ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರ ನುಡಿ
ಜಗದ್ಗುರು ರೇಣುಕರ ತತ್ವಗಳಲ್ಲಿ ಮನುಕುಲದ ವಿಕಾಸವಿದೆ’
ಧಾರವಾಡ : ಶಿವಕಾವ್ಯವಾದ ಸಿದ್ಧಾಂತ ಶಿಖಾಮಣಿಯ ಮೂಲಕ ಅಹಿಂಸೆ, ಸತ್ಯ, ಅಸ್ತೇಯಾದಿ ದಶಧರ್ಮ ಸೂತ್ರಗಳನ್ನು ಬೋಧಿಸಿರುವ ಆದಿ ಜಗದ್ಗುರು ರೇಣುಕಾಚಾರ್ಯರ ತತ್ವಗಳಲ್ಲಿ ಮನುಕುಲದ ವಿಕಾಸವೇ ಅಡಗಿದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಜರುಗಿದ ನಾಲವತ್ತವಾಡದ ಶ್ರೀವೀರೇಶ್ವರ ಶರಣರ ಪುರಾಣ ಪ್ರವಚನದ ಮಂಗಲದ ಅಂಗವಾಗಿ ಹಮ್ಮಿಕೊಂಡಿದ್ದ ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬದುಕಿನಲ್ಲಿ ಎದುರಾಗುವ ಎಲ್ಲ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಇಷ್ಟಲಿಂಗವು ಕರುಣಿಸುತ್ತದೆ. ನಿತ್ಯದ ಇಷ್ಟಲಿಂಗಾರ್ಚನೆಯಿಂದ ಶಾಂತಿ, ಸಮಾಧಾನ ಹಾಗೂ ಸಂತೃಪ್ತಿ ಲಭಿಸುತ್ತದೆ. ಇಂತಹ ಇಷ್ಟಲಿಂಗವನ್ನು ಸಮಸ್ತ ಭಕ್ತ ಸಂಕುಲಕ್ಕೆ ಕರುಣಿಸಿದ ಕೀರ್ತಿ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಶ್ರಾವಣ ಮಾಸದಾದ್ಯಂತ ಪುರಾಣ ಪ್ರವಚನ ನೀಡಿದ ದೊಡವಾಡ ಹಿರೇಮಠದ ಶ್ರೀಜಡೇಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವರಿಗೆ ಇಷ್ಟಲಿಂಗವೇ ಆರಾಧ್ಯ ದೈವ ಎಂಬುದನ್ನು ತೋರಿಸಿಕೊಟ್ಟ ಶ್ರೀಜಗದ್ಗುರು ರೇಣುಕಾಚಾರ್ಯರು ಶಿವಜ್ಞಾನದ ಬೆಳಕು ಬೀರಿದ ಪರಮಾಚಾರ್ಯರು. ವೀರಶೈವ ಧರ್ಮದ ತತ್ವಗಳಲ್ಲಿ ಇಷ್ಟಲಿಂಗದ ಮೂಲಕ ಭಗವಂತನೊಡನೆ ಅನುಸಂಧಾನಗೈದು ಸಾಕ್ಷಾತ್ಕಾರ ಸಂಪಾದನೆಯ ಮಾರ್ಗವನ್ನು ಮಾನವನಿಗೆ ತೋರಿಸಲಾಗಿದೆ ಎಂದರು.
*ಗೌರವ ಸಮರ್ಪಣೆ :* ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಮ್ಮಿನಬಾವಿ ಪಂಚಗ್ರಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಒಂದು ತಿಂಗಳ ಕಾಲ ಪುರಾಣ ಪ್ರವಚನ ನೀಡಿದ್ದ ದೊಡವಾಡ ಹಿರೇಮಠದ ಶ್ರೀಜಡೇಸಿದ್ಧೇಶ್ವರ ಶಿವಾಚಾರ್ಯರಿಗೆ ಭಕ್ತಗಣದ ಪರವಾಗಿ ಗೌರವ ಸಮರ್ಪಣೆ ಮಾಡಿದರು. ತಿಂಗಳ ಕಾಲ ನಿತ್ಯವೂ ಸಂಗೀತ ಸೇವೆ ಸಲ್ಲಿಸಿದ ನಾಗರಾಜ ಕಾಡಸಿದ್ದಣ್ಣವರ ಹಾಗೂ ಮಡಿವಾಳಯ್ಯ ಶಹಪೂರಮಠ ಅವರನ್ನು, ಜೊತೆಗೆ ವಿವಿಧ ಸೇವಾಕರ್ತರನ್ನು ಗೌರವಿಸಿ ಹಿರಿಯ ಶ್ರೀಗಳು ಆಶೀರ್ವದಿಸಿದರು.
ಬೆಳಗಾವಿ, ಗದಗ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಅಮ್ಮಿನಬಾವಿ ಹಾಗೂ ಸುತ್ತಲಿನ ಅನೇಕ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು. ಈ ಧರ್ಮಸಂಗಮದಲ್ಲಿ ಪಾಲ್ಗೊಂಡ ಸಮಸ್ತ ಭಕ್ತಗಣಕ್ಕೆ ದಾಸೋಹ ಸೇವೆಯಲ್ಲಿ ಮಹಾಪ್ರಸಾದದ ಅನ್ನಸಂತರ್ಪಣೆ ಜರುಗಿತು.