ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು
ಜೀವನದನಂತ ದುರ್ಭರ ಭವಣೆ ನೋವುಗಳ
ಕಾವುಗಳ ಮೌನದಲಿ ನುಂಗಿರುವೆನು
ಗೆಳೆತನವೆ ಚಿರಬಾಳ ಸಂಜೀವಿನಿ ವಿಶ್ವದಂತಃಕರಣ ಮಂದಾಕಿನಿ
ಮೇಲಿನ ಈ ಸಾಲುಗಳು ಚನ್ನವೀರ ಕಣವಿಯವರ ಪದ್ಯದಲ್ಲಿ ಗೆಳೆತನದ ಕುರಿತು ಮೂಡಿ ಬಂದವುಗಳು.ನಾವು ಈ ಪದ್ಯವನ್ನು ನಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ಕಂಠಪಾಠ ಮಾಡಿ ಹಾಡುತ್ತಿದ್ದೆವು.ಆಗ ನಮಗೆ ಗೆಳೆತನದ ಮಹತ್ವದ ಕುರಿತು ನಮ್ಮ ಮೇಷ್ಟ್ರು ಈ ಪದ್ಯವನ್ನು ವಿವರಿಸುವ ಸಂದರ್ಭದಲ್ಲಿ ಹೇಳಿದ್ದ ನೆನಪು. ಆದರೆ ಗೆಳೆತನದ ಕುರಿತು ನಾವು ನಮಗೆ ತಿಳುವಳಿಕೆ ಬಂದ ನಂತರ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಅಂದರೆ ಅತಿಶಯೋಕ್ತಿಯಲ್ಲ.
ಗೆಳೆತನವೆಂಬ ಸುವಿಶಾಲ ವೃಕ್ಷ ತನ್ನ ಕೆಳಗೆ ದಣಿದು ಬಂದ ಮನಕ್ಕೆ ಅದರ ಪ್ರೀತಿಯ ತಂಪಾದ ನೆರಳು ಮುದ ನೀಡುವ ಅನುಭವ ಬಣ್ಣಿಸಲು ಅಸಾಧ್ಯ.ಸ್ನೇಹ ಎಂಬುವುದು ಮಧುರ ಅನುಭೂತಿಯ ಅನುಬಂಧವಾಗಿದ್ದು ಎಲ್ಲಾ ಕಟ್ಟುಪಾಡುಗಳನ್ನು ಮೀರಿದ ಪವಿತ್ರವಾದ ಸಂಬಂಧವಾಗಿದೆ. ಬಲ್ಲವನೇ ಬಲ್ಲ ಬೆಲ್ಲದ ರುಚಿಯನ್ನು ಎಂಬಂತೆ ಸ್ನೇಹದ ಸವಿ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯಇಂದು ಸ್ನೇಹಿತರ ದಿನ. ಸ್ನೇಹಿತರ ದಿನದ ಆಚರಣೆ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಡುಗೆಯಾದರೂ ಇಡೀ ವಿಶ್ವವೇ ನನ್ನ ಕುಟುಂಬ ಎಂದು ಸಂದೇಶ ಸಾರಿದ ಭಾರತೀಯ ಸಂಸ್ಕೃತಿ ನಮ್ಮದು.
ಮನುಷ್ಯನು ಮಾತ್ರವೇ ಗೆಳೆತನದ ಅರ್ಥವನ್ನು ಅರಿತುಕೊಳ್ಳುತ್ತಾನೆ ಮತ್ತು ವರ್ಷದಲ್ಲಿ ಒಂದಿಡೀ ದಿನವನ್ನು ಗೆಳೆತನಕ್ಕೆ, ಗೆಳೆಯರಿಗಾಗಿ ಮೀಸಲಿಡುತ್ತಾನೆ. ಪ್ರತಿ ವರ್ಷದ ಆಗಸ್ಟ್ ಮೊದಲ ಭಾನುವಾರವನ್ನು ಗೆಳೆತನ ದಿನಾಚರಣೆ ಎಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಕಾರಣಕ್ಕೆ ಎಲ್ಲರಿಗೂ ಗೆಳೆತನ ದಿನಾಚರಣೆಯ ಶುಭಾಶಯಗಳು.
ಇಲ್ಲಿ ಯಾವುದೆ ರಕ್ತ ಸಂಬಂಧ ಇಲ್ಲ, ಯಾವುದೇ ಭಯ ಇಲ್ಲ, ಯಾವುದೇ ಆತಂಕವಿಲ್ಲ, ಯಾವುದೇ ಅಹಂಕಾರ ಇಲ್ಲ, ಎಲ್ಲವೂ ಮುಕ್ತ, ಎಲ್ಲವೂ ಸ್ವತಂತ್ರ ಅದುವೆ ಗೆಳೆತನ,ಇದು ಎಲ್ಲಾ ಸಂಬಂಧಗಳಿಗೂ ಮಿರಿಸು ಸಂಬಂಧ…..ಎಲ್ಲಾ ಸಂಬಂಧಗಳಲ್ಲಿ ಕೆಲವೊಂದು ಭಾವನೆಗಳನ್ನು ವ್ಯಕತಪಡಿಸಲು ಆಗುವುದಿಲ್ಲ,ಆದ್ರೆ ಅಂತರಾಳದ ಮಾತುಗಳಿಂದ ಹಾಸ್ಯಾಸ್ಪದ ಮಾತುಗಳಿಗೆ ಅವಕಾವಿರುವದು.ಇಲ್ಲಿ ಹೆಣ್ಣು ಗಂಡು ಎನ್ನುವ ಭೇದ ಇರಬಾರದು.ಯಾಕಂದ್ರೆ ಗೆಳೆತನ ಪವಿತ್ರವಾದ ಸಂಬಂಧ,ಇಲ್ಲಿ ಭಾವನೆಗಳ ಹರಿದಾಟ ಇರುತ್ತೆ. ಯೆಲ್ಲೋರು ಶಾಲೆಗೆ ಚಕ್ಕರ್ ಹಾಕಿ ಮಾವಿನ ಹಣ್ಣು ಕದಿಯುವುದು ಅಪ್ಪನ ಜೆಬಿಂದ್ದ ಹಣ ಕದ್ದು ಸಿನೆಮಾ ನೋಡೋದು, ಡಬ್ಬಿಯಲ್ಲಿ ಮುಚ್ಚಿಟ್ಟ ಅಮ್ಮನ ಕಾಸಿನಿಂದ ಗೆಳೆಯನ ಜೊತೆ ಅಂಗ್ಗಿ ಖರೀದಿ, ಅಜ್ಜಿಯ ಚೀಲದಿಂದ ತಂದ ಹಣದಿಂದ ಮಾರಮ್ಮನ ಜಾತ್ರೆ….ಇದು ಗೆಳೆತನ, ಗೆಳೆಯನ ಕುಟುಂವೊಂದರಲ್ಲಿ ಆರೋಗ್ಯ ಸಮಸ್ಯೆ ಆದಾಗ ರಕ್ತದಿಂದ….. ಕಿಡ್ನಿ ನೀಡುವ ಸಾಹಸ. ಗೆಳೆಯನ ಸೋದರಿಯ ಮದುವೆಯಲ್ಲಿ ಆಳಾಗಿ ದುಡಿಯುವ, ಅಪ್ಪನ ಅಂತ್ಯಸಂಸ್ಕಾರದಲ್ಲಿ ಆಪ್ತನಾಗಿ ಬಂದು ಧೈರ್ಯ ತುಂಬುವ ಗೆಳೆಯ. ಹೃದಯವಂತ ಅದೃಷ್ಟವಂತರಿಗೆ ಮಾತ್ರ ಒಳ್ಳೆಯ ಗೆಳೆಯರು ಸಿಗುವುದು.ಬೆನ್ನ ಮೇಲೆ ಕೂರಿಸಿಕೊಂಡು ಹೊಳೆ ದಾಟುವ,ಮರ ಹತ್ತಲು ಏಣಿಯಂತ್ತೆ ಸಹಕರಿಸುವ, ಆಟ ಆಡುವಾಗ ಗೆಳೆಯನಿಗೆ ಸೋಲಿಸಿ ಪಾರ್ಟಿಕೊಡುವ , ವಿರೋಧಿ ಗೆಳೆಯರ ಬಳಗ ಗೆಳೆಯನಿಗೆ ತೊಂದರೆ ಕಟ್ಟಾಗ ಧೈರ್ಯವಿಲ್ಲದಿದ್ದರು ಅವರೆದುರು ಹುಲಿಯಂತೆ ಗರ್ಜಿಸುವ ಗೆಳೆಯ.ತನ್ನ ಹೊಸ ಬೂಟು ಚಪ್ಪಲಿ ಅಂಗಿ ಗಡಿಯಾರ ತೊಡಿಸಿ ಸಂಭ್ರಮಪಡುವ ಗೆಳೆಯ. ಗೆಳತಿ ಕಪ್ಪಾದರು ಸ್ನೋ ಪೌಡರ್ ಲಿಪ್ಸ್ಟಿಕ್ ಗೆಳತಿಗೆ ತಂದುಕೊಟ್ಟು ಶೃಂಗಾರ ಮಾಡಿ ಖುಷಿಪಡುವ.ಗೆಳೆಯ ಬಿದ್ದಾಗ ಅವನೊಂದಿಗೆ ತಾನು ಬಿದ್ದು ನೋವು ಮರೆಸುವ. ಗೆಳತಿಯ ಮದುವೆಯಲ್ಲಿ ಮದುಮಗಳಿಗಿಂತ ಇವರದೆ ವಯ್ಯಾರ, ಗೆಳತಿ ಹಾಡುವಾಗ ಗೆಳತಿ ಜೋರಾಗಿ ಬಿಕ್ಕು ಬಿಕ್ಕು ಅಳುವ.ಏನೆಲ್ಲ ಸಾಹಸಗಳು ಗೆಳೆತನದಲ್ಲಿ …..
ಇತಿಹಾಸದಲ್ಲಿ ಗೆಳೆತನ
ಕೃಷ್ಣ ಮತ್ತು ಸುದಾಮ– ಕೃಷ್ಣ ಮತ್ತು ಸುದಾಮನ ಸ್ನೇಹ ಜಗತ್ಪ್ರಸಿದ್ಧವಾಗಿದೆ, ಅವರು ಬಾಲ್ಯದಲ್ಲಿ ಮುನಿ ಸಾಂದೀಪನಿಯ ಆಶ್ರಮದಲ್ಲಿ ಸ್ನೇಹಿತರಾಗಿದ್ದರು. ಶಿಕ್ಷಣವನ್ನು ಪಡೆದ ನಂತರ, ಕೃಷ್ಣನು ದ್ವಾರಕಾಧೀಶನಾದನು (ದ್ವಾರಕಾದ ರಾಜ) ಮತ್ತು ಸುದಾಮನು ಬಡ ಬ್ರಾಹ್ಮಣನಾಗಿ ಉಳಿದನು. ಅದೇನೇ ಇದ್ದರೂ, ಆಪತ್ತು ಬಂದಾಗ, ಕೃಷ್ಣನು ಸ್ನೇಹದ ಕರ್ತವ್ಯವನ್ನು ನಿರ್ವಹಿಸಿದನು ಮತ್ತು ಸುದಾಮನ ಎಲ್ಲಾ ದುಃಖಗಳನ್ನು ತೆಗೆದು ಹಾಕಿದನು.
*ದುರ್ಯೋಧನ ಮತ್ತು ಕರ್ಣನ ಸ್ನೇಹ*– ಸ್ನೇಹದ ಉದಾಹರಣೆಯ ಬಗ್ಗೆ ಮಾತನಾಡುವಾಗ, ಕರ್ಣ ಮತ್ತು ದುರ್ಯೋಧನರನ್ನೂ ಅದರಲ್ಲಿ ವಿವರಿಸಲಾಗುತ್ತದೆ. ಕರ್ಣನ ಅಪಹಾಸ್ಯ ಮತ್ತು ಅಂಗದೇಶದ ರಾಜ್ಯವನ್ನು ಉಡುಗೊರೆಯಾಗಿ ನೀಡಿದ ಸಮಯದಲ್ಲಿ ಕರ್ಣನಿಗೆ ದುರ್ಯೋಧನನ ಗೌರವವು ಕಷ್ಟದ ಸಮಯದಲ್ಲಿ ಸ್ನೇಹಿತನ ಕರ್ತವ್ಯವನ್ನು ತೋರಿಸುತ್ತದೆ. ಸಮಯ ಬಂದಾಗ, ಕರ್ಣ ತನ್ನ ಸ್ವಂತ ಸಹೋದರರೊಂದಿಗೆ ಹೋರಾಡುವ ಮೂಲಕ ತನ್ನ ಸ್ನೇಹವನ್ನು ಸಾಬೀತುಪಡಿಸಿದನು.
ಜೀವನದ ಪ್ರತಿ ಹಂತದಲ್ಲಿಯೂ ನಮ್ಮ ಕುಟುಂಬವನ್ನು ಹೊರತುಪಡಿಸಿದರೆ ನಮಗೆ ನೆರವಾಗುವವರು ನಮ್ಮ ಆಗು ಹೋಗುಗಳನ್ನು ಕೇಳಿ ನಮಗೆ ಸಾಂತ್ವನ ಹೇಳುವವರು ಗೆಳೆಯರು.ಒಂದು ಒಳ್ಳೆಯ ಗೆಳೆತನ ಹರಿಯುವ ನೀರಿನಂತೆ ಇರಬೇಕು.ಎಂತಹ ಎಡರುತೊಡರುಗಳೇ ಬರಲಿ ಸ್ನೇಹದಲ್ಲಿ ಮೋಸ ವಂಚನೆ ಜರುಗಬಾರದು.ಅನ್ಯರ ಮಾತಿಗೆ ಮರುಳಾಗಿ ಅರ್ಧಕ್ಕೆ ಸ್ನೇಹವನ್ನು ನಿಲ್ಲಿಸಬಾರದು.ಈ ದಿನ ಸ್ನೇಹ ದಿನ.ಎಲ್ಲರೂ ತಮ್ಮ ತಮ್ಮ ಸ್ನೇಹಿತರೊಂದಿಗೆ ಸಂತಸ ಸಂಭ್ರಮದಿಂದ ಕಾಲ ಕಳೆಯುವಂತಾಗಲಿ.ಸ್ನೇಹ ಅಮರ.ಸ್ನೇಹ ಚಿರಂತನ.ಸ್ನೇಹ ದಿನದ ಶುಭಾಶಯಗಳು.
ನಂದಿನ ಸನಬಾಳ್.
ಶಿಕ್ಷಕಿಯರು
ಕಲಬುರಗಿ