1 ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ//ಶೇಂಗಾ ಚಿಕ್ಕಿ/ಬಾಳೇಹಣ್ಣನ್ನು ವಿತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದ್ದಂತೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ//ಶೇಂಗಾ ಚಿಕ್ಕಿ/ಬಾಳೇಹಣ್ಣನ್ನು ವಿತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶ ಹೊರಡಿಸಿದೆ.
1ರಿಂದ 8ನೇ ತರಗತಿವರೆಗೂ ಇದ್ದ ಯೋಜನೆಯನ್ನು 9 ಮತ್ತು 10ನೇ ತರಗತಿ ಮಕ್ಕಳಿಗೂ ವಿಸ್ತರಿಸಲಾಗಿದೆ. ವಾರದಲ್ಲಿ ಒಂದು ದಿನ ನೀಡುತ್ತಿದ್ದ ಯೋಜನೆಯನ್ನು ಎರಡು ದಿನಗಳಿಗೆ ವಿಸ್ತರಿಸಿದೆ. ಇದಕ್ಕಾಗಿ 280 ಕೋಟಿ ರೂ,ಗಳಿಗೆ ಅನುಮತಿ ನೀಡಿ ಇಲಾಖೆ ಅಧೀನ ಕಾರ್ಯದರ್ಶಿ (ಯೋಜನೆ) ಆದೇಶ ಹೊರಡಿಸಿದ್ದಾರೆ.
ಕ್ಷೀರಭಾಗ್ಯ ಯೋಜನೆಗೆ 235.5 ಕೋಟಿ ರೂ., ಅಡುಗೆ ವೆಚ್ಚ (ಕೇಂದ್ರದ ಪಾಲು )26.56 ಕೋಟಿ ರೂ. ಮತ್ತು ರಾಜ್ಯದ ಪಾಲು 17.7 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪೂರಕ ಪೌಷ್ಟಿಕಾಂಶದ ರೂಪದಲ್ಲಿ ವಾರ್ಷಿಕ 80 ದಿನಗಳಿಗೆ ಅಂದಾಜು 60 ಲಕ್ಷ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಎಂದು ತಿಳಿಸಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ//ಶೇಂಗಾ ಚಿಕ್ಕಿ/ಬಾಳೇಹಣ್ಣನ್ನು ವಿತರಿಸುವ ಸಂಬಂಧ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಇಲಾಖೆ ಆಯುಕ್ತರು ಪ್ರತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸುವಂತೆ ಸೂಚಿಸಿದ್ದಾರೆ.
9 ಮತ್ತು 10ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಬೇಕೆಂದು ಹಲವು ಜನಪ್ರತಿನಿಧಿಗಳು ಆಗ್ರಹಿಸಿದ್ದರು. ಆದರೆ, ಯೋಜನೆ ಸಾಕಾರಗೊಂಡಿರಲಿಲ್ಲ. ಈಗ ಅಧಿಕೃತ ಆದೇಶ ಹೊರಬಿದ್ದಿದೆ.