ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್
ಧಾರವಾಡ: ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ತಮ್ಮದೇ ಆದ ವಿಶಿಷ್ಟ ಪಾಂಡಿತ್ಯವನ್ನು ಹೊಂದಿರುವ ನಗರದ ಜಯದೇವ ಹಿರೇಮಠ ಅವರಿಗೆ ಅವರ ಜೀವಮಾನ ಸಾಧನೆಯನ್ನು ಪರಿಗಣಿಸಿ ಅಮೇರಿಕಾದ ಸೆಂಟ್ರಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.
ಭಾರತ ಹಾಗೂ ಕುವೈತ್ ರಾಷ್ಟçಗಳಲ್ಲಿಯ ಗ್ರಂಥಾಲಯ ವ್ಯವಸ್ಥೆ, ಜೊತೆಗೆ ಅದನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳುವ ಕುರಿತು ಅಪಾರ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಜಯದೇವ ಹಿರೇಮಠ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಭೂಪಾಲದ ದಿ. ಬ್ರಿಟಿಷ್ ಕೌನ್ಸಿಲ್ ಟೈಬ್ರರಿ, ಮುಂಬೈದ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಕ್ಯಾಪಿಟಲ್ ಮಾರ್ಕೆಟ್, ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಆ್ಯಂಡ್ ಬಿಲ್ಡಿಂಗ್ ಮಟೀರಿಯಲ್ ಸಂಸ್ಥೆಗಳಲ್ಲಿ ಗ್ರಂಥಪಾಲಕರಾಗಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.
ಅಮೇರಿಕನ್ ಯುನಿರ್ವಸಿಟಿ ಆಫ್ ಕುವೈತ್ ಹಾಗೂ ಇಂಡಸ್ಟ್ರಿಯಲ್ ಬ್ಯಾಂಕ್ ಆಫ್ ಕುವೈತ್ ಸಂಸ್ಥೆಗಳ ಸಂಲಗ್ನತೆಯೊಂದಿಗೆ ಅಲ್ಲಿಯ ಗ್ರಂಥಾಲಯಗಳನ್ನು ಹೊಸ ವಿನ್ಯಾಸ ಮತ್ತು ಮಾಹಿತಿ ವಿಜ್ಞಾನದೊಂದಿಗೆ ಆಧುನೀಕರಣಗೊಳಿಸುವಲ್ಲಿ ಜಯದೇವ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ತಂತ್ರಜ್ಞಾನವನ್ನು ಪರಿಚಯಿಸಿ, ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳ ಹಂಚಿಕೆಯಲ್ಲಿ ಪರಿಣಾಮಕಾರಿತ್ವ ಹಾಗೂ ವೇಗವನ್ನು ತರುವುದರ ಮೇಲೆ ಇವರ ಚಿಂತನೆ ಕೇಂದ್ರೀಕೃತವಾಗಿದೆ.
ಭಾರತೀಯ ಗ್ರಂಥಾಲಯಗಳ ಸಂಘ, ಇಂಡಿಯನ್ ಅಸೋಸಿಯೇಷನ್ ಆಫ್ ಸ್ಪೆಷಲ್ ಲೈಬ್ರರೀಸ್ ಆ್ಯಂಡ್ ಇನ್‌ಫರ‍್ಮೇಷನ್ ಸೆಂಟರ್ಸ ಅಮೇರಿಕಾದ ವಿಶೇಷ ಗ್ರಂಥಾಲಯಗಳ ಸಂಘ, ಇಂಗ್ಲೆಂಡಿನ ವಿಶೇಷ ಗ್ರಂಥಾಲಯಗಳು ಹಾಗೂ ಮಾಹಿತಿ ವಿನಿಮಯ ಕೇಂದ್ರಗಳ ಸಂಘದ ಆಜೀವ ಸದಸ್ಯರಾಗಿದ್ದು, ಭಾರತದ ಹಲವಾರು ಸಲಹಾ ಮಂಡಳಿಗಳ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಕ.ವಿ.ವಿ. ಮೂಲಕ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ಮೊದಲ ರ‍್ಯಾಂಕ್‌ದೊಂದಿಗೆ ಪದವಿ ಪಡೆದಿರುವ ಜಯದೇವ ಅವರು, ಕನ್ನಡ ವಾಙ್ಮಯ ಲೋಕದ ಹಿರಿಯ ವಿದ್ವಾಂಸ ಡಾ. ಪಂಚಾಕ್ಷರಿ ಹಿರೇಮಠ ಅವರ ಹಿರಿಯ ಪುತ್ರ.
—————————————————————-