ಕಂದಾಯ ಇಲಾಖೆ ಜಿಲ್ಲಾ ನೌಕರರ ಸಂಘದ ಅದ್ಯಕ್ಷನನ್ನು ಬಲೆಗೆ ಕೆಡವಲು ಆಟೋದಲ್ಲಿ ಆಗಮಿಸಿದ ಲೋಕಾಯುಕ್ತ ಎಸ್ಪಿ!!ಲಕ್ಷಾಂತರ ರೂಪಾಯಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನೌಕರರ ಸಂಘದ ಜಿಲ್ಲಾದ್ಯಕ್ಷ….
ಯಾರಿ ಈ ಜಿಲ್ಲಾಧ್ಯಕ್ಷ? ಇವರು ಎಲ್ಲರಿಗೂ ಚಿರಪರಿಚಿತರು…
ನೀವೆ ನೋಡಿ..
ಶಿವಮೊಗ್ಗ: ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ಸಾರ್ವಜನಿಕರೊಬ್ಬರಿಂದ 1.5 ಲಕ್ಷ ಲಂಚ ಪಡೆಯುತ್ತಿದ್ದ ಇಲ್ಲಿನ ತಾಲ್ಲೂಕು ಕಚೇರಿಯ ಶಿರಸ್ತೇದಾರ ಜಿ.ಅರುಣ್ಕುಮಾರ್ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುವಾಗಲೇ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿರುವ ಅರುಣ್ಕುಮಾರ್ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದಾರೆ.
ಶಿವಮೊಗ್ಗದ ವಿನಾಯಕ ನಗರ ನಿವಾಸಿ ಹನುಮಂತ ಬನ್ನಿಕೋಡ್ ಅವರು ಇಲ್ಲಿನ ಮಲ್ಲಿಗೇನಹಳ್ಳಿ ಸರ್ವೆ ನಂ. 84ರಲ್ಲಿ ಗೆಳೆಯರೊಂದಿಗೆ ಸೇರಿ ಎರಡು ಎಕರೆ ಜಮೀನು ಖರೀದಿಸಿದ್ದು, ಅದರ ಖಾತೆ ಬದಲಾವಣೆ ಮಾಡಿಕೊಡಲು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಶಿರಸ್ತೇದಾರ ಅರುಣ್ಕುಮಾರ್ 13 ಲಕ್ಷ ಲಂಚಕ್ಕೆ ಬೇಡಿಕ ಇಟ್ಟಿದ್ದರು ಎನ್ನಲಾಗಿದೆ. ಹನುಮಂತ ಅವರು ಈ ಸಂಬಂಧ ದಾಖಲೆ ಸಮೇತ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ಆಟೊದಲ್ಲಿ ಬಂದ ಎಸ್ಪಿ: ಅರುಣ್ಕುಮಾರ್ ನೌಕರರ ಸಂಘಟನೆಯಲ್ಲಿರುವ ಕಾರಣ ಲೋಕಾಯುಕ್ತ ಪೊಲೀಸರು ನಡೆಸಿದ್ದ ಭ್ರಷ್ಟಾಚಾರದ ವಿರುದ್ಧದ ಹಲವು ಜನಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಹೀಗಾಗಿ ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳ ಪರಿಚಯ ಅವರಿಗಿತ್ತು. ದಾಳಿಗೆ ಸ್ಥಳೀಯ ಅಧಿಕಾರಿಗಳು ಬಂದರೆ ಅವರನ್ನು ಗುರುತಿಸಬಹುದು ಎಂದು ಚಿತ್ರದುರ್ಗದಿಂದ ಹೆಚ್ಚಿನ ಅಧಿಕಾರಿಗಳು ಬಂದಿದ್ದರು. ಸ್ವತಃ ಲೋಕಾಯುಕ್ತ ಎಸ್ಪಿ ಎನ್. ವಾಸುದೇವರಾಮ ಆಟೊದಲ್ಲಿ ಜನಸಾಮಾನ್ಯರ ರೀತಿ ಬಂದು ತಾಲ್ಲೂಕು ಕಚೇರಿ ಎದುರು ಕಾದು ಕುಳಿತಿದ್ದರು. ಅಧಿಕಾರಿಗಳು ಬೈಕ್ನಲ್ಲಿ ಬಂದು ಕಾಯುತ್ತಾ ನಿಂತಿದ್ದರು ಎಂದು ತಿಳಿದುಬಂದಿದೆ.
ನಿಗದಿಯಂತೆ ತಾಲ್ಲೂಕು ಕಚೇರಿಯಲ್ಲಿ ಲಂಚದ ಮೊತ್ತದ ಮೊದಲ ಕಂತು 1.5 ಲಕ್ಷವನ್ನು ಹನುಮಂತ ಅವರಿಂದ ಪಡೆಯುವಾಗ ಲೋಕಾಯುಕ್ತ ಎಸ್ಪಿ ವಾಸುದೇವ್ ನೇತೃತ್ವದಲ್ಲಿ ದಾಳಿ ಮಾಡಿ ಅರುಣ್ಕುಮಾರ್ ಅವರನ್ನು ಬಂಧಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ನಾಯ್ಕ, ಇನ್ಸ್ಪೆಕ್ಟರ್ಗಳಾದ ಶಿಲ್ಪಾ ಹಾಗೂ ರಾಧಾಕೃಷ್ಣ ಇದ್ದರು.