‘ಡಯಟ್ ಆವರಣದಲ್ಲಿ ವಿದ್ಯುತ್ ಗ್ರಿಡ್ ಬೇಡ’
ಶಾಲಾ ಶಿಕ್ಷಣ ಸಚಿವರಿಗೆ ಹಾಗೂ ಡಿ.ಸಿ.ಗೆ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಪತ್ರ
ಧಾರವಾಡ : ದಕ್ಷಿಣ ಭಾರತದಲ್ಲಿಯೇ ಪ್ರಥಮ ಕನ್ನಡ ಶಿಕ್ಷಕರ ತರಬೇತಿ ಕೇಂದ್ರವಾಗಿರುವ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಆವರಣದಲ್ಲಿ ಉದ್ದೇಶಿತ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಸ್ಥಾಪನೆಯನ್ನು ಕೈಬಿಡುವಂತೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಪತ್ರ ಬರೆದಿದ್ದಾರೆ.
1856ರಲ್ಲಿಯೇ ಆರಂಭಗೊಂಡಿರುವ ಡಯಟ್ ಸಂಸ್ಥೆ ಕನ್ನಡ ಭಾಷೆ, ನುಡಿ, ನೆಲ, ಸಾಹಿತ್ಯ ಮತ್ತು ಶಿಕ್ಷಣವನ್ನು ಅಭಿವೃದ್ಧಿಗೊಳಿಸಿದೆ. ಜೊತೆಗೆ ಶಿಕ್ಷಕರಿಗೆ ತರಬೇತಿ ನೀಡಿಕೆ, ಕಲಿಕಾ ಸಂಶೋಧನೆ, ಪಠ್ಯಕ್ರಮ ಸಾಹಿತ್ಯ ರಚನೆ, ಪಠ್ಯವಸ್ತು ನಿರ್ವಹಣೆ ಮತ್ತು ಅನುಷ್ಠಾನ, ಜಿಲ್ಲೆಯ ಕಲಿಕಾ ಚಟುವಟಿಕೆಗಳ ವಾರ್ಷಿಕ ಯೋಜನೆ ತಯಾರಿಕೆ, ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಅನೇಕ ಮಹತ್ವದ ಕೆಲಸಗಳು ಡಯಟ್ ಮೂಲಕ ನಡೆಯುತ್ತಿವೆ. ಸುಮಾರು 167 ವರ್ಷಗಳಷ್ಟು ಹಳೆಯದಾದ ‘ಪಾರಂಪರಿಕ ಕಟ್ಟಡಗಳ ತಾಣ’ವಾಗಿರುವ ಡಯಟ್ ಆವರಣದಲ್ಲಿ ಹುಬ್ಬಳ್ಳಿಯ ಹೆಸ್ಕಾಂ ಮೂಲಕ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಕೈಬಿಡುವಂತೆ ಅವರು ಸೂಚಿಸಿದ್ದಾರೆ.
ಸರಕಾರದ ಆದೇಶ ಸಂಖ್ಯೆ : 09 ಯೋಸಕ 2009 ದಿನಾಂಕ : 19-03-2009ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆಯ ನಿವೇಶ, ಜಮೀನು ಮತ್ತು ಕಟ್ಟಡಗಳನ್ನು ಸರಕಾರಿ ಸ್ವಾಮ್ಯದ ಅನ್ಯ ಇಲಾಖೆಗಳಿಗೆ ನೀಡಲು ಮತ್ತು ಹಸ್ತಾಂತರ ಮಾಡಲು ಅವಕಾಶವಿಲ್ಲದಿರುವ ವಿಷಯವನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡಯಟ್ ಆವರಣದಲ್ಲಿ ನಿರಂತರ ಶಿಕ್ಷಕರ ತರಬೇತಿಗಳು ನಡೆಯುವುದರಿಂದ ಹಾಗೂ ಇಲ್ಲಿ ಪ್ರಾಥಮಿಕ ಶಾಲೆ ಇದ್ದು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಉದ್ದೇಶಿತ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಸ್ಥಾಪನೆಯ ವಿಚಾರ ಕೈಬಿಡಲು ಹಾಗೂ ಧಾರವಾಡದ ಸರಕಾರಿ ಮಹಿಳಾ ಪದವಿ ಕಾಲೇಜಿಗೆ ಡಯಟ್ ಆವರಣದ ಕೊಠಡಿಗಳನ್ನು ಹಸ್ತಾಂತರ ಮಾಡದಂತೆ ಸಭಾಪತಿ ಬಸವರಾಜ ಹೊರಟ್ಟಿ ಡಿ.ಸಿ.ಗೆ ಸೂಚನೆ ನೀಡಿದ್ದಾರೆ.