ಸಿನಿಮಾ ಮಾದರಿಯಲ್ಲಿಯೇ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಶಿಕ್ಷಕ ಹಾಗೂ ಖ್ಯಾತ ಜೋತಿಷ್ಯನೊಬ್ಬರನ್ನು ಬಂಧಿಸಿದ ಪೋಲಿಸರು..
ನಿವೃತ್ತ ಉಪ ತಹಶಿಲ್ದಾರರನ್ನೆ ಖೆಡ್ಡಕ್ಕೆ ಕೆಡವಿದ ಶಿಕ್ಷಕರ ತಂಡ..
ಬೆಂಗಳೂರು: ನಿವೃತ್ತ ಉಪ ತಹಶೀಲ್ದಾರ್ ಬಿ. ಹೊಂಬಯ್ಯ ಅವರಿಂದ 1.39 ಕೋಟಿ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ನೆಲಮಂಗಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲದ ಎನ್. ನಾಗರಾಜು ಹಾಗೂ ಬೆಂಗಳೂರು ಬನಶಂಕರಿಯ ಹರೀಶ್ ಶಾಸ್ತ್ರಿ ಬಂಧಿತರು. ಇವರಿಬ್ಬರು ಸಂಚು ರೂಪಿಸಿ ಹೊಂಬಯ್ಯ ಅವರಿಂದ ಹಣ ಪಡೆದು ವಂಚಿಸಿದ್ದರು. ಹೊಂಬಯ್ಯ ಅವರು ನೀಡಿದ್ದ ದೂರು ಆಧರಿಸಿ ಜುಲೈ 6ರಂದು ಎಫ್ಐಆರ್ ದಾಖಲಿಸಿ ಕೊಳ್ಳಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಕರಣ ದಾಖಲಾಗುತ್ತಿದ್ದಂತೆ ದಾಖಲೆಗಳ ಪರಿಶೀಲನೆ ನಡೆಸಲಾಗಿತ್ತು. ಜೊತೆಗೆ, ಸೂಕ್ತ ಪುರಾವೆಗಳನ್ನು ಸಂಗ್ರಹಿಸಿ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಿದ್ದು, ಅವರನ್ನು ವಿಚಾರಣೆ ನಡೆಸಬೇಕಿದೆ’ ಎಂದು ತಿಳಿಸಿವೆ.
‘ಆರೋಪಿ ನಾಗರಾಜು, ಶಿಕ್ಷಕ. ಇನ್ನೊಬ್ಬ ಆರೋಪಿ ಶಾಜಿ ಶಾಸ್ತಿ, ಜ್ಯೋತಿಷಿ ಯೂಟ್ಯೂಬ್ ಚಾನೆಲ್ಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು’ ಎಂದು ಹೇಳಲಾಗುತ್ತಿದೆ.
2022ರಲ್ಲಿ ಹಣ ಪಡೆದಿದ್ದ ಆರೋಪಿಗಳು: ‘ಬಿ. ಹೊಂಬಯ್ಯ ಅವರಿಗೆ 2022ರಲ್ಲಿ ನಾಗರಾಜು ಹಾಗೂ ಹರೀಶ್ ಪರಿಚಯವಾಗಿತ್ತು. 1 49 ಕೋಟಿ ಮೌಲ್ಯದ SBI BANK ಡಿಡಿ ತೋರಿಸಿದ್ದ ಆರೋಪಿಗಳು, ‘ಡಿ.ಡಿ.ಯನ್ನು ನಗದು ಮಾಡಲು ಹಣದ ಅವಶ್ಯಕತೆ ಇದೆ. ನೀವು ಕೊಟ್ಟರೆ, ಬಡ್ಡಿ ಸಮೇತ ಹಣ ವಾಪಸು ಕೊಡುತ್ತೇವೆ’ ಎಂಬುದಾಗಿ ಕೋರಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿಗಳ ಮಾತು ನಂಬಿದ್ದ ಹೊಂಬಯ್ಯ, 1.39 ಕೋಟಿ ನೀಡಿದ್ದರು. ಆರು ತಿಂಗಳಾದರೂ ಆರೋಪಿಗಳು ಹಣ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ನೊಂದ ಹೊಂಬಯ್ಯ ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿವೆ.
ಟಿಕೆಟ್ ಆಮಿಷ ಶಂಕೆ: ‘ಡಿ.ಡಿ ಬಳಸಿ ನಗದು ಡ್ರಾ ಮಾಡಿಕೊಳ್ಳಲು ಹಣ ನೀಡಿದ್ದಾಗಿ ಹೊಂಬಯ್ಯ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಇದರ ಹಿಂದೆ ಚುನಾವಣೆ ಟಿಕೆಟ್ ಆಮಿಷದ ಶಂಕೆ ಇದೆ. ಆದರೆ, ಈ ಬಗ್ಗೆ ದೂರುದಾರರು ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲಸದಿಂದ ನಿವೃತ್ತರಾದ ನಂತರ ಹೊಂಬಯ್ಯ ಅವರು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಆರೋಪಿಗಳು ಹಣ ಪಡೆದಿದ್ದ ಮಾಹಿತಿ ಇದೆ. ಆದರೆ, ಇದಕ್ಕೆ ಸಂಬಂಧಪಟ್ಟ ಪುರಾವೆಗಳು ಸದ್ಯಕ್ಕೆ ಸಿಕ್ಕಿಲ್ಲ’