ಶಾಲೆಗೆ ಮಕ್ಕಳನ್ನು ಸೆಳೆಯಲು “ಶ್ರಾವಣ ಸಿರಿ-ಸಿಹಿ ಭೋಜನ”
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವನಾಳದಲ್ಲಿ ಶಾಲೆಗೆ ಮಕ್ಕಳನ್ನು ಸೆಳೆಯಲು “ಶ್ರಾವಣ ಸಿರಿ-ಸಿಹಿ ಭೋಜನ”
ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಲು ಪ್ರಸ್ತುತ ವರ್ಷದಿಂದ “ಶ್ರಾವಣ ಸಿರಿ- ಸಿಹಿ ಭೋಜನ” ಎಂಬ ವಿನೂತನ ಕಾರ್ಯಕ್ರಮವನ್ನು ಲಕ್ಷ್ಮೇಶ್ವರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವನಾಳದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ 125 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎಂಬಂತೆ ಮಗುವಿನಲ್ಲಿ ಗುಣಾತ್ಮಕ ಕಲಿಕೆಯನ್ನು ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶಾರೀರಿಕ ಸ್ಥಿತಿಯು ಉತ್ತಮವಾಗಿರಬೇಕು ಆದ್ದರಿಂದ
ಶಾಲೆಯ ಶಿಕ್ಷಕರು ಹಾಗೂ ಎಸ್ಡಿಎಂಸಿಯವರ ದೂರದೃಷ್ಟಿಯ ಫಲವಾಗಿ ಈ ಶಾಲೆಯ ಮಕ್ಕಳಿಗೆ ಶ್ರಾವಣ ಮಾಸದಾದ್ಯಂತ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿಹಿ ಊಟ ಸಿಗುತ್ತದೆ.ಈ ಶಾಲೆಯ ಮಕ್ಕಳಿಗೆ ಪ್ರತಿ ದಿನ ಮಧ್ಯಾಹ್ನ ಬಿಸಿ ಊಟದಲ್ಲಿ ನೀಡುವ ಸಿಹಿ ಊಟಕ್ಕೆ ಶಿಕ್ಷಕರು “ಶ್ರಾವಣ ಸಿರಿ-ಸಿಹಿ ಭೋಜನ”ಎಂದು ನಾಮಕರಣ ಮಾಡಿದ್ದಾರೆ.
ಶ್ರಾವಣ ಮಾಸದ ನಾಗರ ಅಮಾವಾಸ್ಯೆಯಿಂದ ಬೆನಕನ ಅಮಾವಾಸ್ಯೆವರೆಗೂ ಪ್ರತಿದಿನ ವಿವಿಧ ರೀತಿಯ ಸಿಹಿ ಪದಾರ್ಥಗಳನ್ನು ಗ್ರಾಮದ ಹಿರಿಯ ದಾನಿಗಳಿಂದ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಿಂದ ಮತ್ತು ಶಾಲೆಯ ಎಸ್ ಡಿ ಎಂ ಸಿ ಹಾಗೂ ಶಿಕ್ಷಕರ ವತಿಯಿಂದ ಪ್ರಧಾನ ಮಂತ್ರಿ ಪೋಷಣ ಅಭಿಯಾನದ ಜೊತೆಗೆ ಮಧ್ಯಾಹ್ನ ಸಿಹಿ ಊಟದ ಜೊತೆಗೆ ಜಿಲೇಬಿ, ಬೂಂದಿ, ಮೈಸೂರು ಪಾಕ್, ಶಾವಿಗೆ ಪಾಯಸ, ಕೇಸರಿಬಾತ್, ಬನ್ ಪಾಯಸ, ಶೇಂಗಾ ಹೋಳಿಗೆ, ಉಂಡೆ, ಗೋಧಿ ಹುಗ್ಗಿ ಇವುಗಳನ್ನು ಶ್ರಾವಣ ಮಾಸದ ಪ್ರತಿದಿನ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು ಮಕ್ಕಳು ಖುಷಿಯಿಂದ ಈ ಶ್ರಾವಣ ಸಿರಿ – ಸಿಹಿ ಭೋಜನವನ್ನು ಮಾಡುತ್ತಿದ್ದು ಈ ಯೋಜನೆ ನಮಗೆ ತುಂಬಾ ಉಪಯುಕ್ತವಾಗಿದೆ ಎಂದು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಪ್ರಸ್ತುತವಾಗಿ ಹಮ್ಮಿಕೊಂಡಿರುವ ಈ ಯೋಜನೆಯನ್ನು ಬರುವ ದಿನಗಳಲ್ಲಿ ಇದೇ ರೀತಿಯಾಗಿ ಮುಂದುವರೆಸಿಕೊಂಡು ಹೋಗುವುದಾಗಿ ಶಾಲೆಯ ಶಿಕ್ಷಕ ಬಳಗವು ತಿಳಿಸಿರುತ್ತಾರೆ. ಈ ಎಲ್ಲಾ ದಾನಿಗಳಿಗೆ ಶಾಲೆಯ ಶಿಕ್ಷಕರು ಎಸ್ ಡಿ ಎಂ ಸಿ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಧನ್ಯವಾದಗಳನ್ನು ಅರ್ಪಿಸಿರುತ್ತಾರೆ.
ಈ ಎಲ್ಲ ಶಿಕ್ಷಣ ಪ್ರೇಮಿಗಳನ್ನು ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು, ಎಸ್ಡಿಎಂಸಿಯವರು ಗುರುತಿಸಿದ್ದಾರೆ. ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಒಟ್ಟು 125 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಮಕ್ಕಳಿಗೆ ಸಿಹಿ ಊಟಕ್ಕೆ ಒಂದು ದಿನಕ್ಕೆ 15000 ರೂ ದಿಂದ 2000 ರೂ.ಖರ್ಚು ಬರುತ್ತದೆ. ಇಂದಿಗೆ ಶಾಲೆಯಲ್ಲಿ ಸಿಹಿ ಊಟ ಪ್ರಾರಂಭವಾಗಿ 25 ದಿನಗಳು ಗತಿಸಿಹೋದವು.ಒಟ್ಟಾರೆಯಾಗಿ 1ರಿಂದ 8 ರವರೆಗೆ ತರಗತಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಸಿಹಿತಿಂಡಿಗಳಲ್ಲದೆ ಪ್ರತಿಭಾ ಕಾರಂಜಿ, ಕ್ರೀಡೆ ಹಾಗೂ ನಲಿ ಕಲಿ ತರಗತಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
ಈ ಕುರಿತು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಮ್ ಮುಂದಿನಮನಿ ‘‘ಗುಣಮಟ್ಟದ ಶಿಕ್ಷಣಕ್ಕಾಗಿ ಪೈಪೋಟಿ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಹೋಗುತ್ತಿಲ್ಲ. ಮಧ್ಯಾಹ್ನದ ಊಟದಲ್ಲಿ ಸಿಹಿತಿಂಡಿ ನೀಡುವುದು ಉತ್ತಮ ಕ್ರಮವಾಗಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಇತರ ಸರ್ಕಾರಿ ಶಾಲೆಗಳಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದೇ ರೀತಿ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಂದರೆ ಫು ಬಡ್ನಿ ಕ್ಲಸ್ಟರಿನ ಸ ಕಿ ಪ್ರಾ ಶಾಲೆ ಸೋಗಿವಾಳ ಮತ್ತು ಸ ಕಿ ಪ್ರಾ ಶಾಲೆ ಹಿರೇಮಲ್ಲಾಪೂರ,ಸ ಪ್ರೌಢ ಶಾಲೆ ಫು ಬಡ್ನಿ, ಲಕ್ಷ್ಮೇಶ್ವರ ಉತ್ತರ ಕ್ಲಸ್ಟರಿನ ಸ ಪ್ರೌಢ ಶಾಲೆ ಲಕ್ಷ್ಮೇಶ್ವರ ಹಾಗೂ ವಾರದ ವಿಶೇಷ ದಿನಗಳಲ್ಲಿ ಇನ್ನೂ ಮುಂತಾದ ಶಾಲೆಗಳು ಸಿಹಿಯೂಟ ಭೋಜನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಾಲ್ಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹ ನಿರ್ದೇಶಕರಾದ ಎಚ್ ಎಸ್ ರಾಮನಗೌಡ ಹೇಳಿದ್ದಾರೆ.
ಶಾಲೆಯ ಪ್ರಧಾನ ಗುರುಗಳಾದ ಶ್ರೀ ಬಿ ಬಿ ಯತ್ತಿನಹಳ್ಳಿ ಮಾತನಾಡಿ, ಸಾರ್ವಜನಿಕರೂ ಸೇರಿದಂತೆ ಸಮುದಾಯದವರ ಆರ್ಥಿಕ ನೆರವು, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳ ಜೊತೆಗೆ ಅಮೃತದ ಸಿಹಿ ಭೋಜನದ ಹೊರತಾಗಿ ಉತ್ತಮ ಶಿಕ್ಷಣವನ್ನೂ ನೀಡುತ್ತಿದ್ದೇವೆ. ಈ ಮೂಲಕ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗಿ, ಹಾಜರಾತಿಯು ಸ್ಥಿರವಾಗಿರುತ್ತದೆ ಮತ್ತು ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಲು ಸಾಧ್ಯ ಎಂದು ತಿಳಿಸಿದರು.