜ್ಯೇಷ್ಠಾ ಗೌರಿಯ ಪೂಜೆ ನಡೆಯುತ್ತದೆ. ಹೊಸ ಮಡಿಕೆಗೆ ಅಲಂಕಾರ ಮಾಡಿ ಗೆಜ್ಜೆವಸ್ತ್ರ, ಹೂ, ಹಾರ, ಗೌರಿಯನ್ನು ಅತ್ಯಂತ ಸುಂದರವಾಗಿ ಅಲಂಕಾರಿಸುತ್ತಾರೆ. ಅಂದು ಗೌರಿಗೆ ಪ್ರಿಯವಾದ ಹೋಳಿಗೆ, ಕರಿಗಡಬು, ಪಾಯಸ, ಕರ್ಜಿಕಾಯಿ, ಚಕ್ಕುಲಿ, ಕೋಡುಬಳೆ, ಕೋಸಂಬರಿ ಹೀಗೆ ತರಹ ತರಹದ ಪಕ್ವಾನ್ನಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
ಗೌರಿ ಮಡಿಕೆಯಲ್ಲಿ ಎಲೆ ಅಡಿಕೆ ದಕ್ಷಿಣೆ ಸಹಿತ, ಹೊಸ ಹತ್ತಿಯನ್ನು ನೂಲು ತೆಗೆದು ದಾರಗಳನ್ನು ಇಡುತ್ತಾರೆ. ಬಂಧುಬಾಂಧವರನ್ನು ಆಹ್ವಾನಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ಮೂರನೆಯ ದಿನ ಮೂಲಾ ನಕ್ಷತ್ರದಂದು ನಿಸರ್ಗಪ್ರಿಯಳಾದ ಗೌರಿಯನ್ನು ವಿಸರ್ಜಿಸಿ
ಗೌರಿ ಮಡಿಕೆಯಲಿದ್ದ ನೂಲನ್ನು ತಗೆದು , ಜೇಷ್ಟಾ ಗೌರಿಯ ಕಥೆಯನ್ನು ಕೇಳುತ್ತಾ , ಆ ನೂಲಿಗೆ ಗರಿಕೆ, ವೀಳ್ಯದೆಲೆ, ಮಾವು, ಅರಿಶಿಣ, ರೇಷ್ಮೆ ಸಂಪಿಗೆ ಎಲೆ ಹಾಗೂ ಹೂಗಳಿಂದ ಹೊಸ ನೂಲಿಗೆ ಕಟ್ಟುತ್ತಾರೆ. ೧೬ ಎಳೆ ನೂಲು ಒಂದು ಜೊತೆ ,೫ ಎಳೆ, ೭ ಎಳೆ,೮ ಎಳೆ ಮತ್ತು ಗಂಡು ಮಕ್ಕಳಿದ್ದರೆ ಮತ್ತೊಂದು ೮ ಎಳೆ, ಹೆಣ್ಣು ಮಕ್ಕಳುಇದ್ದರೆ ಮತ್ತೊಂದು ೫ ಎಳೆ , ಹೀಗೆ ವಿವಿಧ ಎಳೆಗಳ ಹಾರವನ್ನು ಮಾಡಿ ಹಿರಿಯ ಮುತ್ತೈದೆಯರ ಹತ್ತಿರ ಕಟ್ಟಿಸಿಕೊಳ್ಳುತ್ತಾರೆ. ಇದನ್ನು ಅಷ್ಟಮಿ ದಾರ ಎಂದು ಕರೆಯುತ್ತಾರೆ. ಗೌರಿ ಹೆಸರಿನಲ್ಲಿ ದಾರವನ್ನು ಧರಿಸಿಕೊಂಡು ಅಖಂಡ ಸೌಭಾಗ್ಯ ನೀಡೆಂದು ಬೇಡಿಕೊಳ್ಳುತ್ತಾರೆ.
ಇದೇ ಜೇಷ್ಟಾಗೌರಿಯ ಕಥೆಯಹಿನ್ನಲೆ
🖋 ಪ್ರಿಯಾ ಪ್ರಾಣೇಶ ಹರಿದಾಸ
. (ಕವಿಯತ್ರಿ, ಬರಹಗಾರ್ತಿ )