ಧರಣಿಸುತೆ ಮಂದಸ್ಮಿತೆ
ಕವನ ಸಂಕಲನ
ಕವಯತ್ರಿ ಬಸಮ್ಮ ರಾ ಏಗನಗೌಡ್ರ
ಶ್ರೀಮತಿ ಬಸಮ್ಮ ಏಗನಗೌಡ್ರ ಅವರು ಇತ್ತೀಚಗೆ ಹೊರತಂದ ಕವನ ಸಂಕಲನ ಧರಣಿಸುತೆ ಮಂದಸ್ಮಿತೆ. ಹೆಸರೇ ಸೂಚಿಸುವಂತೆ ಧರಣಿಸುತೆ ಮಂದಸ್ಮಿತೆ ಧರಣಿಸುತೆಯಾದ ಮಹಿಳೆಯು ಧರಣಿಯ ತಾಳ್ಮೆಯ ಗುಣವನ್ನು ಹೊಂದಿ ಸಕಲ ನೋವುಗಳನ್ನು ಮರೆತು ಜಗದ ಕಣ್ಣಿಗೆ ಮಂದಸ್ಮಿತೆಯಾಗಿ ಬದುಕ ಬಂಡಿ ಸಾಗಿಸುವವಳು.
ಈ ಹಿಂದೆ ನಾನು ಇವರ ಮುದ್ದು ಗಿಣಿ ಹಾಡಿ ಕುಣಿ ಮತ್ತು ಸ್ವರ ಚಂದಿರ ಕಾವ್ಯ ಹಂದರ ಕೃತಿಗಳನ್ನು ನೋಡಿದ್ದೆ.ಅವುಗಳ ಕುರಿತು ಕಿರು ಬರಹ ರೂಪಿಸಿದ್ದೆ ಕೂಡ. ಸವದತ್ತಿ ತಾಲೂಕಿನ ಹಿರೇಉಳ್ಳಿಗೇರಿಯ ಶರಣ ದಂಪತಿ ರಾಮಕೃಷ್ಣಗೌಡ ಏಗನಗೌಡ್ರ ಹಾಗೂ ಲಲಿತಾ ದಂಪತಿಗಳ ಮೂರು ಮುತ್ತುಗಳಲ್ಲಿ ಹಿರಿಯ ಮಗಳು ಬಸಮ್ಮ , ಇಬ್ಬರು ತಮ್ಮಂದಿರು. ಚಿಕ್ಕಂದಿನಲ್ಲಿ ಅಪ್ಪನೊಂದಿಗೆ ಭಗವದ್ಗೀತಾ ಪಾರಾಯಣ. ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹಿರೇಉಳ್ಳಿಗೇರಿಯಲ್ಲಿ ಆರಂಬಿಕ ಶಿಕ್ಷಣ. ಪ್ರೌಢ ಮತ್ತು ಕಾಲೇಜು ಶಿಕ್ಷಣ ಶ್ರೀ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯ ರಾಣೆಬೆನ್ನೂರು ಜಿ/ಹಾವೇರಿ ಯಲ್ಲಿ ಅಧ್ಯಯನ. ಧಾರವಾಡದ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್. ಶಿಕ್ಷಣ. ಪ್ರೌಢಶಾಲಾ ಹಂತದಲ್ಲಿ ರಾಣೆಬೆನ್ನೂರಿನ ದಿ. ಶ್ರೀಮತಿ ಗಿರಿಜಾದೇವಿ ದುರ್ಗದಮಠ ಇವರ ಸಾಹಿತ್ಯ ಗರಡಿಯಲ್ಲಿ ಕಾವ್ಯ, ಚುಟುಕು ಲೇಖನ ಬರೆಯುವ ಹವ್ಯಾಸ ಬೆಳವಣಿಗೆ.
ರಾಣೆಬೆನ್ನೂರಿನ ಸ್ಥಳೀಯ ದಿನಪತ್ರಿಕೆ ಶಿಡ್ಲು ಪತ್ರಿಕೆಯಲ್ಲಿ ಕವಿತೆ, ಲೇಖನಗಳ ಪ್ರಕಟಣೆ. ಆ ವೇಳೆಯಲ್ಲಿ ರಾನೇಬೆನ್ನೂರು ತಾಲೂಕಿನ ಬರಹಗಾರರು ಎಂಬ ಸಂಪಾದಿತ ಕೃತಿಯಲ್ಲಿ ಗುರುತಿಸಿಕೊಂಡ ಹೆಮ್ಮೆ. ರಾಣೆಬೆನ್ನೂರಿನ ಸಾಹಿತ್ಯ ಪ್ರೀಯರು ಏರ್ಪಡಿಸಿದ ನೂರಾರು ಗೃಹಗೋಷ್ಠಿಯಲ್ಲಿ ಭಾಗವಹಿಸಿ ಅಲ್ಲಿನ ಹಿರಿಯಕವಿಗಳಿಂದ ಮೆಚ್ಚುಗೆಗೆ ಪಾತ್ರ. ಆ ಹಿರಿಯ ಕವಿಗಳ ಮೆಚ್ಚುಗೆ ನುಡಿಗಳು ಮತ್ತು ಸಾಹಿತಿ ದಿ. ಶ್ರೀಮತಿ ಗಿರಿಜಾದೇವಿ ದುರ್ಗದಮಠ ಅವರ ಪ್ರೇರಣೆ ಹಾಗೂ ಆಶಿರ್ವಾದದ ಬಲದಿಂದ ಪ್ರೌಢಶಾಲಾ ಹಂತದಲ್ಲಿಯೇ ೮೦ಕ್ಕೂ ಹೆಚ್ಚು ಕವಿತೆಗಳ ಬರವಣಿಗೆ. ಹಲವಾರು ಮಕ್ಕಳ ಸಾಹಿತ್ಯಗೋಷ್ಠಿಗಳಲ್ಲಿ ಭಾಗಿಯಾದ ಅನುಭವ.
ಟಿ.ಸಿ.ಎಚ್. ಓದುತ್ತಿರುವಾಗ ೩ ಭಾರಿ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಬಾಂದನಿ ಪೂರಕ ಶಿಕ್ಷಣ ಕಾರ್ಯಕ್ರಮದಲ್ಲಿ ಸ್ವರಚಿತ ಕವಿತೆ ರಚಿಸಿ, ರಾಗಸಂಯೋಜಿಸಿ ಪಾಠಕ್ಕೆ ಪೂರಕವಾಗಿ ಹಾಡಿದ ಅಮೋಘ ಅನುಭವ.
ಟಿ.ಸಿ.ಎಚ್. ಓದಿನ ನಂತರ ೨೦೦೪ರಲ್ಲಿ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದ ರೈತ ಯುವಕ ಸೋದರಮಾವ ಸತೀಶ ತೊಂಡೂರ ಇವರೊಂದಿಗೆ ವಿವಾಹ. ತುಂಬಿದ ಅವಿಭಕ್ತ ಕುಟುಂಬದಲ್ಲಿ ಹೊಂದಾಣಿಕೆಯ ಸಂತಸದ ಜೀವನ.
ಮಗ- ಪ್ರಮೋದಕುಮಾರ. ಮಗಳು- ಸಾಧನಾ.
೨೦೦೫ರ ಮೇ ೨ನೇ ತಾರೀಕಿನ ಶುಭ ದಿನದಂದು ಸಹಶಿಕ್ಷಕಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಾದಿಗಟ್ಟಿ, ತಾ/ಶಿರಹಟ್ಟಿ, ಜಿ/ಗದಗ ಇಲ್ಲಿ ಸೇವೆ ಆರಂಭ. ಆ ಊರಿಗೆ ಬಸ್ ಸೌಲಭ್ಯವಿಲ್ಲದ ಕಾರಣ ಅದೇ ಗ್ರಾಮದ ಅವಿಭಕ್ತ ಕುಟುಂಬದ ಮನೆಯೊಂದರ ಒಂದು ಕೋಣೆಯಲ್ಲಿ ೧೦ ವರ್ಷಗಳವರೆಗೆ ವಾಸವಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ದಿನದ ೨೪ ಗಂಟೆ ಶ್ರಮವಹಿಸಿದ ಅನುಭವ. ಸದ್ಯ ಸವಣೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಚವಢಾಳ ದಲ್ಲಿ ಸೇವೆ ಸಲ್ಲಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುರುಳಿಕುಪ್ಪಿ ತಾಲೂಕ ಸವಣೂರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಧರಣಿಸುತೆ ಮಂದಸ್ಮಿತೆ
ಈ ಕವನ ಸಂಕಲನದ ಮುಖಪುಟವೇ ತುಂಬಾ ಆಕರ್ಷಕ.ಹೆಸರಿಗೆ ತಕ್ಕಂತೆ ಪ್ರಕೃತಿ ಮಾತೆಯ ಕೈಯಲ್ಲಿ ಹಸಿರ ಭುವಿ ನಿಜಕ್ಕೂ ಅದ್ಬುತ.ಬೆನ್ನುಡಿ ಧಾರವಾಡದ ದತ್ತಿದಾನಿ ಅಕ್ಷರತಾಯಿ ಲೂಸಿ ಸಾಲ್ಡಾನಾ ಬರೆಯುವ ಮೂಲಕ ಲೇಖಕಿ ಶಿಕ್ಷಕಿಗೆ ಶುಭ ಕೋರಿರುವುದು ವಿಶೇಷ.ಈ ಕೃತಿಯನ್ನು ಇವರು ಅರ್ಪಿಸಿರುವುದು ಕೂಡ ಮಹಿಳೆಯರ ಸಂವೇದನೆಯ ಕಾವಯ ರಚಿಸಲು ತಮಗೆ ಸ್ಪೂರ್ತಿಯಾದ ತಮ್ಮ ತಾಯಿ ಶ್ರೀಮತಿ ಲಲಿತಾ ಏಗನಗೌಡ್ರ ಮತ್ತು ಪಡೆದ ತಾಯಂದಿರಾದ ಬಸಮ್ಮ ಬಾರ್ಕಿ ಮತ್ತು ಸುಧಾ ಬಾರ್ಕಿ ಇವರಿಗೆ ಅರ್ಪಿಸುವ ಮೂಲಕ ಶೀರ್ಷಿಕೆಗೆ ತಕ್ಕ ಅರ್ಪಣೆ ಜರುಗಿರುವುದು ಹೆಮ್ಮೆಯ ಸಂಗತಿ.ಇದು ಒಟ್ಟು ೩೫ ಕವನಗಳನ್ನು ಒಳಗೊಂಡ ಈ ಕವನ ಸಂಕಲನದ ಮೊದಲ ಕವನ ಗಿರಿಜಮ್ಮ ತಮ್ಮ ಗುರುಮಾತೆಯವರನ್ನು ಕುರಿತು
ಕಿತ್ತೂರಿನ ತನುಜಾತೆ
ಮುತ್ತುಮಣಿ ಬೆನ್ನೂರಿಗೆ
ನತ್ತಿಟ್ಟು ಬೊಟ್ಟಿಟ್ಟ ದೇವತೆಯೆನೀ
ಸುತ್ತೆಲ್ಲ ಶಿಷ್ಯೆಯರ
ಬಿತ್ತುತಲಿ ಸಾಹಿತ್ಯ
ಮತ್ತೆಲ್ಲಿ ಮಾಯಾದೆ ಗುರುಮಾತೆ ನೀ
ಎಂದು ಆರಂಭವಾಗುವ ಸಾಲುಗಳಲ್ಲಿ ತಮ್ಮ ಗುರುಮಾತೆಯ ಸ್ಮರಣೆ ಮಾಡಿರುವರು.ಇವರ ಗುರುಮಾತೆ ಶ್ರೀಮತಿ ಗಿರಿಜಾದೇವಿ ದುರ್ಗದಮಠ ಅವರಿಗೆ ನುಡಿನಮನ ಸಲ್ಲಿಸಿರುವುದು ವಿಶೇಷ.ಪ್ರತಿಯೊಂದು ಕವನಗಳು ವಿಶೇಷ.ನಂತರದ ಕವನ ತವರಿನ ಪಂಚಮಿ ಈ ಕವನದಲ್ಲಿ ಪಂಚಮಿಗೆ ತವರಿಗೆ ಹೋಗಿ ಬರಲು ತನ್ನ ಗಂಡನ ಅನುಮತಿಯನ್ನು ಕೇಳಲು ಮದುವೆಯಾದ ಹೆಣ್ಣು ಮಗಳೊಬ್ಬಳು ತನ್ನ ತವರಿನ ಕುರಿತು ಇಲ್ಲಿನ ಸಾಲುಗಳನ್ನು ಬರೆದಿರುವ ರೀತಿ ಭಾವನಾತ್ಮಕ ಬೆಸುಗೆಯನ್ನು ಕಾಣಬಹುದು.
ಗೆಳತ್ಯಾರು ಬರುತಾರ ಹಳೆ ನೆನಪ ತರತಾರ
ಬಳೆಯ ತೊಡಲಾಕ ಕರಿತಾರ/ತವರಿನ
ಹೊಳೆಯ ದಂಡ್ಯಾಗ ಕೂಡ್ಯಾರ
ಎಂಬ ತವರಿನ ಮಿಂಚುಗಳನ್ನು ಸ್ಮರಿಸುವ ಸಾಲುಗಳಲ್ಲಿ ಮತ್ತೆ ಹಳೆಯ ನೆನಪನ್ನು ತರುತ್ತವೆ.ಪ್ರತಿ ಸಾಲುಗಳಲ್ಲಿಯೂ ತವರಿನ ನೆನಪನ್ನು ಹೊತ್ತು ತರುತ್ತವೆ.ಮುಂದಿನ ಕವನ ಬಡವಿಯೊಡಲು.ಭಾವದರಗಿಣಿ.ಹದಿವಯಸು ಗಮನ ಸೆಳೆಯುತ್ತವೆ.ತಮ್ಮ ತಾಯಿಯನ್ನು ಸ್ಮರಿಸುವ ನನ್ನವ್ವ ಕವನ ಇಲ್ಲಿ ಉಲ್ಲೇಖಿಸಲೇಬೇಕು.
ಬೆಳ್ಳಿ ಚುಕ್ಕಿ ಇವಳ ಬೆಳ್ಳಿ ಕಾಲುಂಗುರದವಳ
ಬೆಳ್ಳಗಿನ ಸೀರೆ ಉಟ್ಟವಳು/ನನ್ನವ್ವ
ಒಳ್ಳೆತನದಾಗ ಹಿರಿಯವಳ
ಎಂದು ಆರಂಭವಾಗುವ ತನ್ನ ತಾಯಿಯ ವರ್ಣನೆ ಅವಳ ವ್ಯಕ್ತಿತ್ವ ಎಂತಹದು ಎನ್ನುವಲ್ಲಿ ಪ್ರತಿ ಸಾಲುಗಳಲ್ಲಿ ತನ್ನವ್ವನನ್ನು ಸ್ಮರಿಸುವ ಲೇಖಕಿ ಹೃದಯಸ್ಪರ್ಶಿಯಾಗಿ ತಾಯಿಯನ್ನು ಕಟ್ಟಿಕೊಟ್ಟಿರುವರು.
ಸಲ್ಲದ ಗೋಧಿಯ ಕಲ್ಲಾಗ ಬೀಸುವಳ
ಬೆಲ್ಲದ ಹುಗ್ಗಿ ಮಾಡುವಳು/ನನ್ನವ್ವ
ಮೆಲ್ಲ ಪತಿರಾಯ್ಗ ಬಡಿಸುವಳ
ಎನ್ನುವಲ್ಲಿ ನಮ್ಮ ಗ್ರಾಮೀಣ ಪರಿಸರದಲ್ಲಿ ಯಾವ ವಾತಾವರಣದಲ್ಲಿ ತಾಯಿ ಮಕ್ಕಳ ಗಂಡ ಹೆಂಡಿರ ಬದುಕು ಸಾಗಿತ್ತು ಎಂಬುದನ್ನು ಕೂಡ ಇಂದಿನ ಜನತೆಗೆ ನೆನಪಿಸಿಕೊಟ್ಟಿರುವ ರೀತಿ ಅನನ್ಯವಾದುದು.
ಮುಂದಿನ ಕವನಗಳು ಬಂಧ ಅನುಬಂಧ.ಗುಲಾಬಿ ಅರಳಿದಾಗ. ಮೌನ ಸಾದ್ವಿ.ಕುಸುಮ ಕೋಮಲೆ.ತಾರೆ ನೀರೆ. ಗಮನ ಸೆಳೆಯುತ್ತವೆ.ಇವುಗಳಲ್ಲಿ ಮನದಿನಿಯ ಕವನ ನನಗೆ ಇಷ್ಟವಾಯಿತು.
ಬಿಸಿಲು ಕಾಲದಿ ತಂಪು ನೀಡುವ
ಹೊಸತು ಮೋಹಕ ನುಡಿಗಳು
ಖುಷಿಯ ಸೋನೆಯ ಮಳೆಯ ಸುರಿಸುವ
ಬೆಸುಗೆ ಭಾವದ ಕಂಗಳು
ಎನ್ನುವಲ್ಲಿ ಮನದಿನಿಯನ ವ್ಯಕ್ತಿತ್ವ ಎಂತಹದು ಎಂಬುದು ಮೂಡಿ ಬಂದಿದೆ.
ದೂರ ಹೋದರೆ ನನ್ನ ತೊರೆದರೆ
ಮೂರು ಚಣಸಹ ಸಹಿಸೆನು
ಮೇರು ಪರ್ವತ ಗುಣದ ಗಣಿನೀ
ಬಾರೋ ಪ್ರೇಮದಿ ಕರೆವನು
ಎಂಬುವಲ್ಲಿ ಭಾವಂತರಂಗದಲ್ಲಿ ಪ್ರೇಮದ ಲಯ ತೂರಿ ಬಂದಿಹುದು.ಇದು ತನ್ನಿನಿಯನ ಜೊತೆಗೆ ಅಂತರಾತ್ಮದ ಬೆಸುಗೆಯನ್ನು ಸೂಚಿಸುವುದು.
ನಂತರದ ಕವನಗಳಾದ ಕುಸುಮ ಮಾಲೆ.ಮಗಳಿಗೆ ಕಿವಿಮಾತು.ತವರ ಬಳ್ಳಿ.ಮಡದಿಗೊಂದು ಅಕ್ಷರ ಮಾಲೆ ಸೀರೆಯುಟ್ಟ ನೀರೆ.ಬೆಳಕಿವಳು.ಒಲುಮೆ ದಾರಿ.ಜಲಧಿಯಲಿ ಲಲನೆ. ಶಿಲಾ ಬಾಲಿಕೆ.ಚೇತನದಾತೆ.ಹಿರಿಜೀವ ಮತ್ತು ಮರವಾಸಿ. ನೆನಪು. ಸುಖೀ ಜೀವನ.ಮನೆ/ಮಾತು. ಗಮನ ಸೆಳೆಯುತ್ತವೆ.ಇಲ್ಲಿ ಗ್ರಾಮೀಣ ಸೊಗಡು.ಹಳ್ಳಿಯ ಹೆಣ್ಣು ಮಕ್ಕಳ ಬದುಕು. ಮನೆಯಲ್ಲಿ ಅವರ ಕಾರ್ಯ. ಸಂಸ್ಕೃತಿ ಎಲ್ಲವೂ ಈ ಕವನಗಳಲ್ಲಿ ಮೇಳೈಸಿವೆ.ಪ್ರತಿ ಕವನಗಳು ಸಕಾರಾತ್ಮಕ ಭಾವನೆಯನ್ನು ಹೊರಸೂಸಿವೆ. ಬಹಳ ಸರಳ ಪದಗಳಲ್ಲಿ ಹಾಡುಗಳನ್ನು ಹಾಡಬಹುದಾದಷ್ಟು ಸರಳವಾಗಿವೆ ಇಲ್ಲಿಯ ಕವನಗಳು.ಹೆಣ್ಣಿನ ಮನಸ್ಸಿನ ತುಮುಲಗಳು ಇಲ್ಲಿ ಮೂಡಿ ಬಂದಿವೆ.
ಇಲ್ಲಿ ರಂಗೋಲಿ ಕವನ ಉಲ್ಲೇಖಿಸುವೆ.ರಂಗವಲ್ಲಿ ಅಥವಾ ರಂಗೋಲಿ ಗೃಹಲಂಕಾರಕ್ಕೆ ಸಂಬಂಧಿಸಿದ ಒಂದು ಜಾನಪದ ಕಲೆ.ಸ್ತ್ರೀಯರ ಕಲಾ ನೈಪುಣ್ಯ,ಕಲ್ಪನಾ ಶಕ್ತಿಯ ಅಭಿವ್ಯಕ್ತಿಯಾಗಿ ಬೆರಳುಗಳ ಸಹಾಯದಿಂದ ಮೂಡಿಸುವ ಕಲೆಯಾಗಿ ಹೆಚ್ಚು ಪ್ರಚಲಿತವಿರುವ ಈ ಕಲೆ ನಮ್ಮ ಸಂಸ್ಕೃತಿಯ ಮೆರಗು ಕೂಡ. ಇವರ ಕವನದಲ್ಲಿ ಈ ಮೆರಗು ಮೇಳೈಸಿವೆ
ಹೆಂಗಳೆಯರೆಲ್ಲರಿಗು ಸಂಗಾತಿ
ಸೋದರಿಯರೆಲ್ಲರಿಗು ಗೆಳತಿ
ಇವಳೇ ನನ್ನ ನಲ್ಮೆಯ ಗೆಳತಿ
ರಂಗೋಲಿ ಅಂತಿವಳ ಹೆಸರೈತಿ
ಎನ್ನುತ್ತ ರಂಗೋಲಿ ಹೆಣ್ಣಿನ ಭಾವನೆ.ಮನೆ ಬಾಗಿಲಿಗೆ ಶೋಭೆ.ಮನೆಯಂಗಳದಿ ಅತಿಥಿಗಳ ಸ್ವಾಗತಿಸುವಳು.ಹಬ್ಬಗಳಲಿ ಇವಳದೇ ಸಡಗರ.ಇವಳಿಲ್ಲದಿರುವ ಮನೆ ಮಂದಿರ ಎನ್ನುವ ಸಾಲುಗಳು ಈ ಕವನದಲ್ಲಿ ಹಾಸುಹೊಕ್ಕಾಗಿವೆ.
ಬಾಳ ಮಾತು, ಘನಮತಿ.ಜೋಗುಳ ಹಾಡು.ಮಂದಸ್ಮಿತೆ.ಬಳೆಗಾರ,ಕವನಗಳು ಜನಪದ ಸಂಸ್ಕೃತಿಯ ಕುರುಹುಗಳಾಗಿ ಮೂಡಿ ಬಂದಿವೆ. ನಂತರ ಬಂದಿಹುದು ಭಾವಗೀತೆ. ವೈಯುಕ್ತಿಕ ಭಾವನೆಗಳನ್ನು ವ್ಯಕ್ತಪಡಿಸಿ ತನ್ನ ಭಾವವನ್ನು ವ್ಯಕ್ತಗೊಳಿಸುವ ಭಾವಗೀತೆ ಇಲ್ಲಿ ಕವಯತ್ರಿ ತನ್ನ ಭಾವನೆಯನ್ನು ತನ್ನಿಂದ ಹೊರಗೆ ನಿಂತು ವ್ಯಕ್ತಪಡಿಸಿದ ರೀತಿ ಈ ರೀತಿಯಲ್ಲಿದೆ.
ಸಖೀ ನಿನ್ನಯ ನೆನಪಿನಲ್ಲಿಯೆ
ಬರೆದಿನೊಂದು ಭಾವಗೀತೆ
ನನ್ನ ನಿನ್ನ ಬಾಲ್ಯವನ್ನು
ನೆನವ ಕನಸಿನ ಗೀತೆ
ನವ ಸ್ನೇಹಗಳಿಗೆ ಇಂದು
ಮಾದರಿ ಈ ಅಮರಗೀತೆ
ಇಲ್ಲಿ ಕವಯತ್ರಿ ತನ್ನ ಸ್ನೇಹದ ಪರಿಯನ್ನು ಭಾವಗೀತೆಯಾಗಿಸಿರುವರು.
ತಮ್ಮ ಸ್ನೇಹದ ಸವಿಯನ್ನು ಅನುಭವಿಸಿದ ರೀತಿಯನ್ನು ಇಲ್ಲಿ ಕಟ್ಟಿಕೊಟ್ಟಿರುವರು.ಸ್ನೇಹ ಒಂದು ರಸ ನಿಮಿಷ.ಗೆಳತೆನದ ರಮ್ಯ ವಿವರ ಇಲ್ಲಿ ಮೂಡಿ ಬಂದಿರುವುದು.ಮುಂದಿನ ಕವನ ನೆನಪೋಲೆ.ಹರಕೆ ನುಡಿ.ಕವನಗಳ ಮೂಲಕ ಕವನಗಳು ಕೊನೆಗೊಂಡಿವೆ. ಮೊದಲ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಇಲ್ಲಿನ ಕವನಗಳು ನಮ್ಮ ಭಾರತೀಯ ಸಂಸ್ಕೃತಿ ಅದರೊಳಗೆ ನಮ್ಮ ಜನಪದ ಬದುಕು ಗ್ರಾಮೀಣ ಸೊಗಡು ಮೇಳೈಸುವ ಮೂಲಕ ಕವನಗಳು ಮೂಡಿವೆ.ಮನುಷ್ಯ ಜೀವನದ ಒಂದು ಸಣ್ಣ ಘಟನೆ ಏನೇ ಆದರೂ ಅದು ಇಲ್ಲಿ ಕವನವಾಗಿರುವ ರೀತಿ ಅನನ್ಯ.ಇಲ್ಲಿ ಹಲವು ಕಥಬ ಕವನಗಳಿವೆ.ಷಟ್ಪದಿ ರಚನೆಗಳಿವೆ.ಹೊಸ ಕಾಲದ ಆಶೋತ್ತರಗಳಿಗೆ ಹಳೆಯ ನಂಬಿಕೆಗಳು ಸೇರುವ ಮೂಲಕ ಮೌಲ್ಯವನ್ನು ನೀಡಿವೆ.ಬೆಂಗಳೂರಿನ ಹೆಚ್.ಎಸ್.ಆರ್.ಎ.ಪ್ರಕಾಶನದವರು ಪ್ರಕಟಿಸಿರುವ ಇದು ೪೮ ಪುಟಗಳನ್ನು ಒಳಗೊಂಡಿರುವ ಈ ಕವನ ಸಂಕಲನ ಬೆಲೆ ೮೦ ರೂಪಾಯಿಗಳು. ಓದುಗರು ಇಂತಹ ಕವನಗಳನ್ನು ಕೊಂಡು ಓದುವ ಮೂಲಕ ಕವಯತ್ರಿಯವರಿಗೆ ಬೆಂಬಲಿಸುವುದು ಸೂಕ್ತ.
ಇದುವರೆಗಿನ ಬರವಣಿಗೆ
೩೦೦ಕ್ಕೂ ಹೆಚ್ಚು ಕವಿತೆಗಳು
೧೦ಕ್ಕೂ ಹೆಚ್ಚು ಬಿಡಿ ಲೇಖನಗಳು
೧೦ಕ್ಕೂ ಹೆಚ್ಚು ನ್ಯಾನೋ ಕತೆಗಳು
೫೦ಕ್ಕೂ ಹೆಚ್ಚು ವಚನಗಳು
ಮುದ್ದುಗಿಣಿ ಹಾಡಿಕುಣಿ ಎಂಬ ಮೊದಲ ಮಕ್ಕಳ ಕವನ ಸಂಕಲನ ೨೦೨೦ ರಲ್ಲಿ ಬಿಡುಗಡೆಗೊಂಡಿದೆ.ನಂತರ ಸ್ವರ ಚಂದಿರ ಕವನ ಸಂಕಲನ ಹೊರ ತಂದಿರುವರು ಈಗ ಧರಣಿಸುತೆ ಮಂದಸ್ಮಿತೆ ಪ್ರಕಟಿಸಿರುವರು.
ದಾವಣಗೆರೆಯ ಜನಮಿಡಿತ, ಟೈಮ್ಸ ಆಪ್ ಕರ್ನಾಟಕ,ಪಬ್ಲಿಕ್ ಟುಡೇ. ಜನ ಜೀವಾಳ ನಾಡಿನ ಅಸಮಾಚಾರ, ಜನ ಜೀವಾಳ ಮುಂತಾದ ಪತ್ರಿಕೆಗಳಲ್ಲಿ ಅನೇಕ ಲೇಖನ ಹಾಗೂ ಕವನಗಳ ಪ್ರಕಟಣೆ. ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ.
ಪ್ರಶಸ್ತಿಗಳು.
ಕರುನಾಡು ಸಾಹಿತ್ಯ ರತ್ನ- ಕರುನಾಡು ಸಾಹಿತ್ಯ ಪರಿಷತ್ತು ಬೆಂಗಳೂರು,
ರಂಗಕಾವ್ಯ ಸಾಹಿತ್ಯ ಸಿರಿ ಪ್ರಶಸ್ತಿ- ರಂಗಕುಸುಮ ಪ್ರಕಾಶನ(ರಿ) ರಾಣೆಬೆನ್ನೂರು,
ಕರ್ನಾಟಕ ವೈಭವ ರಾಷ್ಟ್ರಮಟ್ಟದ ವೈಚಾರಿಕ ಹಬ್ಬದಲ್ಲಿ ಕರುನಾಡ ಚರಿತೆ ಕವನ ವಾಚನಕ್ಕೆ ಸನ್ಮಾನ,
ಕಲಾಕುಂಚ ಸಾಂಸ್ಕ್ರತಿಕ ಸಂಸ್ಥೆ ಮತ್ತು ಸಂಜೆವಾಣಿ ಪತ್ರಿಕೆ ಏರ್ಪಡಿಸಿದ ಚಿತ್ರ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
ಸಿರಿಗನ್ನಡ ನುಡಿಬಳಗ ಕರ್ನಾಟಕ ಇವರು ಆಯೋಜಿಸಿದ ಆನ್ ಲೈನ್ ಕವನ ಸ್ಪರ್ಧೆಯಲ್ಲಿ ಭಗವಹಿಸಿ ಪ್ರೊ. ದೊಡ್ಡರಂಗೇಗೌಡರಿಂದ ಪ್ರಶಸ್ತಿ ಸ್ವೀಕಾರ.
ಗಣಕರಂಗ ಧಾರವಾಡ,
ಕವಿವೃಕ್ಷ ಬಳಗ ರಾಜ್ಯ ಘಟಕ ಹಾವೇರಿ,
ಭಾರತೀಯ ಸೃಜನಶೀಲ ಸಾಹಿತ್ಯ ಬಳಗ,
ಸಿರಿಗನ್ನಡ ನುಡಿಬಳಗ,
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ,
ಶುರು ವರ್ಡ ಕ್ರಿಯೇಶನ್ಸ್,
ಕರುನಾಡು ಸಾಹಿತ್ಯ ಪರಿಷತ್ತು ಬೆಂಗಳೂರು,
ಬೇಳಕು ಸಾಹಿತ್ಯ ವೇಧಿಕೆ,
ವಿಶ್ವಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ(ರಿ) ಹೊಸದುರ್ಗ, ಜಿ. ಚಿತ್ರದುರ್ಗ,
ಕವಿಕುಟುಂಬ ರಾಜ್ಯಘಟಕ(ರಿ) ಬಳ್ಳಾರಿ,
ಮುಂತಾದವರು ಆಯೋಜಿಸಿದ ನೂರಾರು ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ, ಅತ್ತ್ಯುತ್ತಮ, ಪ್ರಥಮ, ದ್ವಿತೀಯ ಸ್ಥಾನ ಪಡೆದಿರುವರು
ಇಂತಹ ಕವಯತ್ರಿ ಮುಂದಿನ ದಿನಗಳಲ್ಲಿ ಕೂಡ ಹೊರ ತರಲಿ.ಇವರ ಕವನ ಸಾಹಿತ್ಯ ಬರಹದ ಮೂಲಕ ಕೂಡ ಹೊರಹೊಮ್ಮಲಿ.ನಾಡಿನಾದ್ಯಂತ ಇವರ ಸಾಹಿತ್ಯ ಪ್ರಜ್ವಲಿಸಲಿ ಎಂದು ಆಶಿಸುವೆನು
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ. ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨