ಸೆ. 19 : ಶ್ರೀವೀರಭದ್ರ ದೇವರ ಜಯಂತಿ ಮಹೋತ್ಸವ
ಧಾರವಾಡ: ಶಿವಸಂಸ್ಕೃತಿಯ ಮೂಲಪುರುಷನಾಗಿರುವ ಮತ್ತು ಅದ್ಭುತ ಕ್ರಿಯಾಶಕ್ತಿಯನ್ನು ಹೊಂದಿರುವ ಶ್ರೀವೀರಭದ್ರ ದೇವರ ಜಯಂತಿ(ಉದ್ಭವ) ಮಹೋತ್ಸವವನ್ನು ಭಾದ್ರಪದ ಮಾಸದ ಮೊದಲ ಮಂಗಳವಾರ (ಸಪ್ಟಂಬರ್-19 ರಂದು) ರಾಷ್ಟ್ರವ್ಯಾಪಿಯಾಗಿ ಏಕಕಾಲಕ್ಕೆ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಗಳು ಜಂಟಿಯಾಗಿ ತಿಳಿಸಿವೆ.
ಕಳೆದ 5 ವರ್ಷಗಳಿಂದಲೂ ಶ್ರೀವೀರಭದ್ರದೇವರ ಜಯಂತಿ ಮಹೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಶೃದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದ್ದು, ಈ ವರ್ಷವೂ ಸಹ ಮನೆ, ಗ್ರಾಮ, ನಗರ, ತಾಲೂಕು, ಜಿಲ್ಲೆ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮುಂತಾದ ರಾಜ್ಯಗಳಲ್ಲಿಯೂ ಶ್ರೀವೀರಭದ್ರ ದೇವರ ಜಯಂತಿ ಮಹೋತ್ಸವವನ್ನು ಆಚರಿಸುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ ಶ್ರೀವೀರಭದ್ರ ದೇವರ ಜಯಂತಿ ಮಹೋತ್ಸವದ ದಿನ (ಸ.19) ಶ್ರೀವೀರಭದ್ರದೇವರ ದೇವಾಲಯಗಳಲ್ಲಿ ಏಕಾದಶರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರ, ಗುಗ್ಗಳ ಸೇವೆ ಸೇರಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲು, ಜೊತೆಗೆ ಶ್ರೀವೀರಭದ್ರೇಶ್ವರ ದೇವರ ದೇವಾಲಯಗಳ ಸೇವಾ ಸಮಿತಿಗಳು, ಟ್ರಸ್ಟಗಳು ಪ್ರಾತಃಕಾಲದಲ್ಲಿ ವಿಶೇಷ ಗುಗ್ಗಳ, ಸಂಬಾಳ ವಾದ್ಯ ವೈಭವ ಹಾಗೂ ಮುನ್ನಾದಿನ ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ ಹಾಗೂ ಸಾಧ್ಯವಿರುವ ಕಡೆಗಳಲ್ಲಿ ದಾಸೋಹ ಸೇವೆ ಹಮ್ಮಿಕೊಳ್ಳುವಂತೆ ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣ ಕಲಬುರ್ಗಿ, ಉಪಾಧ್ಯಕ್ಷ ಡಾ.ಗುರುಮೂರ್ತಿ ಯರಗಂಬಳಿಮಠ, ಸಂಚಾಲಕರುಗಳಾದ ಗಿರೀಶಕುಮಾರ ಬುಡರಕಟ್ಟಿಮಠ ಹಾಗೂ ಪಿ.ಎಂ.ಚಿಕ್ಕಮಠ, ವಿವಿಧ ಪದಾಧಿಕಾರಿಗಳಾದ ರಮೇಶ ಉಳ್ಳಾಗಡ್ಡಿ, ಪ್ರಕಾಶ ಅಂದಾನಿಮಠ, ಜಿಲ್ಲಾಧ್ಯಕ್ಷ ಗದಗಯ್ಯ ಹಿರೇಮಠ(ಜೀವಿ), ರಾಚಯ್ಯ ಮಠಪತಿ, ಅನಿಲ ಉಳ್ಳಾಗಡ್ಡಿ, ಚೆನ್ನಯ್ಯ ಚೌಕಿಮಠ, ಶಂಕರ ಕುರ್ತಕೋಟಿ, ಡಾ.ಎಚ್.ವ್ಹಿ. ಬೆಳಗಲಿ, ಡಾ. ರಾಮು ಮೂಲಗಿ ಮತ್ತು ಇತರರು ಮನವಿ ಮಾಡಿದ್ದಾರೆ.