ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಾಲಾ ಸಮವಸ್ತ್ರದಲ್ಲಿ ನಡೆದ ಅವ್ಯವಹಾರ, ಹಾಗೂ ಜೆಓಸಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಇವತ್ತಿನ ಸಚಿವ ಸಂಪುಟದಲ್ಲಿ ಮಹತ್ವದ ತಿರ್ಮಾನ…
ಒಟ್ಟು 17 ವಿಷಯಗಳ ಕುರಿತು ಮಹತ್ವದ ತಿರ್ಮಾನ,ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ…
ಬೆಂಗಳೂರು: ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯೋದಕ್ಕೆ ಮುಂದಿನ ಆರು ತಿಂಗಳುಗಳ ಕಾಲಾವಕಾಶ ನೀಡುವುದು ಸೇರಿದಂತೆ ವಿವಿಧ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ
ಇಂದಿನ ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಹೈಲೈಟ್ಸ್ ಮುಂದೆ ಓದಿ.
ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ, ಸಚಿವ ಹೆಚ್ ಕೆ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದಿನ ಕ್ಯಾಬಿನೆಟ್ ಸಭೆಯಲ್ಲಿ 17 ವಿಷಯಗಳಿದ್ದವು. ಪಂಚಾಯತ್ ರಾಜ್ ಇಲಾಖೆಯಲ್ಲಿ ಸೂಕ್ತ ಅವಕಾಶ ಕಲ್ಪಿಸೋ ಸಲುವಾಗಿ ನ್ಯಾ.ಭಕ್ಸವತ್ಸಲ ಸಮಿತಿ ಶಿಫಾರಸ್ಸಿನ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕೆಪಿಎಸ್ಸಿ ಒಳಗೆ ಖಾಲಿ ಇರುವಂತ ಎರಡು ಸದಸ್ಯರ ಹುದ್ದೆಗಳ ಭರ್ತಿ ಮಾಡೋದಕ್ಕೆ ಚರ್ಚಿಸಲಾಯಿತು. ಅವುಗಳ ಭರ್ತಿಗೆ ಅನುಮತಿಸಲಾಗಿದೆ. ಸಿಎಂ ಸಿದ್ಧರಾಮಯ್ಯಗೆ ಅದರ ಅಧಿಕಾರವನ್ನು ನೀಡಲಾಗಿದೆ ಎಂದರು.
ಆರ್ಥಿಕ ಇಲಾಖೆಯ ಒಳಗೆ 5ನೇ ರಾಜ್ಯ ಹಣಕಾಸು ಆಯೋಗ ರಚನೆ ಬಗ್ಗೆ ಚರ್ಚಿಸಲಾಯಿತು. ಅಧ್ಯಕ್ಷರನ್ನು, ಇಬ್ಬರು ಸದಸ್ಯರನ್ನು ಈ ಆಯೋಗ ಹೊಂದಿರುತ್ತದೆ. ಆ ಮೂವರನ್ನು ನೇಮಕ ಮಾಡಲು ಸಿಎಂ ಅವರಿಗೆ ಅಧಿಕಾರವನ್ನು ನೀಡಲಾಗಿದೆ ಎಂದು ಹೇಳಿದರು.
ಮಂಡ್ಯ ವೈದ್ಯಕೀಯ ವಿದ್ಯಾಯ ಆವರಣದಲ್ಲಿ ಕ್ಯಾನ್ಸರ್ ಕೇಂದ್ರ ಮೇಲ್ದರ್ಜೆಗೆ ಏರಿಸಲು ಸಿವಿಲ್ ಕಾಮಗಾರಿ ನಡೆಸಲು 17 ಕೋಟಿ ರೂಪಾಯಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಗುಲ್ಬರ್ಗ ವೈದ್ಯಕೀಯ ಆವರಣದಲ್ಲಿ ನಿರ್ಮಿಸುತ್ತಿರುವಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ 162.80 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ನಿರ್ಮಿಸುತ್ತಿರುವಂತ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 29 ಕೋಟಿ ಅಂದಾಜಿಗೆ ಅನುಮೋದನೆ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ತಿದ್ದುಪಡಿ ವಿಧೇಯಕ ಮಂಡಿಸಲಾಗಿತ್ತು. ಅದಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. ಅದರಂತೆ ಮಲೆನಾಡಿನ ಪ್ರದೇಶ, ಬೆಟ್ಟಗಾಡು ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರ ಸಂಖ್ಯೆಯನ್ನು ಕಡಿಮೆಗೊಳಿಸೋದಾಗಿದೆ. ಇದೇ ಮಾದರಿಯಲ್ಲಿ ಶಿವಮೊಗ್ಗದ ಕೆಲವು ಭಾಗಗಳನ್ನು ಅಂದರೆ ಭದ್ರಾವತಿ, ಶಿಕಾರಿಪುರ, ಸೊರಬ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ 18 ರಿಂದ 25 ಸಾವಿರ ಜನಸಂಖ್ಯೆಗೆ ಒಬ್ಬ ಜಿಲ್ಲಾ ಪಂಚಾಯ್ತಿ ಸದಸ್ಯ ಎಂಬುದಾಗಿ ಆಯ್ಕೆ ಮಾಡೋದಕ್ಕೆ ಸಚಿವ ಸಂಪುಟ ಸಭೆ ಅನುಮೋದಿಸಲಾಗಿದೆ ಎಂದರು.
ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರ ಆಯ್ಕೆ ಸಂಖ್ಯೆಯನ್ನು 18 ರಿಂದ 25 ಸಾವಿರಕ್ಕೆ ಒಬ್ಬರಂತೆ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಜೆಓಸಿ ವ್ಯಾಸಂಗಕ್ಕೆ ಅನುಮತಿ ನೀಡಲಾಗಿದೆ. ಈ ಮೂಲಕ ಶಾಲಾ ಶಿಕ್ಷಣ ಇಲಾಖೆಯೊಂದಿಗೆ ವಿಲೀನಕ್ಕೆ ಅವರನ್ನು ಅವಕಾಶ ನೀಡಲಾಗಿದೆ. ಎರಡು ವರ್ಷದೊಳಗೆ ಜೆಓಸಿ ಉಪನ್ಯಾಸಕರು ಬಿಎಡ್ ಮುಗಿಸೋದಕ್ಕೆ ಅವಕಾಶ ನೀಡಲಾಗಿದೆ. 162 ಮಂದಿ ಜೆಓಸಿ ಉಪನ್ಯಾಸಕರು ಇದ್ದಾರೆ ಎಂದರು.
ಸಾರಿಗೆ ಇಲಾಖೆಯಿಂದ ಶಕ್ತಿ ಯೋಜನೆಯ ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸೋದಕ್ಕೆ ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಶಕ್ತಿ ಸ್ಮಾರ್ಟ್ ಕಾರ್ಡ್ ಗಡುವನ್ನು ಮತ್ತೆ ಆರು ತಿಂಗಳು ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಫಲಾನುಭವಿಗಳಿಗೆ ಒದಗಿಸುವಂತ ಪ್ರತಿ ಕಾರ್ಡ್ ಗೆ ರೂ.14.16 ಪೈಸೆ ಸೇವಾ ಶುಲ್ಕ ವಿಧಿಸೋದಕ್ಕೆ ಅನುಮೋದಿಸಲಾಗಿದೆ ಎಂದರು.
ಕೆ ಎಸ್ ಆರ್ ಟಿ ಸಿಯಿಂದ ಒಂದು ನೂರು ಕೋಟಿ ರೂ ವೆಚ್ಚದಲ್ಲಿ 250 ಹೊಸ ಬಸ್ಸುಗಳು, ಎನ್ ಡಬ್ಲ್ಯೂ ಕೆ ಎಸ್ ಆರ್ ಟಿಸಿ 350 ಹೊಸ ಬಸ್ ಕೆಕೆ ಎಸ್ 250 ಬಸ್, ಬಿಎಂಟಿಸಿ 350 ಎಸಿ ಎಲೆಕ್ಟಿಕ್ ಬಸ್ ಖರೀದಿಗೆ ಅನುದಾನವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಮುಂಗಾರು ಮಳೆ ಕೈಕೊಟ್ಟ ಬಗ್ಗೆ ಸುಧೀರ್ಘವಾಗಿ ಚರ್ಚೆಯನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಇನ್ನೂ ಹೆಚ್ಚಿನ ಮಾಹಿತಿ ಬರಬೇಕಾಗಿರುವುದರಿಂದ ಗ್ರೌಂಡ್ ರಿಪೋರ್ಟ್ ವರದಿಯನ್ನು ಆಧರಿಸಿ, ಮುಂದಿನ ವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂತಿಮವಾಗಿ ಸೂಕ್ತವಾಗಿ ಆದೇಶವನ್ನು ಹೊರಡಿಸಲಾಗುತ್ತದೆ ಎಂದರು.
ಈಗಾಗಲೇ ಸಿಎಂ ಸಿದ್ಧರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಬರ ಘೋಷಣೆ ಬಗ್ಗೆ ಯಾವ ಮಾನದಂಡವಿದೆಯೋ ಅವುಗಳನ್ನು ಸಡಿಲಿಸೋದಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಒದಗಿಸಿರುವ ಸಮವಸ್ತ್ರಗಳ ಬಾಕಿ ಬಿಲ್ ಬಗ್ಗೆ ಚರ್ಚೆ ನಡೆಯಿತು. ಸಮವಸ್ತ್ರ ಪೂರೈಸಿದ ಕೆಎಚ್ಡಿಸಿ ನೌಕರರಿಗೆ ಈ ಸಂಬಂಧ 14.48 ಕೋಟಿ ರೂ ಬಿಡುಗಡೆಗೆ ನಿರ್ಣಯ ಕೈಗೊಳ್ಳಲಾಗಿದೆ. ಇದಲ್ಲದೇ ಕೇಂದ್ರೀಯ ಭಂಡಾರದಿಂದ ಪೂರೈಸಲಾಗಿದ್ದ 90% ಶಾಲಾ ಸಮವಸ್ತ್ರ ಕಳಪೆ ಆಗಿತ್ತು. ಕಳಪೆ ಸಮವಸ್ತ್ರ ಪೂರೈಸಿದವರಿಗೆ ಹಣ ಕೊಡಲಾಗಿತ್ತು. ಕಳಪೆ ಸಮವಸ್ತ್ರ ಪೂರೈಕೆ ಪ್ರಕರಣವನ್ನು ತನಿಖೆ ಮಾಡಿಸಲು ತೀರ್ಮಾನಿಸಲಾಯ್ತು. ಕಳಪೆ ಸಮವಸ್ತ್ರ ಖರೀದಿ ಮಾಡಿದವರು, ಪೂರೈಸುದವರ ವಿರುದ್ಧ ಕ್ರಮಕ್ಕೆ ಮುಂದಾಗ್ತೀವಿ ಎಂದರು.
ಕಳಪೆ ಸಮವಸ್ತ್ರ ಪೂರೈಕೆದಾರರಿಗೆ ಎಷ್ಟು ಹಣ ಒದಗಿಸಲಾಗಿತ್ತು ಅಂತ ಮಾಹಿತಿ ತರಿಸಿ ಹೇಳ್ತೀವಿ. ಹಿಂದಿನ ಸರ್ಕಾರದಲ್ಲಿ ಕಳಪೆ ಸಮವಸ್ತ್ರ ಪೂರೈಕೆ ಮಾಡಲಾಗಿತ್ತು, ಹಣವೂ ಹಿಂದಿನ ಸರ್ಕಾರದಲ್ಲೇ ಕೊಡಲಾಗಿತ್ತು. ಆದರೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್ಡಿಸಿ)ಯಿಂದ ಪೂರೈಸಿದ್ದ ಸಮವಸ್ತ್ರದ ಗುಣಮಟ್ಟ ಚೆನ್ನಾಗಿದೆ. ಕೇಂದ್ರೀಯ ಭಂಡಾರದಿಂದ ಪೂರೈಸಿದ ಸಮವಸ್ತ್ರ ಕಳಪೆ, ಹೀಗಾಗಿ ಇದರ ತನಿಖೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.