ಹಿರಿಯ ಸಮಾಜ ಸೇವಕ
ಮಲ್ಲಪ್ಪ ಕಂಬಳಿ ಇನ್ನಿಲ್ಲ
ಸವದತ್ತಿ : ಕೃಷಿ, ಶಿಕ್ಷಣ, ಸಹಕಾರ, ಧರ್ಮ ಸೇವಾ ಕ್ಷೇತ್ರಗಳೂ ಸೇರಿದಂತೆ ನಾಲ್ಕೂ ನಿಟ್ಟಿನಿಂದ ಸುಮಾರು 5 ದಶಕಗಳಕಾಲ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆ ಗೈದಿದ್ದ ಮೂಲತಃ ತಾಲೂಕಿನ ಮುರುಗೋಡ ಗ್ರಾಮದವರಾದ ಮಲ್ಲಪ್ಪ ಸೋಮಪ್ಪ ಕಂಬಳಿ (92) ಅವರು ಶನಿವಾರ ಏಣಗಿ ಗ್ರಾಮದಲ್ಲಿ ನಿಧನರಾದರು.
ಸವದತ್ತಿ ಹಾಗೂ ಬೈಲಹೊಂಗಲ ತಾಲೂಕುಗಳ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿಭಿನ್ನ ನೆಲೆಯ ಜನಪರ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಮಲ್ಲಪ್ಪ ಕಂಬಳಿ ಅವರು, ಮುರುಗೋಡದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪ್ರತಿಷ್ಠಿತ ಶ್ರೀಮಹಾಂತೇಶ ಶಿಕ್ಷಣ ಸಂಸ್ಥೆಯ ಸದಸ್ಯರಾಗಿ, ಜಿಲ್ಲೆಯ ಹಾಲುಮತ ಸಮಾಜದ ಹಿರಿಯ ಮುಖಂಡರಾಗಿ, ಜೊತೆಗೆ ಶ್ರೇಷ್ಠ ಕೃಷಿಕರಾಗಿ ಅನುಪಮ ಸೇವೆಸಲ್ಲಿಸಿದ್ದರು.
ಮೂರು ಜನ ಪುತ್ರರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳೂ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಲ್ಲಪ್ಪ ಕಂಬಳಿ ಅವರ ಮೊಮ್ಮಗ ವಿಜಯ ಪುಂಡಲೀಕ ಕಂಬಳಿ ಭಾರತೀಯ ನೌಕಾಪಡೆಯಲ್ಲಿ ಕಮಾಂಡರ್ ಆಗಿ ಸೇವೆಸಲ್ಲಿಸುತ್ತಿದ್ದಾರೆ. ರವಿವಾರ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಜರುಗಿದ ಅಂತ್ಯಕ್ರಿಯೆಯಲ್ಲಿ ಮುರುಗೋಡದ ಶ್ರೀದುರುದುಂಡೇಶ್ವರ ಮಠದ ಶ್ರೀನೀಲಕಂಠ ಸ್ವಾಮಿಗಳು, ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.