ದಸರಾ ರಜೆಯನ್ನು ಕಡಿತಗೊಳಿಸಬಾರದೆಂದು ಮನವಿ..
ರಾಜ್ಯಾದ್ಯಂತ ನಾಡಿನ ವಿಶ್ವವಿಖ್ಯಾತ ಹಬ್ಬವಾದ ದಸರಾ ಹೆಸರಿನಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 30 ರವರೆಗೆ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮದ್ಯಂತರವಾಗಿ ದಸರಾ ರಜೆಯನ್ನು ನೀಡಲಾಗುತ್ತಿತ್ತು.
ಕಳೆದ ಮೂರು ವರ್ಷಗಳಿಂದ
ಕೊರೋನ ಕಾರಣಕ್ಕೆ ಮಕ್ಕಳಿಗೆ ಪಾಠ ಪ್ರವಚನಗಳಿಗೆ ಅಡ್ಡಿಯುಂಟಾಗಿದ್ದರಿಂದ ಅದರ ಹಿನ್ನೆಲೆಯಲ್ಲಿ ಉಂಟಾಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ದಸರಾ ರಜೆಯನ್ನು ಕಡಿತಗೊಳಿಸಲಾಗಿತ್ತು.
ಅದರಂತೆ ಶಿಕ್ಷಕರೆಲ್ಲರೂ ಅದನ್ನು ಸ್ವಾಗತಿಸಿ ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಹಜ ಸ್ಥಿತಿಯಲ್ಲಿದ್ದು ಯಾವುದೇ ರೀತಿಯ ಕಲಿಕಾ ಕೊರತೆಯು ಇರುವುದಿಲ್ಲವಾದರೂ ಈ ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆಯನ್ನು ಕಡಿತಗೊಳಿಸಿರುವುದು ಎಲ್ಲಾ ಶಾಲಾ ಮಕ್ಕಳಿಗಲ್ಲದೇ ಶಾಲಾ ಶಿಕ್ಷಕರುಗಳಿಗೂ ಸಹಾ ಅಸಮಾದಾನ ಉಂಟುಮಾಡಿದೆ.
ವಾರ್ಷಿಕ ಸಾಲಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿ 30 ದಿನಗಳ ಮದ್ಯಂತರ ರಜೆಯಾದ ದಸರಾ ರಜೆ ಹಾಗೂ 60 ದಿನಗಳ ಬೇಸಿಗೆ ರಜೆಗಳನ್ನು ಖುಷಿಯಿಂದ ಷೋಷಕರೊಂದಿಗೆ, ಸಂಬಂಧಿಕರುಗಳೊಂದಿಗೆ,ನೆರೆಹೊರೆಯ ಸಮಾಜದೊಂದಿಗೆ ಬೆರೆತು ಸಾಮಾಜಿಕವಾಗಿ ಬದುಕಿನ ಜ್ಞಾನವನ್ನು ಕಟ್ಟಿಕೊಳ್ಳುತಿದ್ದ ಶಾಲಾ ಮಕ್ಕಳಿಗೆ ಈ ರೀತಿಯ ದಸರಾ ಹಾಗೂ ಬೇಸಿಗೆ ರಜೆಗಳನ್ನು ಕಡಿತಗೊಳಿಸುವುದರಿಂದ ಅವರ ಬದುಕಿನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಲಿದೆ.
ಅಂತೆಯೇ ಶಾಲಾ ಶಿಕ್ಷಕರುಗಳು ವರ್ಷದಲ್ಲಿ ಒಂದು ತಿಂಗಳು ದಸರಾ ರಜೆ,ಎರಡು ತಿಂಗಳು ಬೇಸಿಗೆ ರಜೆ ಒಟ್ಟು ಮೂರು ತಿಂಗಳುಗಳ ರಜೆ ಸೌಲಭ್ಯ ಪಡೆಯುವವರು ಎಂಬ ಕಾರಣಕ್ಕಾಗಿಯೇ ಅವರುಗಳನ್ನು
ರಜೆ ಸಹಿತ ನೌಕರರು ಎಂದು ವಿಂಗಡಿಸಲಾಗಿದೆ.ಇದರಿಂದ
ಇತರೆ ಕಛೇರಿ ನೌಕರರುಗಳಿಗೆ ದೊರೆಯುವಂತ ವಾರ್ಷಿಕ 30 ಗಳಿಕೆ ರಜೆಗಳು,20 ಅರ್ಧವೇತನ ರಜೆಗಳು ಹಾಗೂ ಪ್ರತೀ ಮಾಹೆಯ ಎರಡನೇ & ನಾಲ್ಕನೇ ಶನಿವಾರ ರಜೆಗಳ ಸೌಲಭ್ಯಗಳು ಶಿಕ್ಷಕರುಗಳಿಗೆ ಇರುವುದಿಲ್ಲ.
ಈ ರೀತಿಯ ಮದ್ಯಂತರ ರಜೆಗಳ ಕಡಿತಗಳಿಂದ ಶಿಕ್ಷಕರುಗಳಿಗೆ
ಒಂದು ಕಡೆ ದಸರಾ ಹಾಗೂ ಬೇಸಿಗೆ ರಜೆ ಸೌಲಭ್ಯಗಳು ಸಂಪೂರ್ಣವಾಗಿ ಸಿಗದೇ ಮತ್ತೊಂದು ಕಡೆ ವಾರ್ಷಿಕ ಗಳಿಕೆ ರಜೆ,ಅರ್ಧವೇತನ ರಜೆ ಸೌಲಭ್ಯಗಳು ಸಿಗದೇ ಅನ್ಯಾಯಕ್ಕೆ ಒಳಗಾಗಿದ್ದಾರೆ.
ಈ ಎಲ್ಲಾ ಅಂಶಗಳನ್ನು ಮರುಪರಿಶೀಲನೆ ಮಾಡಿ ಶಾಲಾ ಮಕ್ಕಳು ತಮ್ಮ ಪೋಷಕರೊಂದಿಗೆ,ಅಜ್ಜಿ,ಅಜ್ಜ,ಸಂಬಂಧಿಕರುಗಳೊಂದಿಗೆ ಬೆರೆಯಲು,ಆಡಲು, ದಸರಾ ರಜೆಯನ್ನು ಕಡಿತಮಾಡದೇ ಸಂಪೂರ್ಣವಾಗಿ ನೀಡುವಂತೆ ಹಾಗೂ ಶಾಲಾ ಶಿಕ್ಷಕರುಗಳಿಗೆ ಸಿಗಬೇಕಾದ ನ್ಯಾಯಪರ ರಜೆಗಳನ್ನು ದೊರಕಿಸಿಕೊಡುವಂತೆ
ಕರ್ನಾಟಕ ರಾಜ್ಯದ ಸಮಸ್ತ ಶಿಕ್ಷಕ ಶಿಕ್ಷಕಿಯರ ಪರವಾಗಿ ಸಾವಿತ್ರಿಬಾಯಿಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(,ರಿ)ನವದೆಹಲಿ.ಇದರ ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ
ಡಾ.ಲತಾ.ಎಸ್.ಮುಳ್ಳೂರ ರವರು ಘನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.