ನಿಯಮ 72 ರಡಿ ಬಿಜೆಪಿಯ ವೈ ಎ ನಾರಾಯಣ ಸ್ವಾಮಿ ಶಿಕ್ಷಕರ ಸಂಬಳದ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ. ಅದೇನೆಂದರೆ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ, ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ (ಪ್ರಾಥಮಿಕ ಶಾಲೆಯಿಂದ ಪದೋನ್ನತಿ ಪಡೆದ) ಹಾಗೂ ಪ್ರೌಢಶಾಲೆಯಿಂದ ಪದೋನ್ನತಿ ಪಡೆದು ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ 10,15, ಹಾಗೂ 20ರ ಕಾಲಮಿತಿ ವೇತನ ಬಡ್ತಿ ನೀಡದೇಯಿರುವುದರಿಂದ, ಸದರಿಯವರಿಗೆ ವೇತನದಲ್ಲಿ ಬಹಳ ತಾರತಮ್ಯ ಉಂಟಾಗಿದೆ.
ಇದರಿಂದ ಸುಮಾರು 15000 ರಿಂದ 20000 ಸಾವಿರ ಬೋಧಕ ಸಿಬ್ಬಂದಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ವಿಷಯವನ್ನು ಅವರು ಪ್ರಸ್ಥಾಪಿಸಿದ್ದಾರೆ.
ಶಿಕ್ಷಣ ಸಚಿವ ಮಧುಬಂಗಾರಪ್ಪ ಈ ಪ್ರಶ್ನೆಗೆ ಉತ್ತರಿಸಿದ್ದಾರೆ..
ಸರ್ಕಾರದ ಆದೇಶದ ಸಂಖ್ಯೆ ಎಫ್ ಡಿ 12 ಎಸ್ಪಿ 2012(8), ದಿನಾಂಕ 14.06.2012ರಲ್ಲಿ ತಿಳಿಸಿರುವಂತೆ ಸೇವಾ ಅವಧಿಯಲ್ಲಿ ಯಾವುದೇ ಪದೋನ್ನತಿ ಪಡೆಯದೇ ಇರುವ ಶಿಕ್ಷಕರಿಗೆ ಮಾತ್ರ 20,25,30 ವರ್ಷಗಳ ಬಡ್ತಿ ಮಂಜೂರಾತಿ ಮಾಡಲು ಅವಕಾಶವಿರುತ್ತದೆ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ಪಡೆದಿರುವ ಶಿಕ್ಷಕರುಗಳಿಗೆ 20,25,30 ವರ್ಷಗಳ ವೇತನ ಬಡ್ತಿ ಮಂಜೂರಾತಿಗೆ ಅವಕಾಶವಿರುವುದಿಲ್ಲ.
ಇದರಿಂದಾಗಿ ಹಲವಾರು ಪ್ರಕರಣಗಳಲ್ಲಿ ಪ್ರಾಥಮಿಕ/ಪ್ರೌಢ ಶಿಕ್ಷಕರಾಗಿ ಹಾಗೂ ಪದವಿ ಪೂರ್ವ ಉಪನ್ಯಾಸಕರಾಗಿ ಬಡ್ತಿ ಹೊಂದಿದ ಶಿಕ್ಷಕರು/ಉಪನ್ಯಾಸಕರುಗಳಿಗಿಂತ ಬಡ್ತಿ ಹೊಂದದೇ ಇರುವ ಕಾರಣಕ್ಕಾಗಿ ಹೆಚ್ಚುವರಿ ವೇತನ ಬಡ್ತಿಗಳನ್ನು ಪಡೆದ ಶಿಕ್ಷಕರ/ಉಪನ್ಯಾಸಕರ ವೇತನ ಹೆಚ್ಚಾಗಿರುವುದು ಕಂಡುಬಂದಿದೆ ಎಂದಿದ್ದಾರೆ.
6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ಗೊಂದಲವನ್ನು ಹೋಗಲಾಡಿಸುವ ಕುರಿತಂತೆ ಆರ್ಥಿಕ ಇಲಾಖೆಯನ್ನು ಸಮಾಲೋಚಿಸಲಾಗಿ, ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯ ಈ ಕೆಳಕಂಡಂತಿದೆ. ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ವೇತನದಲ್ಲಿನ ತಾರತಮ್ಯವನ್ನು ನಿವಾರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ವೇತನ ಹೆಚ್ಚಳ ನಿಯಮಗಳು/ಆದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಲಾಗಿರುತ್ತದೆ.
ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರು ಒಂದೇ ಪದ ವೃಂದಕ್ಕೆ ಸೇರಿದವರಾಗಿರಬೇಕು.(ಆ) ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ನಡುವಿನ ವೇತನದಲ್ಲಿನ ಅಸಮಾನತೆಯು ಒಂದ ಪದ ವೃಂದದಲ್ಲಿ ಲಭ್ಯವಿದ್ದ ವೇತನ ಬಡ್ತಿ/ಮುಂಬಡ್ತಿ ಸೌಲಭ್ಯಗಳನ್ನು ಮಂಜೂರು ಮಾಡಿರುವ ಕಾರಣದಿಂದ ಮಾತ್ರ ಉದ್ಭವಿಸಿರಬೇಕು ಎಂದಿದ್ದಾರೆ.
ಶಿಕ್ಷಕರ ಸಂಬಳಕ್ಕೆ ಸಂಬಂಧಿಸಿದ ವಿಚಾರ
ಪುಸ್ತುತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಅವರು ಧಾರಣೆ ಮಾಡಿದ ಹುದ್ದೆಯಲ್ಲಿ ಕ್ರಮವಾಗಿ 10, 15, 20, 25 ಮತ್ತು 30 ವರ್ಷಗಳ ಪದೋನ್ನತಿ ರಹಿತ ಸೇವೆಗಾಗಿ ಲಭ್ಯವಿರುವ ಸೌಲಭ್ಯಗಳನ್ನು ಭಾಗಶ: ಪಡೆದ ನಂತರ ಅಥವಾ ಅವುಗಳನ್ನು ನಡೆಯುವ ಪೂರ್ವದಲ್ಲಿಯೇ ಕ್ರಮವಾಗಿ ಪ್ರೌಢ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಶಿಕ್ಷಕರ ಹುದ್ದೆಗೆ ಪದೋನ್ನತಿ ಪಡೆಯುವುದರಿಂದ ಮತ್ತು ಕೆಳಗಿನ ಹುದ್ದೆಯಲ್ಲಿ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಕಿರಿಯ ಶಿಕ್ಷಕರು ಪಡೆದ ಕಾರಣಕ್ಕೆ ಹಿರಿಯ ಮತ್ತು ಕಿರಿಯ ಶಿಕ್ಷಕರ ವೇತನದಲ್ಲಿ ಉಂಟಾಗಿರುವ ವೇತನ ವ್ಯತ್ಯಾಸವನ್ನು ಹಿರಿಯ ಮತ್ತು ಕಿರಿಯ ಶಿಕ್ಷಕರ ವೇತನದಲ್ಲಿನ ತಾರತಮ್ಯ ಎಂದು ಪರಿಗಣಿಸಲು ಬರುವುದಿಲ್ಲ. ಏಕಂದರೆ, ಸದರಿ ತಾರತಮ್ಯದ ಉಂಟಾದ ಅವಧಿಯಲ್ಲಿ ಅವರು ಕಾರ್ಯನಿರ್ವಹಿಸುತ್ತಿರುವ ವೃಂದ ಮತ್ತು ಅದಕ್ಕೆ ನಿಗದಿಪಡಿಸಲಾದ ವೇತನ ಶ್ರೇಣಿ ಪರಸ್ಪರ ಭಿನ್ನವಾಗಿದ್ದು, ಅವುಗಳನ್ನು ಹೋಲಿಸಲು ಬರುವುದಿಲ್ಲವಾದರಿಂದ ಹಿರಿಯ ಶಿಕ್ಷಕರ ವೇತನವನ್ನು ಕಿರಿಯ ಶಿಕ್ಷಕರ ವೇತನದ ಸಮಸ್ಯೆ, ಎತ್ತರಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದಿದ್ದಾರೆ.
ವೇತನ ಶ್ರೇಣಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ
ಒಂದೊಮ್ಮೆ ಹಿರಿಯ ಶಿಕ್ಷಕರು 10 ಮತ್ತು 15 ವರ್ಷಗಳ ಪದೋನ್ನತಿ ರಹಿತ ಸೇವೆಗಾಗಿ ನಿಯಮಾನುಸಾರ ಲಭ್ಯವಿರುವ ಕಾಲಬದ ಮುಂಬಡ್ತಿ ಹಾಗೂ ಹಿರಿಯ ವೇತನ ಶ್ರೇಣಿ ಮುಂಬಡ್ತಿ ಸೌಲಭ್ಯಗಳನ್ನು ಪಡೆಯುವುದಕ್ಕೂ ಪೂರ್ವದಲ್ಲಿಯೇ ಪದೋನ್ನತಿ ಪಡೆದಲ್ಲಿ, ಸಂದರ್ಭಾನುಸಾರ ಅಂತಹ ಹಿರಿಯ ಶಿಕ್ಷಕರು ಸದರಿ ಸೌಲಭ್ಯಗಳನ್ನು ಪಡೆಯವುದಕ್ಕೋಸ್ಕರ ಕೆಳಗಿನ ಹಂತದ ವೇತನ ಶ್ರೇಣಿಯಲ್ಲಿಯೇ ಮುಂದುವರೆಯಲು ಲಿಖಿತ ಅಭಿಮತವನ್ನು ಪದೋನ್ನತಿ ಪಡೆದ 2 ತಿಂಗಳೊಳಗಾಗಿ ಸಲ್ಲಿಸಬಹುದು. ಅಥವಾ ಅನುಕೂಲವಿಲ್ಲದ ಸಂದರ್ಭದಲ್ಲಿ ಸದರಿ ಸೌಲಭ್ಯಗಳನ್ನು ಅವನು ಪದೋನ್ನತಿ ಪಡೆದ ವೃಂದದಲ್ಲಿ ಪಡೆಯಬಹುದಾಗಿದೆ.
ಕಿರಿಯ ಶಿಕ್ಷಕರು ಪದೋನ್ನತಿ ಪಡೆದಿಲ್ಲ
ಒಂದೊಮ್ಮೆ ಮೇಲೆ ತಿಳಿಸಿದ ಸೌಲಭ್ಯಗಳನ್ನು ಅರ್ಜಿಸಿದ ನಂತರ, ಹಿರಿಯ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ವೃಂದಕ್ಕೆ ಕಿರಿಯ ಶಿಕ್ಷಕರು ಪದೋನ್ನತಿ ಪಡೆದಲ್ಲಿ ಅಂತಹ ಸಂದರ್ಭದಲ್ಲಿ ಹಿರಿಯ ಶಿಕ್ಷಕರ ವೇತನ ತಾರತಮ್ಯವನ್ನು ಸರಿಪಡಿಸಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಅನ್ವಯಿಸುವ ಆದೇಶಗಳಲ್ಲಿನ ನಿಬಂಧನೆಗಳ ಪೂರೈಕೆಗೊಳಪಟ್ಟು ಹಿರಿಯ ಶಿಕ್ಷಕರರ ವೇತನವನ್ನು ಕಿರಿಯ ಶಿಕ್ಷಕರ ವೇತನದ ಸಮಕ್ಕೆ ಎತ್ತರಿಸಬಹುದಾಗಿರುತ್ತದೆ”.ಈ ಹಿನ್ನೆಲೆಯಲ್ಲಿ ಈಗಾಗಲೇ ಬಡ್ತಿ ಹೊಂದಿದ ಶಿಕ್ಷಕರಿಗೆ ಬಡ್ತಿ ಹೊಂದದ ಕಾರಣಕ್ಕಾಗಿ ಪಡೆಯುವ ಕಾಲಮಿತಿ ಬಡ್ತಿಗಳನ್ನು ನೀಡಲು ಸಾಧ್ಯವಿರುವುದಿಲ್ಲ.
ಶಿಕ್ಷಣ ಸಚಿವ ಮಧುಬಂಗಾರಪ್ಪ ಉತ್ತರ
ನಾನು ಕೂಡ ಶಿಕ್ಷಕರ ಪರವಾಗಿ ಇರುವವನೆ. ಈ ಬಗ್ಗೆ ಆರ್ಥಿಕ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ನ್ಯಾಯ ಒದಗಿಸುವ ಕೆಲಸ ಮಾಡ್ತೇವೆ. ನಿಮ್ಮ ಜೊತೆಯೂ ಸಭೆ ನಡೆಸುತ್ತೇನೆ. ಈ ಸಮಯದಲ್ಲಿ ನಿಮ್ಮ ಕಾಳಜಿ ಬಗ್ಗೆ ನನಗೆ ಅರಿವಿದೆ. ವಿಧಾನ ಸಭೆ ಅಧಿವೇಶನ ಮುಗಿಯುತ್ತಿದ್ದಂತೆ ಸಭೆ ಕರೆದು ಮಾತಾಡ್ತೀನಿ. ಆದಷ್ಟು ಬೇಗ ಮಾಡ್ತೀವಿ ಎಂದಿದ್ದಾರೆ.