ರಾಜ್ಯ ಶಾಲಾ ಶಿಕ್ಷಕರ ವೇತನ ಡಬಲ್; 7ನೇ ವೇತನ ಆಯೋಗಕ್ಕೆ ಈ 29 ಶಿಫಾರಸುಗಳ ದಾಖಲೆ ಸಲ್ಲಿಕೆ!
ರಾಜ್ಯ ಶಾಲಾ ಶಿಕ್ಷಕರ ವೇತನವನ್ನು ದುಪ್ಪಟ್ಟು ಮಾಡುವ ಬಗ್ಗೆ 7ನೇ ರಾಜ್ಯ ವೇತನ ಆಯೋಗಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮನವಿ ಮಾಡಿದೆ.
ಈ ಮನವಿಯನ್ನು ವೇತನ ಆಯೋಗವು ಪುರಸ್ಕರಿಸಿದ್ದೇ ಆದರೆ, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಲಿ ಪಡೆಯುತ್ತಿರುವ ಆರಂಭಿಕ ವೇತನ ಶ್ರೇಣಿಯಾದ 25800-51400 ರಿಂದ 51600-102800 ರೂಪಾಯಿಗೆ ದ್ವಿಗುಣಗೊಳ್ಳುತ್ತದೆ.
ರಾಜ್ಯದ ಶಿಕ್ಷಕರ ಕಾರ್ಯಭಾರ, ಜವಾಬ್ದಾರಿ ಕೆಲಸದ ಒತ್ತಡ ಹಾಗೂ ಅವರ ವಿದ್ಯಾರ್ಹತೆ, ಶ್ರಮಗಳ ಆಧಾರದ ಮೇಲೆ ವೇತನವನ್ನು ಹೆಚ್ಚಳ ಮಾಡಬೇಕು. ಅಲ್ಲದೆ, ಕರ್ನಾಟಕವು ಶೈಕ್ಷಣಿಕವಾಗಿ (Karnataka Educational Position) ಉನ್ನತ ಸ್ಥಾನದಲ್ಲಿದೆ. ನೆರೆಹೊರೆ ರಾಜ್ಯಗಳಿಗಿಂತ ಶಿಕ್ಷಣದಲ್ಲಿ ಕರ್ನಾಟಕವು ಅತ್ಯುತ್ತಮ ಸ್ಥಾನದಲ್ಲಿದ್ದು, ರಾಜ್ಯದ ಸಾಕ್ಷರತೆಯ ಪ್ರಮಾಣ (Karnataka Literacy Rate) ಶೇಕಡಾ 78.2ರಷ್ಟು ಇದೆ. ಇದಕ್ಕೆ ಬಹುಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ (Primary School Teachers) ಪರಿಶ್ರಮವೇ ಕಾರಣವಾಗಿದೆ ಎಂಬ ಅಂಶವು ವರದಿಯಲ್ಲಿದೆ. ಹೀಗಾಗಿ ಈ ಎಲ್ಲ ಅಂಶಗಳನ್ನೊಳಗೊಂಡ 100ಕ್ಕೂ ಹೆಚ್ಚು ಪುಟಗಳ ವರದಿಯೊಂದಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬುಧವಾರ (ಸೆಪ್ಟೆಂಬರ್ 6) 7ನೇ ರಾಜ್ಯ ವೇತನ ಆಯೋಗದೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ ನುಗ್ಗಲಿ, ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ಪ್ರಮೀಳಾ ಟಿ. ಕಾಮನಳ್ಳಿ ಸೇರಿದಂತೆ ಜಿಲ್ಲಾಧ್ಯಕ್ಷರು ಹಾಜರಿದ್ದರು.
ಶಿಕ್ಷಕರ ಸಂಘದ ಮನವಿಯ ಪ್ರಮುಖ ಅಂಶಗಳು
ರಾಜ್ಯದ ಶಿಕ್ಷಕರ ಕಾರ್ಯಭಾರ ಗುರುತಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿ 25800-51400 ಅನ್ನು ದ್ವಿಗುಣಗೊಳಿಸಿ 51600-102800 ರೂಪಾಯಿ ನಿಗದಿ ಮಾಡಬೇಕು. ಈ ಮೂಲಕ ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. ಆದರೆ ಅದರಂತೆ ವೇತನ ಶ್ರೇಣಿಯು ಹಾಲಿ ನೀಡುವ ವೇತನ ಶ್ರೇಣಿಯ ಬದಲಾಗಿ ಡಿಪ್ಲೋಮಾ ಪದವೀಧರರಿಗೆ ನೀಡುವ ವೇತನ ಶ್ರೇಣಿಗೆ ಸಮಾನವಾಗಿ ಶಿಫಾರಸು ಮಾಡಬೇಕು.
➤ ಮೇಲ್ಕಂಡ ರೀತಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡುವ ಕಾಲಮಿತಿ ಬಡ್ತಿ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ 51600-102800 ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು.
➤ 5ನೇಯ ವೇತನ ಆಯೋಗದ ಮಾದರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ ಹೆಚ್ಚಿನ ವೇತನ ಶ್ರೇಣಿ ನೀಡಲು ಪರಿಗಣಿಸದೇ ಇದ್ದಲ್ಲಿ ಇತರೆ ಸರ್ಕಾರಿ ನೌಕರರಿಗೆ ನೀಡುವ ವೇತನ ಹೆಚ್ಚಳಕ್ಕಿಂತ ಶೇಕಡಾ 20ರಷ್ಟು ವಿಶೇಷ ವೇತನ ನೀಡುವಂತೆ ಶಿಫಾರಸು ಮಾಡಬೇಕು.
➤ ಹುದ್ದೆ ಇದ್ದರೂ ಪ್ರತ್ಯೇಕ ವೇತನ ಶ್ರೇಣಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಇರುವುದಿಲ್ಲ. ಇದನ್ನು ಗಮನಿಸಿ, ಕೇರಳ ರಾಜ್ಯದ ಮಾದರಿಯಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಸೃಜಿಸುವುದರ ಜತೆಗೆ 15 ವರ್ಷದ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿ ನಂತರ ಇರುವ ವೇತನ ಶ್ರೇಣಿಗಳನ್ನು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಸೃಜಿಸಿ ಶಿಫಾರಸು ಮಾಡಬೇಕು.
➤ ವೇತನ ಶ್ರೇಣಿಗಳನ್ನು ನಿಗದಿಗೊಳಿಸುವಾಗ ಸೇವಾ ಹಿರಿತನದ ಆಧಾರದ ಮೇಲೆ (Service Weightage) ನೀಡಿ ವೇತನ ಶ್ರೇಣಿಗಳನ್ನು ನಿಗದಿಗೊಳಿಸಿ ವೇತನ ಬಡ್ತಿಗಳನ್ನು ನೀಡುವಂತೆ ಶಿಫಾರಸು ಮಾಡಬೇಕು.
➤ ವಾರ್ಷಿಕ ಬಡ್ತಿಗಳನ್ನು (Rate of Increments) ನೀಡುವಾಗ ಮೂಲ ವೇತನಕ್ಕೆ ಅನುಗುಣವಾಗಿ ಶೇಕಡಾ 5ರಷ್ಟು ಪ್ರಮಾಣದಲ್ಲಿ ವಾರ್ಷಿಕ ವೇತನ ಬಡ್ತಿ ದರಗಳನ್ನು ನಿಗದಿಗೊಳಿಸುವಂತೆ ಶಿಫಾರಸು ಮಾಡಬೇಕು.
➤ ಈಗಿರುವ ವೇತನ ಶ್ರೇಣಿಗಳ ವ್ಯವಸ್ಥೆಯಲ್ಲಿ ಕೂಡುವಿಕೆ (Bunching System) ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ನಿರೀಕ್ಷಿಸಿದ ಪ್ರಮಾಣದಷ್ಟು ವೇತನ ಹೆಚ್ಚಳವಾಗಿರುವುದಿಲ್ಲ. ಕಾರಣ ಒಂದು ವೇತನ ಶ್ರೇಣಿಯಿಂದ ಮತ್ತೊಂದು ವೇತನ ಶ್ರೇಣಿಗೆ ಗರಿಷ್ಠ ಪ್ರಮಾಣವನ್ನು ನಿಗದಿಗೊಳಿಸುವುದರ ಜತೆಗೆ ವೇತನ ಶ್ರೇಣಿಗಳನ್ನು ಸಂಪೂರ್ಣ ಪರಿಷ್ಕರಿಸಿ, ಪುನರ್ ರಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು.
ಉದಾಹರಣೆ:
➤ 1994 ರಿಂದ 1998 ರವರೆಗೆ ಸೇವೆಗೆ ಸೇರಿದವರ ವೇತನ ಶ್ರೇಣಿ ಒಂದೇ ಆಗಿದೆ.
➤ 2005ರಿಂದ 2008ರವರೆಗೆ ಸೇವೆಗೆ ಸೇರಿದ ಶಿಕ್ಷಕರ ವೇತನ ಶ್ರೇಣಿ ಒಂದೇ ಆಗಿದೆ.
ಈ ಕುರಿತು ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು “ಸೂಕ್ತ ಸೇವಾ ವೇಟೇಜ್” ಅನ್ನು ನೀಡಿ ಸೇವೆಯಲ್ಲಿ ಹಿರಿತನ ಹೊಂದಿದವರಿಗೆ ಸೇವೆಗನುಸಾರ ನ್ಯಾಯ ಒದಗಿಸಬೇಕು.
➤ ಪ್ರತಿ 5 ವರ್ಷಕ್ಕೆ ಮುಂದಿನ ವೇತನ ಶ್ರೇಣಿಗೆ ಶಿಕ್ಷಕರಿಗೆ ಮುಂಬಡ್ತಿ ನೀಡುವ ಕುರಿತು. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 156000 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದರಿಂದ, ಎಲ್ಲರಿಗೂ ಏಕಕಾಲಕ್ಕೆ ಬಡ್ತಿ ಸಿಗುವುದು ಕಷ್ಟ ಸಾಧ್ಯ. ಪ್ರತಿ 5 ವರ್ಷಕ್ಕೊಮ್ಮೆ ಮುಂದಿನ ಹಂತದ ವೇತನ ಶ್ರೇಣಿಗೆ (ಸೂಪರ್ ಟೈಮ್ ಸ್ಕೇಲ್ ಮಾದರಿಯಲ್ಲಿ) ಅವರ ವೇತನವನ್ನು ನಿಗದಿಗೊಳಿಸಿ ವೇತನ ಮುಂಬಡ್ತಿ ನೀಡಬೇಕು.
➤ ಮನೆ ಬಾಡಿಗೆ ಭತ್ಯೆ ಈಗಿರುವ ವ್ಯವಸ್ಥೆಯಲ್ಲಿ ಶೇಕಡಾ 8ರಷ್ಟು ಇದ್ದು, ಮನೆ ಬಾಡಿಗೆ ಭತ್ಯೆ ಶೇಕಡ 16ಕ್ಕೆ, ಶೇಕಡಾ 24ರಷ್ಟಿರುವ ಮನೆ ಬಾಡಿಗೆ ಭತ್ಯೆಯನ್ನು ಶೇಕಡಾ 35ಕ್ಕೆ ಹೆಚ್ಚಿಸಲು ಶಿಫಾರಸು ಮಾಡಬೇಕು.
➤ ಕನಿಷ್ಠ ವೇತನ 36,000 ರೂಪಾಯಿ ಹಾಗೂ ಗರಿಷ್ಠ ವೇತನ 310000 ರೂ. ನಿಗದಿಗೊಳಿಸಬೇಕು.
➤ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ವಿಷಯ ಪರಿವೀಕ್ಷಕ, ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಹುದ್ದೆಯ ವರೆಗೆ ಬಡ್ತಿ ನೀಡುವಂತೆ ಶಿಫಾರಸು ಮಾಡಬೇಕು. ವಿದ್ಯಾರ್ಹತೆಯ ಆಧಾರದ ಮೇಲೆಯೂ ಸಹ ಉಪನಿರ್ದೇಶಕರ ಹುದ್ದೆವರೆಗೆ ಬಡ್ತಿ ನೀಡುವಂತೆ ಶಿಫಾರಸು ಮಾಡಬೇಕು.
➤ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಸೇವೆಗೆ ಸೇರಿದ ಮೇಲೆ, ಬಡ್ತಿ ಹೊಂದಿದ ಮೇಲೆ ಅವರಿಗೆ ಅವರ ನಿರಂತರ ಸೇವೆಯನ್ನು ಪರಿಗಣಿಸಿ 15, 20, 25 ವರ್ಷದ ಬಡ್ತಿಗಳನ್ನು ನ್ಯಾಯಯುತವಾಗಿ ನೀಡಬೇಕು. ಆದರೆ, ಈ ರೀತಿ ಬಡ್ತಿಗಳನ್ನು ನೀಡದೇ ಇರುವುದರಿಂದ ಬಡ್ತಿ ಹೊಂದಿದ ಮುಖ್ಯಗುರುಗಳಿಗೆ ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಮುಂದಿನ ಹಂತಕ್ಕೆ ಬಡ್ತಿ ಹೊಂದಿದ ಶಿಕ್ಷಕರು ತಮಗಿಂತ ಸೇವೆಯಲ್ಲಿ ಕಡಿಮೆ ಸೇವೆ ಸಲ್ಲಿಸಿದ ನೌಕರರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ. ಕಾರಣ ಸದರಿ ವಿಷಯವನ್ನು 6ನೇ ವೇತನ ಆಯೋಗದಲ್ಲಿ ಶಿಫಾರಸು ಮಾಡಿದ್ದರೂ ಕೂಡ ಇದನ್ನು ಜಾರಿಗೊಳಿಸದೇ ಬಡ್ತಿ ಹೊಂದಿದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಇದನ್ನು ಅತ್ಯಂತ ನ್ಯಾಯಯುತವಾಗಿ ಗಮನಿಸಿ ಬಡ್ತಿ ಹೊಂದಿದ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಜತೆಗೆ ನಿರಂತರ ಸೇವೆಯನ್ನು ಪರಿಗಣಿಸಿ ವೇತನ ಬಡ್ತಿಗಳನ್ನು ನೀಡಬೇಕು.
➤ ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಸೌಲಭ್ಯ ಘೋಷಿಸಿದ್ದು, ಸದರಿ ಯೋಜನೆಯ ಆದೇಶದಲ್ಲಿ ಆಯಾ ವೃಂದದ ಕನಿಷ್ಠ ಮೂಲ ವೇತನದ ಪ್ರತಿಶತ 1ರಷ್ಟು ಮೊತ್ತವನ್ನು ಕಡಿತಗೊಳಿಸಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದು, ಸದರಿ ಆದೇಶವನ್ನು ಕೈಬಿಟ್ಟು ಪೋಲಿಸ್ ಇಲಾಖೆಯ ಆರೋಗ್ಯ ಬಾಗ್ಯ ಮಾದರಿಯಲ್ಲಿ ಉಚಿತವಾಗಿ ಸಂಪೂರ್ಣ “ನಗದು ರಹಿತ” ಯೋಜನೆ ಜಾರಿ ಮಾಡಬೇಕು.
➤ ವಾರದಲ್ಲಿ 5 ದಿವಸ ಕಾರ್ಯ ನಿರ್ವಹಿಸುವ ಶಾಲಾ ಆಡಳಿತ ವ್ಯವಸ್ಥೆ ಬೇರೆ ರಾಜ್ಯದಲ್ಲಿದ್ದು, ಅದೇ ಮಾದರಿಯಲ್ಲಿ ವಾರದಲ್ಲಿ 5 ದಿವಸಗಳು ಮಾತ್ರ ಶಾಲೆಗಳು ಕಾರ್ಯನಿರ್ವಹಿಸುವಂತೆ ಶಿಫಾರಸು ಮಾಡಬೇಕು.
➤ ಪ್ರತಿ ಸರ್ಕಾರಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕ ನೇಮಕಾತಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು.
➤ ಈಗಾಗಲೇ ಕೆಲವು ಸರ್ಕಾರಿ ಶಾಲೆಗಳಲ್ಲಿ LKG ಮತ್ತು UKG ಆರಂಭವಾಗಿದ್ದು, ಉಳಿದ ಎಲ್ಲ ಸರ್ಕಾರಿ ಶಾಲೆಗಳಲ್ಲಿ LKG ಮತ್ತು UKG ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು.
➤ ಎಲ್ಲ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ/ ಶಾರೀರಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿರುವುದರಿಂದ ರಾಜ್ಯದ ಎಲ್ಲ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ದೈಹಿಕ ಮತ್ತು ಉರ್ದು ಶಾಲಾ ಶಿಕ್ಷಕರಿಗೆ ಉನ್ನತ ಮಟ್ಟದ ಮುಂಬಡ್ತಿ ನೀಡುವಂತೆ ಶಿಪಾರಸು ಮಾಡುವುದು.
➤ ಪ್ರಾಥಮಿಕ ಶಾಲೆಯಲ್ಲಿ ಒಂದೇ ರೀತಿಯ ಆಡಳಿತ ವ್ಯವಸ್ಥೆ, ಬೋಧನಾ ವ್ಯವಸ್ಥೆ, ಪಠ್ಯವಸ್ತು, ಪಠ್ಯಕ್ರಮ ಒಂದೇ ಆಗಿದ್ದು, ಪ್ರತ್ಯೇಕ ವೇತನ ಶ್ರೇಣಿಗಳನ್ನು ನಿಗದಿಗೊಳಿಸುವುದರಿಂದ ಶಾಲಾ ಆಡಳಿತ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತದೆ, ಆದ್ದರಿಂದ ಪ್ರಾಥಮಿಕ ಶಾಲಾ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಗೆ ಯಾವುದೇ ಭೇದ-ಭಾವ ಮಾಡದೇ ಉನ್ನತವಾದ ಏಕರೂಪದ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕಾಗಿ ವಿನಂತಿ.
➤ ರಾಜ್ಯದಲ್ಲಿ ಹೊಸದಾಗಿ ವೃಂದ ಬದಲಾವಣೆಗಳನ್ನು ಮಾಡಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಒಂದು ರೀತಿಯ ವೇತನ ಶ್ರೇಣಿ, ಪದವಿ ಆಧಾರದ ಮೇಲೆ ಇನ್ನೊಂದು ವೇತನ ಶ್ರೇಣಿ ನಿಗದಿಗೊಳಿಸುವುದು ಪ್ರಾಥಮಿಕ ಶಾಲಾ ಆಡಳಿತ ದೃಷ್ಟಿಯಿಂದ ಸಮಂಜಸವಲ್ಲ. ಕಾರಣ ಪ್ರಾಥÀಮಿಕ ಶಾಲಾ ವೃಂದದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಶಿಕ್ಷಕರಿಗೆ ಉನ್ನತವಾದ ವೇತನವನ್ನು ನಿಗದಿಗೊಳಿಸಬೇಕಾಗಿ ವಿನಂತಿ.
ಕರ್ನಾಟಕ ರಾಜ್ಯದಲ್ಲಿ 3 ರೀತಿಯ ಶಾಲಾ ಆಡಳಿತ ವ್ಯವಸ್ಥೆ ಇದ್ದು:
➤ ಕಿರಿಯ ಪ್ರಾಥಮಿಕ ಶಾಲೆಗಳು
➤ ಹಿರಿಯ ಪ್ರಾಥಮಿಕ ಶಾಲೆಗಳು (250ಕ್ಕಿಂತ ಕಡಿಮೆ ಮಕ್ಕಳಿರುವ)
➤ ಪದವಿಧರೇತರ ಮಾದರಿ ಪ್ರಾಥಮಿಕ ಶಾಲೆಗಳು (250ಕ್ಕಿಂತ ಹೆಚ್ಚು ಮಕ್ಕಳಿರುವ)
ಕೇರಳ ಮಾದರಿಯಲ್ಲಿ ಪ್ರತ್ಯೇಕ ವೇತನ ಶ್ರೇಣಿ ನಿಗದಿಯಾಗಲಿ
ಕೇರಳ ಸರ್ಕಾರ ಇದೇ ರೀತಿಯಾದ 3 ಹಂತದಲ್ಲಿ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದು, ಆ ಮಾದರಿಯಲ್ಲಿ ರಾಜ್ಯದ 3 ಹಂತದ ಎಲ್ಲ ಶಾಲೆಗಳಿಗೆ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಮಂಜೂರು ಮಾಡುವುದರೊಂದಿಗೆ ಕೇರಳ ಸರ್ಕಾರದ ಮಾದರಿಯಲ್ಲಿ ಪ್ರತ್ಯೇಕವಾದ ವೇತನ ಶ್ರೇಣಿಗಳನ್ನು ನಿಗದಿಗೊಳಿಸುವಂತೆ ಶಿಫಾರಸು ಮಾಡಬೇಕು.
➤ ದೇಶಾದ್ಯಂತ ಒಂದೇ ರೀತಿಯ ಸೇವಾ ತೆರಿಗೆ ವ್ಯವಸ್ಥೆ ಇದ್ದು, ವೇತನ ವ್ಯವಸ್ಥೆಯಲ್ಲಿಯೂ ಸಹ ಒಂದೇ ರೀತಿ ಇರುವಂತೆ ಅಂದರೆ ಕೇಂದ್ರ ಸರ್ಕಾರಕ್ಕಿಂತ ಉನ್ನತವಾದ ವೇತನ ಶ್ರೇಣಿ ವ್ಯವಸ್ಥೆ ಇರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು.
➤ ಕೇರಳ ಸರ್ಕಾರ ಮೂಲ ವೇತನದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪಿಟ್‌ಮೆಂಟ್ ಅನ್ನು ನೀಡಿ ವಿಲೀನಗೊಳಿಸಿ, ಹೊಸ ವೇತನ ಶ್ರೇಣಿಗಳನ್ನು ಸೃಷ್ಟಿಗೊಳಿಸಿ ವೇತನ ನಿಗದಿಗೊಳಿಸಿದೆ, ಹೆಚ್ಚಿನ ಪಿಟ್‌ಮೆಂಟ್ ನೀಡಿದ್ದರಿಂದ ಮೂಲ ವೇತನ ಹೆಚ್ಚಳವಾಗಿದೆ. ಈ ಮೂಲ ವೇತನದಲ್ಲಿ ಇಂದಿನ ತುಟ್ಟಿಭತ್ಯೆಯನ್ನು ಮುಂದುವರಿಸಿಕೊಂಡು ಹೋಗಿದ್ದರಿಂದ ವೇತನದ ಪ್ರಮಾಣದಲ್ಲಿ ಹೆಚ್ಚಳವಾಗಿದೆ.ಈ ಕುರಿತು ಪರಿಶೀಲಿಸಿ ಶಿಕ್ಷಕರಿಗೆ ಹೆಚ್ಚಿನ ವೇತನ ಪ್ರಮಾಣವನ್ನು ನಿಗದಿಗೊಳಿಸಬೇಕು.
➤ ಸರ್ಕಾರಿ ಶಾಲೆಗಳಲ್ಲಿ ಗಣಕೀಕರಣ ಕೆಲಸ ಹಾಗೂ ಇಲಾಖೆಗೆ ಮಾಹಿತಿಯನ್ನು ಒದಗಿಸುವ ಕಾರ್ಯ ಹೆಚ್ಚು ಇರುವುದರಿಂದ ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳಿಗೆ ಒಬ್ಬ “ಶಾಲಾ ಸೇವಕರೆಂದು” (ದಿನಗೂಲಿ) ಆಧಾರದ ಮೇಲೆ ತೆಗೆದುಕೊಳ್ಳಲು ಮುಖ್ಯ ಗುರುಗಳಿಗೆ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗಿ ವಿನಂತಿ.
➤ ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ಗಳನ್ನು ಹಾಗೂ ಗಣಕಯಂತ್ರಗಳನ್ನು ಒದಗಿಸುವ ಮೂಲಕ ರಾಜ್ಯದ ಎಲ್ಲ ಶಾಲೆಗಳನ್ನು ಡಿಜಿಟಲ್ ಶಾಲೆಗಳಾಗಿ ಪರಿವರ್ತಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಬೇಕು.
➤ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳ ಪ್ರಕಾರ 150ಕ್ಕಿಂತ ಹೆಚ್ಚು ಮಕ್ಕಳಿರುವ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮಕ್ಕಳು : ಶಿಕ್ಷಕರ ಅನುಪಾತ (30:1) (Pupil Teachers Ratio) ಪರಿಗಣಿಸದೇ ಮುಖ್ಯ ಗುರುಗಳ ಹುದ್ದೆಯನ್ನು ಮಂಜೂರು ಮಾಡುವ ಅವಕಾಶವಿದ್ದು, ಸದರಿ ನಿಯಮದಂತೆ ಕ್ರಮಕೈಗೊಳ್ಳಲು ಶಿಫಾರಸು ಮಾಡಬೇಕು.
➤ 1ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 1ರಿಂದ 5ನೇ ತರಗತಿಯಲ್ಲಿ 150ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ 1 ಮುಖ್ಯ ಗುರುಗಳ ಹುದ್ದೆ ಹಾಗೂ 6 ರಿಂದ ೮ನೇ ತರಗತಿಯಲ್ಲಿ 100ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅದೇ ಶಾಲೆಗೆ ಇನ್ನೊಂದು ಮುಖ್ಯ ಗುರುಗಳ ಹುದ್ದೆಯನ್ನು ಮಂಜೂರು ಮಾಡಲು ಶಿಫಾರಸು ಮಾಡಬೇಕು.
➤ ಕರ್ನಾಟಕ ರಾಜ್ಯದಲ್ಲಿ NPS ಯೋಜನೆಗೆ ಒಳಪಡುವ ಲಕ್ಷಾಂತರ ನೌಕರರು/ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸದರಿ ನೌಕರರನ್ನು OPS ಯೋಜನೆಗೆ ಒಳಪಡಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಲಾಗಿದೆ.
➤ 2024-2025 ಕೇಂದ್ರ ಸರ್ಕಾರದ 8ನೇಯ ವೇತನ ಆಯೋಗ ರಚನೆಯಾಗಿ ವರದಿ ಕೊಡುವ ಸಂಭವವಿದೆ. ಈ ಅಂಶ ಪರಿಗಣಿಸಿ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ/ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಿ ಶಿಫಾರಸು ಮಾಡಬೇಕು.
➤ 6ನೇ ವೇತನ ಆಯೋಗದ ಸೌಲಭ್ಯಗಳು ದಿನಾಂಕ: 01-07-2017ರಿಂದ ದೇಶಾದ್ಯಂತ ಜಾರಿಯಾಗಿದ್ದು,, ದಿನಾಂಕ: 01-07-2022ಕ್ಕೆ 5 ವರ್ಷವಾಗುತ್ತಿರುವುದರಿಂದ 7ನೇ ವೇತನ ಆಯೋಗ ಸೌಲಭ್ಯಗಳನ್ನು ದಿನಾಂಕ: 01-07-2022 ರಿಂದಲೇ ಜಾರಿಗೊಳಿಸಬೇಕೆಂದು Notional ಆಗಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು.
➤ ಗ್ರಾಮೀಣ ಭತ್ಯೆ, SFN, ತರಬೇತಿ ಭತ್ಯೆ ಗಳಿಕೆ ರಜೆ ಹೆಚ್ಚು ಮಾಡುವ ಕುರಿತು ಸಾಂದರ್ಭಿಕ ರಜೆಗಳನ್ನು ಹೆಚ್ಚು ಮಾಡುವುದು.
ಹೀಗೆ ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯದ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮನವಿ ಮಾಡಿದೆ.