ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸಬೇಕಾದ ಶಿಕ್ಷಕನೇ ಅಪ್ರಾಪ್ತೆಯನ್ನು ರಹಸ್ಯವಾಗಿ ಮದುವೆಯಾದ ಘಟನೆ ಭಾಲ್ಕಿ ತಾಲೂಕಿನ ಗಡಿ ಗ್ರಾಮ ಹಲಸಿ ತುಗಾಂವ್ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಸಂದೀಪ್ ಕುಮಾರ್ ಅಜೂರೆ ಎಂಬುವವನೇ ವಿದ್ಯಾರ್ಥಿನಿಯನ್ನ ಪುಸಲಾಯಿಸಿ ಮದುವೆಯಾಗಿದ್ದಾನೆ.ಈ ಕುರಿತು ಭಾಲ್ಕಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಬಾಳುವಾಲೆ ಅವರು ಮೇಹಕರ್ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಆಗಸ್ಟ್ 5 ರಂದು ದೂರು ದಾಖಲಿಸಿದ್ದು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜೂನ್ 6ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕ ಸಂದೀಪ್ ಕುಮಾರ್ ಅಜೂರೆ ಮದುವೆಗೆ ಸಂಬಂಧಿಸಿದ ಭಾವಚಿತ್ರ ಹಾಗೂ ಶಾಲಾ ದಾಖಲಾತಿ ವಿವರವನ್ನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಿದ್ದು , ಇದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಾಠ ಹೇಳಬೇಕಾದ ಶಿಕ್ಷಕರೇ ಈ ರೀತಿ ದುಷ್ಕೃತ್ಯ ಎಸಗಿದ್ದು ಶೋಚನೀಯ ಸಂಗತಿಯಾಗಿದೆ.