ಶಾಲೆಯ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಸಿನಿಮಾದ ನಟ ಸುದೀಪ ಅವರ ಸ್ಟೈಲ್ನ ಹೇರ್ ಕಟಿಂಗ್ ಮಾಡಬೇಡಿ ಎಂದು ಕ್ಷೌರದ ಅಂಗಡಿಗೆ ಮುಖ್ಯ ಶಿಕ್ಷಕರು ಬರೆದಿರುವ ಪತ್ರ ವೈರಲ್..
ಬಾಗಲಕೋಟೆ : ಶಾಲೆಯಲ್ಲಿ ಹೇರ್ ಕಟಿಂಗ್ (ಕ್ಷೌರ) ವಿಚಾರವಾಗಿ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಸಿನಿಮಾ ಶೈಲಿಯ ಕಟಿಂಗ್ ಮಾಡಬೇಡಿ ಎಂದು ಕ್ಷೌರದ ಅಂಗಡಿ(ಹೇರ್ ಕಟಿಂಗ್ ಸಲೂನ್)ಗೆ ಪತ್ರ ಬರೆದಿರುವುದು ಈಗ ವೈರಲ್ ಆಗಿದೆ.
ಬಾಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಗ್ರಾಮದ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಶಿವಾಜಿ ನಾಯಕ ಎಂಬವರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಸಿನಿಮಾದ ಸುದೀಪ ಹೇರ್ ಕಟಿಂಗ್ ಮಾಡಬೇಡಿ ಎಂದು ಕಟಿಂಗ್ ಸಲೂನ್ನವರಿಗೆ ಪತ್ರ ಬರೆದಿರುವುದು ಈಗ ಎಲ್ಲೆಡೆ ವೈರಲ್ ಆಗಿದೆ.
ಹೆಬ್ಬುಲಿ ಸಿನಿಮಾದ ನಾಯಕ ಸುದೀಪ ಅವರ ಕೇಶ ಶೈಲಿ ಅನುಕರಿಸಲು ವಿದ್ಯಾರ್ಥಿಗಳು ಅದೇ ಮಾದರಿಯ ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದರು. ಈ ಬಗ್ಗೆ ಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಸಾಕಷ್ಟು ಬಾರಿ ಮಕ್ಕಳಿಗೆ ಎಚ್ಚರಿಕೆ ನೀಡಿದ್ದರು ಅದು ಮುಂದುವರದಿತ್ತು. ಹೀಗಾಗಿ ಅವರು ಕೊನೆಗೆ ಕಟಿಂಗ್ ಶಾಪ್ಗೆ ಪತ್ರ ಬರೆದಿದ್ದಾರೆ.
ಗ್ರಾಮದ ಕಟಿಂಗ್ ಸಲೂನ್ ಮಾಲೀಕರಿಗೆ ಬರೆದಿರುವ ಪತ್ರದಲ್ಲಿ ” ಹೆಬ್ಬುಲಿ ಮಾದರಿಯ ಹೇರ್ ಕಟಿಂಗ್ ಮಾಡಿಸಿಕೊಂಡು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಕಲಿಕೆಗೆ ಆಸಕ್ತಿ ತೋರಿಸದೇ ಶೈಕ್ಷಣಿಕ ಚಟುವಟಿಕೆಗೆ ಮಹತ್ವ ನೀಡದೇ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು ಹೆಬ್ಬುಲಿ ಹೇರ್ ಕಟಿಂಗ್ಗೆ ಒತ್ತಾಯಿಸಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನ್ನ ಅಥವಾ ಪಾಲಕರ ಗಮನಕ್ಕೆ ತರಬೇಕು ಎಂದು ಕೋರುತ್ತೇನೆ ಎಂದು ಮುಖ್ಯ ಶಿಕ್ಷಕರು ಪತ್ರದಲ್ಲಿ ಬರೆದಿದ್ದಾರೆ.
ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳು ಹೆಬ್ಬುಲಿ ಕೇಶ ಶೈಲಿ ಹೊಂದಿದ್ದು, ಶಿಸ್ತು ಪಾಲನೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ಮುಖ್ಯ ಶಿಕ್ಷಕರು ಪತ್ರ ಬರೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.