ನೌಕರರ ಸಂಬಳ ಶೇ.38 ಹೆಚ್ಚಳ ಸಾಧ್ಯತೆ
ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ.38ರಿಂದ 40 ವೇತನ ಹೆಚ್ಚಾಗುವ ವಿಶ್ವಾಸವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.
ಹೊಸದುರ್ಗದಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ರಾಜ್ಯ ಸರ್ಕಾರ ರಚಿಸಿರುವ 7ನೇ ವೇತನ ಆಯೋಗದ ಸಮಿತಿಯು ನವೆಂಬರ್ ಅಂತ್ಯದ ವೇಳೆಗೆ ವೇತನ ಹೆಚ್ಚಳಕ್ಕೆ ಪೂರಕವಾಗಿರುವ ವರದಿ ಸಲ್ಲಿಸಲಿದೆ. ಸಮಿತಿಯ ಸದಸ್ಯರನ್ನು ಶುಕ್ರವಾರ ಭೇಟಿ ಮಾಡಿ ಶೇ.38 ರಿಂದ 40 ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಏ.1ರಂದು ನಡೆಸಿದ ಒಂದು ದಿನದ ಮುಷ್ಕರದ ಫಲವಾಗಿ ಮಧ್ಯಂತರ ಪರಿಹಾರ ಸಿಕ್ಕಿದೆ. 7ನೇ ವೇತನ ಆಯೋಗದ ವರದಿ ಜಾರಿ ಹಾಗೂ ಒಪಿಎಸ್ ಮರು ಜಾರಿ ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು. ರಾಜ್ಯ ಸರ್ಕಾರಿ ನೌಕರರ ಕುಟುಂಬಗಳಿಗೆ ಆಸ್ಪತ್ರೆಯಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ಸಿಗುವ ಯೋಜನೆ ಈ ತಿಂಗಳ ಅಂತ್ಯದೊಳಗೆ ಜಾರಿಯಾಗಲಿದೆ ಎಂದರು