ಗುರು ಬ್ರಹ್ಮ!ಗುರು ವಿಷ್ಣು! ಗುರು ದೇವೋ ಮಹೇಶ್ವರ ಎಂಬ ಪದಕ್ಕೆ ತದ್ ವಿರುದ್ದವಾಗಿ ನಡೆದುಕೊಂಡಿದ್ದಾರೆ ಈ ಶಿಕ್ಷಕ..
ಮಕ್ಕಳ ಭವಿಷ್ಯ ನಿರೂಪಿಸಬೇಕಾದ ಶಿಕ್ಷಕರೇ ದಾರಿ ತಪ್ಪಿ ನಡೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ..
ಮಂಡ್ಯ: ಪಾಠದ ನೆಪದಲ್ಲಿ ಹೆಣ್ಣು ಮಕ್ಕಳಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಖ್ಯ ಶಿಕ್ಷಕನ ವಿರುದ್ಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದೆ.
ನಿಡಘಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವರಾಂ (54) ಪ್ರಕರಣದ ಆರೋಪಿಯಾಗಿದ್ದಾನೆ. ಪ್ರತಿನಿತ್ಯ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪಾಠ ಹೇಳಿ ಕೊಡುವ ನೆಪದಲ್ಲಿ ಪಕ್ಕಕ್ಕೆ ಕರೆದುಕೊಂಡು ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟುವುದು, ಸಲಿಗೆಯಿಂದ ಮೈ ಮೇಲೆಲ್ಲಾ ಕೈ ಹಾಕುವುದು, ಕೆಟ್ಟ ಕೆಟ್ಟ ರೀತಿಯಲ್ಲಿ ಮಾತನಾಡುತ್ತ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ತಮ್ಮ ಪಾಲಕರಲ್ಲಿ ಹೇಳಿಕೊಂಡಿದ್ದಾರೆ.
ಮುಖ್ಯ ಶಿಕ್ಷಕನ ಈ ಲೈಂಗಿಕ ಕಿರುಕುಳದ ಬಗ್ಗೆ ಬಹಳಷ್ಟು ವಿದ್ಯಾರ್ಥಿನಿಯರು ಮನೆಯಲ್ಲಿ ಹೇಳಿಕೊಳ್ಳಲು ಹಿಂಜರಿದಿದ್ದು, ಕೆಲ ವಿದ್ಯಾರ್ಥಿನಿಯರು ಹೇಳಿಕೊಂಡಾಗ ಪೋಷಕರ ಗಮನಕ್ಕೆ ಬಂದಿದೆ. ಈ ಬಗ್ಗೆ ಪೋಷಕರು ಹಲವು ಬಾರಿ ಶಾಲೆಯ ಇತರೇ ಶಿಕ್ಷಕರ ಗಮನಕ್ಕೂ ತಂದರು ಸಹ ಮುಖ್ಯ ಶಿಕ್ಷಕನ ವರ್ತನೆ ಮುಂದುವರೆದಿದೆ. ಇದರಿಂದ ಬೇಸತ್ತ ಪೋಷಕರು ಶನಿವಾರ ಬೆಳಿಗ್ಗೆ ಮದ್ದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದ ಪರಿಣಾಮ ಮುಖ್ಯ ಶಿಕ್ಷಕ ಶಿವರಾಂ ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮಂಗಳಾ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸಹ ಶಿಕ್ಷಕರು, ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಪೋಲೀಸ್ ತನಿಖೆಯಿಂದ ಮುಖ್ಯ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾದ ಕೂಡಲೇ ಇಲಾಖೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಓ ಸಿ.ಎಚ್.ಕಾಳೀರಯ್ಯ ಸ್ಪಷ್ಟಪಡಿಸಿದರು.