ನಾ ನಿನಗೆ- ನೀ ನನಗೆ
ಎಲ್ಲೋ ಹುಟ್ಟಿ ಎಲ್ಲಿಯೋ ಹರಿದು ನದಿ
ಸಾಗರವ ಸೇರುವ ಹಾಗೆ
ಎಲ್ಲಿಯೋ ಇರುವ ನಾವು
ಪ್ರೀತಿಯ ಅಲೆಯಲ್ಲಿ ಸೇರಿ
ಭಾವನಾತ್ಮಕ ಬಂಧದಲ್ಲಿ
ಜೀವನ ಕಳೆಯುತಿರುವೆವು
ನಿನಗೆ ಅಲ್ಲಿ ನೋವಾದರೆ
ನನಗೆ ಇಲ್ಲಿ ವ್ಯಥೆ
ಹೇಗೆ ನಿನ್ನ ಸಲುಹಲಿ
ಚಿಂತೆ ಕಾಡುತಲಿ ನೋವ
ಅನುಭವಿಸುತಿರುವೆ
ಹೃದಯವು ಅಷ್ಟು ಹಚ್ಚಿಕೊಂಡಿದೆ ನಿನ್ನ
ನಾನು ನನ್ನದೆಂಬ ಭಾವಗಳ ಸೆಳೆತ
ಬಂಧಿಸಿಹುದು ಪ್ರೀತಿಯಲಿ ನಮ್ಮನು
ಬಿಟ್ಟೆನೆಂದರೂ ಬಿಡದೀ
ಬೇಗುದಿಯ ಛಾಯೆ.
ಪ್ರೀತಿ ಯೆಂದರೆ ಹೀಗೇನೇ
ಬಿಡದ ನಂಟನು ಮೂಡಿಸಿಹುದು
ಪ್ರೀತಿ ಪ್ರೇಮಕೆ ಸೇತುವೆಯಾಗಿ
ಎರಡು ಜೀವಗಳ ಮಿಲನವಾಗಿ
ಇಷ್ಟ ಕಷ್ಟಗಳ ನಡುವೆ,
ನೋವು ನಲಿವುಗಳ
ಸಮಪಾಲು ಹೊಂದುತಲಿ ಸಾಗಿ,
ಹೃದಯದ ಮೆರವಣಿಗೆ
ನಮ್ಮ ಪ್ರೀತಿಯು ಅಮರ
ನಿನ್ನೆದೆಯ ಸ್ಪರ್ಶಿಸಿ ನಡೆಸಬೇಕು ಅನುರಾಗ ಸಂಭಾಷಣೆ
ಸರಸ ವಿರಸ ಎಲ್ಲವೂ ಸೊಗಸೇ
ಈ ಸಮಯದೊಳು
ಆ ಸಮಯ ಬರಬಹುದೇ ನಮಗೆ
ಎನುತ ಚಿಂತೆಯೊಳು ನಿನ್ನ ಕನವರಿಕೆ
ಹೃದಯ ಹಾಡಿದೆ ನಿನ್ನದೇ ರಾಗವ.. ಮನವು ಬಯಸಿದೆ ನಿನ್ನದೇ ನಾದವ..
ಕಾಣದ ಕವಿತೆಯ ಹಾಡಲಿ ಹೇಗೆ ನೋಡದೆ ನಿನ್ನನು ಬಾಳಲಿ ಹೇಗೆ …ನಿನ್ನ ನೆನಪಿನ ತೆಪ್ಪದಲ್ಲಿ ತೇಲುವ
ನಿದ್ರೆಗೆ ರಾತ್ರಿಯೆಲ್ಲ ಜಾಗರಣೆ..
ವೈ. ಬಿ. ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿ
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್. ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨
ಚಿತ್ರಗಳು.ರೇಖಾ ಮೊರಬ.ಚಿತ್ರಕಲಾ ಶಿಕ್ಷಕಿ ಹುಬ್ಬಳ್ಳಿ