ಜೀವ ಶಿವನಾಗುವ ಬಗೆ ಅರಿಯಲು ಶ್ರಾವಣ : ಅಭಿನವ ಶ್ರೀ
ಧಾರವಾಡ :ಜೀವನು ಶಿವನಾಗುವ ಬಗೆಯನ್ನು ಅರಿಯಲು ಶ್ರಾವಣ ಮಾಸದ ಆಚರಣೆ ಬೆಳಕು ತುಂಬುತ್ತದೆ ಎಂದು ಸಮೀಪದ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಗುರುವಾರ ತಮ್ಮ ಶ್ರೀಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀವೀರೇಶ್ವರ ಶರಣರ ಪುರಾಣ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಶ್ರಾವಣದ ಒಂದು ತಿಂಗಳ ಅವಧಿಯಲ್ಲಿ ಇಷ್ಟಲಿಂಗಾನುಸಂಧಾನ ಹಾಗೂ ಶರಣರ ಅನುಭಾವದ ವ್ಯಕ್ತಿತ್ವ ಅರಿತು ಅವರ ಸಾಧನೆಯ ರಹದಾರಿಯಲ್ಲಿ ಬದುಕನ್ನು ತೆರೆದುಕೊಳ್ಳಲು ಶ್ರಾವಣವು ಮಾರ್ಗದರ್ಶಿಯಾಗಿದೆ ಎಂದೂ ಅವರು ಹೇಳಿದರು.
ಬೈಲಹೊಂಗಲ ತಾಲೂಕು ದೊಡವಾಡ ಹಿರೇಮಠದ ಶ್ರೀಜಡೆ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲೌಕಿಕ ಮತ್ತು ಅಲೌಕಿಕವಾದ ತೌಲನಿಕ ಚಿಂತನೆಗೆ ತೊಡಗಿಕೊಂಡು ಮೋಕ್ಷ ಪ್ರಾಪ್ತಿಗೆ ಅಗತ್ಯವಾದ ಜ್ಞಾನ ಸಂಪಾದನೆ ಮಾಡಲು ಶ್ರಾವಣ ಮಾಸವು ಸಹಕಾರಿಯಾಗಿದೆ ಎಂದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪುರಾಣ ಪ್ರವಚನ ಉದ್ಘಾಟಿಸಿದರು. ಮಂಡಳ ಪಂಚಾಯತಿ ಮಾಜಿ ಸದಸ್ಯ ವಿರೂಪಾಕ್ಷಪ್ಪ ಜಕ್ಕಣ್ಣವರ, ಕವಿವಿ ನೌಕರರ ಸಹಕಾರಿ ಸಂಘದ ಅಧ್ಯಕ್ಷ ವಿಜಯಾನಂದ ಇಟಗಿ, ಕಿ.ರಾ.ಚೆನ್ನಮ್ಮ ಸೌಹಾರ್ದ ಸಹಕಾರಿ ಇನಾಂಹೊಂಗಲ ಶಾಖೆ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ, ಬಸವರಾಜ ಕೊಳ್ಳಿ, ಚೆನ್ನಬಸಪ್ಪ ಪೂಜಾರ, ರಾಮಣ್ಣ ಹುಲ್ಲೂರ, ಮಲ್ಲಪ್ಪ ಮೇಟಿ, ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಇತರರು ಇದ್ದರು. ನಾಗರಾಜ ಕಾಡಸಿದ್ದಣ್ಣವರ ಹಾಗೂ ಮಡಿವಾಳಯ್ಯ ಶಹಾಪೂರಮಠ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು.