ಡಯಟ್ದಲ್ಲಿ ವಿದ್ಯುತ್ ಗ್ರಿಡ್ ಬೇಡ : ಇ.ಎಂ. ಸೂಚನೆ
ಸಭಾಪತಿ ಹೊರಟ್ಟಿ ಪತ್ರ ಆಧರಿಸಿ ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಶಿಕ್ಷಣ ಸಚಿವರ ಪತ್ರ..
ಧಾರವಾಡ : ನಗರದ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು (ಈಗಿನ ಡಯಟ್) ಆವರಣದಲ್ಲಿ ಉದ್ದೇಶಿತ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಸ್ಥಾಪನೆಯನ್ನು ಕೈಬಿಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿದ್ದ ಪತ್ರವನ್ನು ಆಧರಿಸಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಗತ್ಯ ಕ್ರಮಕೈಕೊಳ್ಳಲು ಶಿಕ್ಷಣ ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಸೂಚಿಸಿ ಪತ್ರ ಬರೆದಿದ್ದಾರೆ.
ಸರಕಾರದ ಆದೇಶ ಸಂಖ್ಯೆ : 09 ಯೋಸಕ 2009 ದಿನಾಂಕ : 19-03-2009ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆಯ ಸ್ಥಳ, ನಿವೇಶ, ಜಮೀನು ಮತ್ತು ಕಟ್ಟಡಗಳನ್ನು ಸರಕಾರಿ ಸ್ವಾಮ್ಯದ ಅನ್ಯ ಇಲಾಖೆಗಳಿಗೆ ಮತ್ತು ಖಾಸಗಿ ಸ್ವಾಮ್ಯದ ಯಾವುದೇ ಸಂಘ-ಸಂಸ್ಥೆಗಳಿಗೆ ಹಸ್ತಾಂತರ ಮಾಡಲು ಅವಕಾಶವಿಲ್ಲದಿರುವ ಬಸವರಾಜ ಹೊರಟ್ಟಿ ಅವರ ವಿಚಾರವನ್ನು ಶಿಕ್ಷಣ ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಯಟ್ ಆವರಣದಲ್ಲಿ ಪ್ರಾಥಮಿಕ ಶಾಲೆ ಇದ್ದು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಹಾಗೂ ಡಯಟ್ ಆವರಣದ ಸಾಗವಾನಿ ಮರಗಳ ಹಾನಿಯನ್ನು ತಪ್ಪಿಸಲು ಗ್ರಿಡ್ ಸ್ಥಾಪನೆಯ ವಿಚಾರ ಕೈಬಿಟ್ಟು, ಈ ಕುರಿತು ಸರಕಾರದ ಮೂಲಕ ಅಗತ್ಯ ಆದೇಶ ಮಾಡಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದ ವಿ.ಪ. ಸಭಾಪತಿ ಬಸವರಾಜ ಹೊರಟ್ಟಿ ಅವರ ಪ್ರಯತ್ನವನ್ನು ಡಯಟ್ ಹಳೆಯ ವಿದ್ಯಾರ್ಥಿಗಳ ವೇದಿಕೆಯ ಡಾ.ಗುರುಮೂರ್ತಿ ಯರಗಂಬಳಿಮಠ, ಎ.ಎ.ಕರಿಯಪ್ಪನವರ, ಎಸ್.ಡಿ. ಪವಾರ, ಅಶೋಕ ಚವ್ಹಾಣ, ಜಿ.ಎನ್. ಹೊಸಮನಿ, ಜಿ.ಕೆ. ಜುಜಾರೆ, ಟಿ.ಟಿ. ದಾಸರ ಇತರರು ಶ್ಲ್ಯಾಘಿಸಿದ್ದಾರೆ.
ಸ್ವಾಗತ: ಡಯಟ್ ಆವರಣದಲ್ಲಿ ಕೆ.ಇ.ಬಿ. ಗ್ರಿಡ್ ಸ್ಥಾಪನೆ ಕೈಬಿಡುವಂತೆ ಶಾಶ್ವತ ಆದೇಶ ಹೊರಡಿಸಲು ಶಾಲಾ ಶಿಕ್ಷಣ ಇಲಾಖೆಯ ಸರಕಾರದ ಕಾರ್ಯದರ್ಶಿ ಅವರಿಗೆ ಪತ್ರ ಬರೆದ ಸಚಿವ ಮಧು ಬಂಗಾರಪ್ಪ ಅವರ ಕ್ರಮವನ್ನು ಮತ್ತು ಬಸವರಾಜ ಹೊರಟ್ಟಿ ಅವರ ಪ್ರಯತ್ನವನ್ನು ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಸ್ವಾಗತಿಸಿದ್ದಾರೆ.