ಗುರುವಿನ ಸನ್ನಿಧಾನದಲ್ಲಿ ಕಲಿತ ವಿದ್ಯೆ
ಶಾಶ್ವತವಾದದ್ದು. .
ಡಾ. ಕವಿತಾ ಕುಸುಗಲ್ಲ
ಬೆಳಗಾವಿ: “ಗುರುವಿನ ಸನ್ನಿಧಾನದಲ್ಲಿ ಕಲಿತ ವಿದ್ಯೆ
ಶಾಶ್ವತವಾದದ್ದು. ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ ಕಲೆಗಳು
ಗುರುಮುಖದಿಂದಲೇ ಸಿದ್ಧಿಸುತ್ತವೆ. ಸಾಧಕನು ಗುರುವಿನಿಂದಲೇ ತನ್ನ ಸಾಧನೆಯನ್ನು ಹೊಂದುತ್ತಾನೆ. ಸಾಧನೆ ಮತ್ತು ಗುರುಗಳು ಒಂದೇ ನಾಣ್ಯದ ಎರಡು ಮುಖಗಳು. ಪ್ರಾಚೀನ ತತ್ವಜ್ಞಾನಿಗಳೆಲ್ಲರೂ ವಿದ್ಯೆಯನ್ನು ಕಲಿತದ್ದು
ಗುರುಗಳಿಂದಲೇ. ಆದುದರಿಂದ ಗುರುವಿನ ಮಹತ್ವ
ಸಾಧನೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಇಂದು
ವ್ಯಾಸ ಮಹರ್ಷಿಗಳು ಹುಟ್ಟಿದ ದಿನ. ಶರೀಫರಿಗೆ ದೀಕ್ಷೆಯಾದ ದಿನ. ಗುರುನಾನಕರಿಗೆ ಜ್ಞಾನೋದಯವಾದ ದಿನ. ಈ ಎಲ್ಲ ಕಾರಣಕ್ಕಾಗಿ ಭಾರತಿಯರು ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ.
ಗುರು ಇಂದು ಶಿಷ್ಯನಿಗೆ ದೀಕ್ಷೆಯನ್ನು ನೀಡಿದ ದಿನವಾಗಿದೆ” ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಕವಿತಾ ಕುಸುಗಲ್ಲ ಅವರು
ಅಭಿಪ್ರಾಯಪಟ್ಟರು.
ಬೆಳಗಾವಿಯ ಶಿವಬಸವ ನಗರದ ಭಾರತೀಯ ಗಾಯನ ಸಮಾಜವು ಆಯೋಜಿಸಿದ್ದ ಗುರುಪೂರ್ಣಿಮೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ
ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಭಾರತೀಯ ಗಾಯನ ಸಮಾಜದ ವಿದುಷಿ
ಡಾ. ಕೆ. ಎಂ. ರೋಹಿಣಿ ಅವರು ಮಾತನಾಡಿ ಸಂಗೀತ ಕಲೆಯು ಗುರುವಿನಿಂದಲೇ ಬರುವಂತಹದ್ದು. ಗುರುವಿನ ಸನ್ನಿದಾನದಲ್ಲಿ ಕಲಿತ ವಿದ್ಯೆಯು ಶಾಶ್ವತವಾದದ್ದು. ಸಂಗೀತವು ಒಂದು ಧ್ಯಾನ. ಅದರಲ್ಲಿ ಏಕಾಗ್ರತೆಯನ್ನು ವ್ಯಕ್ತಿತ್ವದ ಪರಿಗ್ರಹಣವನ್ನು ಸಾಧಿಸಬಹುದೆಂದರು. ಇಂದು ಗುರುಗಳಿಗೆ ಬಹುದೊಡ್ಡ ಸವಾಲಿದೆ.
ಮಕ್ಕಳನ್ನು ಮೊಬೈಲ್ ಗೀಳಿನಿಂದ ಬಿಡಿಸಿಕೊಂಡು ಅವರಿಗೆ ಸಂಗೀತ ವಿದ್ಯೆಯನ್ನು ಧಾರೆಯೆರೆಯಬೇಕಾಗಿದೆ. ಪಾಲಕ-ಪೋಷಕರು ತಪ್ಪದೇ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಲಲಿತ ಕಲೆಗಳಿಲ್ಲಿ ಅಭಿರುಚಿಯನ್ನು ಮೂಡಿಸಬೇಕು. ಇಲ್ಲದಿದ್ದಲ್ಲಿ ವ್ಯಕ್ತಿತ್ವ ನಿರ್ಮಾಣವು ಭವಿಷ್ಯದಲ್ಲಿ ಅಪಾಯವನ್ನು ತಂದೊಡ್ಡಬಹುದು ಎಂದು ಪಾಲಕ-ಪೋಷಕರಿಗೆ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗುರುಪರಂಪರೆಯಾಗಿ ಪಂ. ಪುಟ್ಟರಾಜ ಗವಾಯಿಗಳನ್ನು ಹಾಗೂಪಂ. ಸಿದ್ಧವೀರಯ್ಯ ಗವಾಯಿಗಳನ್ನು ಸ್ಮರಿಸಿಕೊಳ್ಳಲಾಯಿತು. ಪಂ.ಸತೀಶ ಗಚ್ಚಿ, ದಾಕ್ಷಾಯಿಣಿ ಹೂಗಾರ, ಶಿವಪ್ಪ ಹೂಗಾರ ವಿದ್ಯಾ ಗೌಡರ,
ಪಿ. ಎಚ್. ಸೊಗಲದ, ಮಹಾಂತೇಶ ನರಸಣ್ಣನವರ, ರತ್ನಶ್ರೀ
ಪುತಳೇಕರ, ಆತ್ಮಾನಂದ ಸಕ್ರಿಕಡ್ಡಿ, ಗಂಗಾರಾಮ ಮಿಸಾಳೆ
ಮುಂತಾದವರು ಉಪಸ್ಥಿತರಿದ್ದರು. ನಲವತ್ತಕ್ಕೂ ಹೆಚ್ಚು
ಸ್ವರಸಾಧಕರು ಸಂಗೀತ ಕಾರ್ಯಕ್ರಮವನ್ನು
ನಡೆಸಿಕೊಟ್ಟರು.