ತವರಿನ ಪಂಚಮಿ
ನಾಗರ ಪಂಚಮಿ ಹೋಗಿನಾ ಬರತೀನಿ
ಬೇಗನೆ ಅಪ್ಪಣೆ ಕೊಡುರಾಯ//ತವರಿನ
ಬಾಗೀನ ತರುವೆ ಬರುವಾಗ
ತಾಯವ್ವ ನೆನೆಸ್ಯಾಳ ಕಾಯುತ ಕುಳಿತಾಳ
ಬಾ, ಯವ್ವ ಮಗಳೆ ಅಂದಾಳ/ತವರಿನ
ಮಾಯವ್ವ ದೇವಿಗೆ ಬೇಡ್ಯಾಳ
ಗೆಳೆತ್ಯಾರು ಬರುತಾರ ಹಳೆನೆನಪ ತರತಾರ
ಬಳೆಯ ತೊಡಲಾಕ ಕರಿತಾರ/ತವರಿನ
ಹೊಳೆಯ ದಂಡ್ಯಾಗ ಕೂಡ್ಯಾರ
ಸೆರಗ ನಡುವಿಗೆ ಸಿಗ್ಸಿ ನೆರಿಗೆ ಕಚ್ಚಿಯ ಹಾಕಿ
ಸರಭರ ಎಲ್ಲರೂ ಸೇರುತ/ತವರಿನ
ಮರದ ಜೋಕಾಲಿ ಆಡ್ಯಾರ
ಪಂಚಮಿ ದಿನದಂದು ಪಂಚ ಮುತ್ತೈದೆಯರು
ಹಂಚಿ ಹಾಲನ್ನು ಎರೆಯುತ/ತವರಿನ
ಮಿಂಚಂತೆ ಹೊಳೆಯೋ ನೀರೇರು.
ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ