ನವ ದಹೆಲಿ: NPS vs OPS: ಕೇಂದ್ರ ಸರ್ಕಾರೀ ಉದ್ಯೋಗಿಗಳು ನಿವೃತ್ತರಾದ ಬಳಿಕ ಪಿಂಚಣಿ ನೀಡಲು ಹಳೆಯ ಸ್ಕೀಮ್ ಮತ್ತೆ ಜಾರಿಗೊಳಿಸುವಂತೆ ವಿವಿಧ ರಾಜ್ಯಗಳಲ್ಲಿ ಒತ್ತಾಯಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕೊನೆಯ ಸಂಬಳದ ಶೇ. 40-45ರಷ್ಟು ಮೊತ್ತವನ್ನು ಪಿಂಚಣಿಯಾಗಿ ನಿಗದಿ ಮಾಡಲು ಕೇಂದ್ರ ಒಪ್ಪಿದೆ ಎನ್ನುವಂತಹ ಸುದ್ದಿ ಇತ್ತು.
ಇದೀಗ ಇಂಥದ್ದೊಂದು ಪ್ರಸ್ತಾಪ ಪರಿಗಣನೆಯಲ್ಲಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನವದೆಹಲಿ, ಆಗಸ್ಟ್ 3: ಕೇಂದ್ರ ಸರ್ಕಾರೀ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆ ಬೇಕೆಂಬ ಒತ್ತಾಯಗಳಿಗೆ ಸರ್ಕಾರ ಬಗ್ಗುವ ಸಾಧ್ಯತೆ ಇಲ್ಲ. ಕೊನೆಯ ಸಂಬಳದ ಶೇ. 40-45ರಷ್ಟು ಹಣವನ್ನು ಪಿಂಚಣಿಯಾಗಿ ಕೊಡಬೇಕೆನ್ನುವ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿಲ್ಲ ಎಂದು ಸರ್ಕಾರ ಹೇಳಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದರೆ ಹೊಸ ಪಿಂಚಣಿ ಸ್ಕೀಮ್ನಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಲು ಸರ್ಕಾರ ಸಿದ್ಧ ಇಲ್ಲ ಎನ್ನುವಂತಹ ಸಂದೇಶ ರವಾನೆಯಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಡಾ. ಕನ್ವರ್ ದೀಪ್ ಸಿಂಗ್ ಅವರು ಹೊಸ ಪಿಂಚಣಿ ಯೋಜನೆ ಕುರಿತು ಮಾಹಿತಿ ಕೋರುತ್ತಾ, ಯಾವುದಾದರೂ ಬದಲಾವಣೆ ಮಾಡಲಾಗುತ್ತಾ ಎಂದು ಕೇಳಿದರು. ಹಾಗೆಯೇ, ಉದ್ಯೋಗಿಯ ಸೇವಾವಧಿಯಲ್ಲಿ ತನ್ನ ಕೊನೆಯ ಸಂಬಳದ ಹಣದ ಶೇ. 40-45ರಷ್ಟು ಮೊತ್ತವನ್ನು ಉದ್ಯೋಗಿ ನಿವೃತ್ತಿನಂತರದ ಮಾಸಿಕ ಪಿಂಚಣಿಯಾಗಿ ನಿಗದಿ ಮಾಡುವ ಸಾಧ್ಯತೆ ಇದೆಯಾ ಎಂದು ನಿರ್ದಿಷ್ಟವಾಗಿ ಪ್ರಶ್ನೆ ಕೇಳಿದರು. ಇದಕ್ಕೆ ಕೇಂದ್ರ ಸಚಿವರು, ಅಂಥ ಯಾವುದೇ ಪ್ರಸ್ತಾಪದ ಪರಿಗಣನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಳೆಯ ಪಿಂಚಣಿ ವ್ಯವಸ್ಥೆಗೂ ಹೊಸ ಪಿಂಚಣಿ ವ್ಯವಸ್ಥೆಗೂ ಏನು ವ್ಯತ್ಯಾಸ?
ಸರ್ಕಾರಿ ಉದ್ಯೋಗಿಗಳಿಗೆ ಹೊಸ ಪಿಂಚಣಿ ವ್ಯವಸ್ಥೆ ಅಥವಾ ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು 2001ರಲ್ಲಿ ರೂಪಿಸಲಾಯಿತು. ಅದಕ್ಕೆ ಮುಂಚೆ ಇದ್ದ ಪಿಂಚಣಿ ಸ್ಕೀಮ್ ಅನ್ನು ಓಲ್ಡ್ ಪೆನ್ಷನ್ ಸಿಸ್ಟಂ ಅಥವಾ ಒಪಿಎಸ್ ಎನ್ನಲಾಗುತ್ತದೆ. ಓಪಿಎಸ್ ಪ್ರಕಾರ, ಉದ್ಯೋಗಿ ನಿವೃತ್ತರಾದಾಗ, ಅವರು ಪಡೆದ ಕೊನೆಯ ಸಂಬಳದ ಶೇ. 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ನಿಗದಿ ಮಾಡಲಾಗುತ್ತಿತ್ತು.
ಹೊಸ ಪಿಂಚಣಿ ಸ್ಕೀಮ್ ಬಂದಾಗ ಸಂಬಳದ ನಿರ್ದಿಷ್ಟ ಭಾಗವನ್ನು ಪಿಂಚಣಿಯಾಗಿ ನಿಗದಿ ಮಾಡುವ ಕ್ರಮವನ್ನು ಹಿಂಪಡೆಯಲಾಗಿತ್ತು. ಉದ್ಯೋಗಿ ಸಂಬಳದಲ್ಲಿ ಕಡಿತ ಮಾಡುತ್ತಾ ಬಂದು ಕೂಡಿಸಿಟ್ಟ ಹಣವನ್ನು ಈಕ್ವಿಟಿ ಮತ್ತಿತರ ಕಡೆ ಹೂಡಿಕೆ ಮಾಡಿ, ಅದರಿಂದ ಬೆಳೆಯುವ ಹಣವನ್ನು ಉದ್ಯೋಗಿಯ ನಿವೃತ್ತಾನಂತರದ ಪಿಂಚಣಿಗೆ ಕೊಡಲಾಗುತ್ತದೆ.
ನ್ಯಾಷನಲ್ ಪೆನ್ಷನ್ ಸ್ಕೀಮ್ ಈಗ ಕೇಂದ್ರ ಉದ್ಯೋಗಿಗಳಿಗೆ ಮಾತ್ರವಲ್ಲ, ಸಾರ್ವತ್ರಿಕವಾಗಿ ಲಭ್ಯ ಇರುವ ಪಿಂಚಣಿ ಯೋಜನೆಯಾಗಿದೆ. ಷೇರುಮಾರುಕಟ್ಟೆಯ ಬೆಳವಣಿಗೆಗೆ ಜೋಡಿತವಾಗಿರುವ ಈ ಪೆನ್ಷನ್ ಸ್ಕೀಮ್ ಅನ್ನು 6.53 ಕೋಟಿ ಮಂದಿ ಪಡೆದಿದ್ದಾರೆ. ಇದರಲ್ಲಿ ಅಟಲ್ ಪೆನ್ಷನ್ ಸ್ಕೀಮ್ ಅನ್ನು ಪಡೆದವರೇ 4 ಕೋಟಿಗೂ ಹೆಚ್ಚು. ಆದರೆ, ಸರ್ಕಾರಿ ಉದ್ಯೋಗಿಗಳಿಗೆ ಹಿಂದೆ ಇದ್ದ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮರಳಿ ಜಾರಿಗೆ ತನ್ನಿ ಎಂದು ವಿಪಕ್ಷಗಳು ವಿವಿಧ ರಾಜ್ಯಗಳಲ್ಲಿ ಹೋರಾಟ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿವೆ.