‘ಸಸ್ಯ ಶಾಮಲಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಅರಣ್ಯ ಈಶ್ವರ ಖಂಡ್ರೆ…
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರೇ ನಂ.1 ಶಿಕ್ಷಕರಾಗಿದ್ದಾರೆ. ಆದರೆ, ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕೆಲಸಗಳಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು…
ಚಾಮರಾಜಪೇಟೆಯಲ್ಲಿರುವ ಹಳೇ ಕೋಟೆ ಕೆಪಿಎಸ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಸ್ಯ ಶ್ಯಾಮಲಾ’ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಹಳೇ ಕೋಟೆ ಶಾಲೆಯಲ್ಲಿ ವಿಧಾನಸೌಧವನ್ನು ನಿರ್ಮಿಸಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ವ್ಯಾಸಂಗ ಮಾಡಿದ್ದರು. ಅದರಂತೆ ಆಯಾ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಗಣ್ಯರ ಸಾಧನೆಯನ್ನು ಪಟ್ಟಿ ಮಾಡಿ ಶಾಲೆಗಳಲ್ಲಿ ಹಾಕುವ ಕೆಲಸವಾಗಬೇಕು. ಇದರಿಂದ ಸರ್ಕಾರಿ ಶಾಲೆಗಳ ಗೌರವ ಮತ್ತು ಶಕ್ತಿ ಏನೆಂದು ತಿಳಿಯಲಿದೆ ಎಂದು ಹೇಳಿದರು.
ಸಸಿಗಳನ್ನು ಪೋಷಣೆ ಮಾಡಲು ವಿದ್ಯಾರ್ಥಿಗಳು ಊಟ ಮಾಡಿದ ನಂತರ ತಮ್ಮ ಕೈಯನ್ನು ಗಿಡದ ಬುಡದಲ್ಲಿ ತೊಳೆಯುವುದು ಕುಡಿಯುವ ಡಬ್ಬದಲ್ಲಿನ ನೀರನ್ನು ಪೋಲು ಮಾಡದೆ, ಗಿಡಗಳಿಗೆ ಹಾಕುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಗಿಡಗಳನ್ನು ಪೋಷಣೆ ಮಾಡುವ ಕುರಿತು ಪ್ರತಿಜ್ಞೆ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ, ಬೆಂ.ದಕ್ಷಿಣ ಜಿಲ್ಲಾ ಉಪ ನಿರ್ದೇಶಕ ನಿಂಗರಾಜಪ್ಪ ಕೆ.ಬಿ, ಶಾಲೆಯ ಪ್ರಾಂಶುಪಾಲ ನಾರಾಯಣಪ್ಪ, ಉಪ ಪ್ರಾಂಶುಪಾಲೆ ಹೇಮಾ ಎಸ್. ಸೇರಿ ಇತರೆ ಶಿಕ್ಷಕ ವರ್ಗ ಉಪಸ್ಥಿತರಿದ್ದರು.