ಅಮ್ಮಿನಬಾವಿಯಲ್ಲಿ ಶ್ರೀವೀರಭದ್ರ ದೇವರ ಜಯಂತ್ಯುತ್ಸವದಲ್ಲಿ ಅಭಿನವ ಶಾಂತಲಿಂಗ ಶ್ರೀ ನುಡಿ
‘ವೀರಭದ್ರ ಶಿವ ಸಂಸ್ಕೃತಿಯ ಸಂವರ್ಧಕ’
ಧಾರವಾಡ: ಭಕ್ತಗಣದ ಬದುಕಿನಲ್ಲಿ ಪರಿಶುದ್ಧತೆಯನ್ನು ಹುಟ್ಟುಹಾಕಿ ನೈತಿಕಬಲವನ್ನು ಅನುಗ್ರಹಿಸುವ ಶ್ರೀವೀರಭದ್ರ ದೇವರು ಶಿವ ಸಂಸ್ಕೃತಿಯ ಸಂವರ್ಧಕರೂ ಆಗಿದ್ದಾರೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಇಲ್ಲಿಗೆ ಸಮೀಪದ ಅಮ್ಮಿನಬಾವಿ ಗ್ರಾಮದ ಶ್ರೀವೀರಭದ್ರ ದೇವರ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
ಶ್ರೀರಂಭಾಪುರಿ ವೀರಸಿಂಹಾಸ ಮಹಾಸಂಸ್ಥಾನ ಜಗದ್ಗುರು ಪೀಠದ ಗೋತ್ರಪುರುಷನಾಗಿರುವ ಶ್ರೀವೀರಭದ್ರ ದೇವರು ಪ್ರತಿಯೊಬ್ಬರೂ ಧರ್ಮದ ರಹದಾರಿಯಲ್ಲಿ ಮುನ್ನಡೆಯಲು ಕೃಪಾಕಾರುಣ್ಯದ ಬೆಳಕನ್ನು ತುಂಬುತ್ತಾರೆ ಎಂದೂ ಅವರು ಹೇಳಿದರು.
ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ, ಅಮ್ಮಿನಬಾವಿಯ ಶ್ರೀವೀರಭದ್ರೇಶ್ವರ ದೇವಾಲಯದ ಪ್ರಧಾನ ಅರ್ಚಕ ವೀರಯ್ಯ ಹಿರೇಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ರುದ್ರಪ್ಪ ಕಂಬಾರ, ರೇಣುಕಾಚಾರ್ಯ ಹಿರೇಮಠ, ಗಿರೀಶ ಗದಗಿನ, ಮೃತ್ಯುಂಜಯ ಹಿರೇಮಠ, ನೀಲಪ್ಪ ಹುಲ್ಲೂರ, ಗುರುಬಸವರಾಜ ಹಿರೇಮಠ, ಚೆನ್ನಪ್ಪ ಹೂಲಿ, ಸಮೃದ್ಧ ಹಿರೇಮಠ, ಸಿದ್ಧಾರೂಢ ತೇಗೂರ, ವೇದಾ ಯರಗಂಬಳಿಮಠ, ಈರಣ್ಣ ದೊಡವಾಡ, ಭಾಗ್ಯಾ ಯರಗಂಬಳಿಮಠ, ಪ್ರೀತಂ ಯಡಳ್ಳಿಮಠ,
ಭರತ್ ಹಿಡಕಿಮಠ, ಅಮೋಘ ಯಡಳ್ಳಿಮಠ, ಬಸವರಾಜ ಪತ್ತಾರ ಇತರರು ಇದ್ದರು. ಜಯಂತಿಯ ಅಂಗವಾಗಿ ಶ್ರೀವೀರಭದ್ರ ದೇವರಿಗೆ ರುದ್ರಾಭಿಷೇಕ ಮಹಾಪೂಜೆ, ಆರತಿ, ಪಲ್ಲಕ್ಕಿ ಸೇವೆಗಳು ಜರುಗಿದವು.