ಮದುವೆ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವ ಶಾಲಾ ಆಡಳಿತ ಮಂಡಳಿಗಳು..
ಶಿಕ್ಷಕರ ಮೇಲೆ ಹಲ್ಲೇ!!ಅನುದಾನಿತ ಶಾಲಾ ಶಿಕ್ಷಕರ ಗೋಳು ಕೇಳುವವರು ಯಾರು!!
ಹುಬ್ಬಳ್ಳಿ: ನಗರದ ದೇಶಪಾಂಡೆ ನಗರದ ನ್ಯೂ ಎಜ್ಯುಕೇಷನ್ ಸೊಸೈಟಿಯ ಗರ್ಲ್ಸ್ ಇಂಗ್ಲಿಷ್ ಮಾಧ್ಯಮ ಅನುದಾನಿತ ಶಾಲೆಯ ಶಿಕ್ಷಕನ ಮೇಲೆ ಸೊಸೈಟಿಯ ಕಾರ್ಯದರ್ಶಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಲೆಯ ಶಿಕ್ಷಕ ಸಂಜೀವ ಶಿರಳಿ ಮೇಲೆ ಸೊಸೈಟಿಯ ಕಾರ್ಯದರ್ಶಿ ಶ್ರೀಕಾಂತ ಡಿ.ದೇಸಾಯಿ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.
‘ಸಂಜೀವ ಅವರು 2014ರಿಂದ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ’ ಎಂದು ಹೇಳಿದರು.
‘ಅನುದಾನಿತ ಶಾಲಾ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಶಿಕ್ಷಣ ಇಲಾಖೆ ಸಹ ಶಿಕ್ಷಕರ ಪರ ಇಲ್ಲ. ನಗರದ ಕೆಲವು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಅಧಿಕಾರಿಗಳೂ ನಿಸ್ಸಹಾಯಕರಾಗಿದ್ದಾರೆ’ ಎಂದರು.
ಶಿಕ್ಷಕ ಸಂಜೀವ ಮಾತನಾಡಿ, ‘ಶ್ರೀಕಾಂತ ದೇಸಾಯಿ ಅವರು ಜೂನ್ 11ರಂದು ಕರೆ ಮಾಡಿ ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಗೆ ಕರ್ತವ್ಯಕ್ಕೆ ಹೋಗಬೇಕು ಎಂದು ಮೌಖಿಕವಾಗಿ ಹೇಳಿದರು. ಜೂನ್ 12ರಿಂದ 17ರವರೆಗೆ ನಾನು ಆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದೆ. ಆದರೆ, ನನಗೆ ದೇಶಪಾಂಡೆ ನಗರದ ಗರ್ಲ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಿಂದ ಬಿಡುಗಡೆ ಪತ್ರ ನೀಡಿರಲಿಲ್ಲ’ ಎಂದು ಹೇಳಿದರು.
‘ಜೂನ್ 19ರಂದು ಗರ್ಲ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೋಗಿ, ಶಾಲೆಯ ಮುಖ್ಯಶಿಕ್ಷಕರನ್ನು ಭೇಟಿಯಾಗಿ ವರ್ಗಾವಣೆ ಪತ್ರ ನೀಡುವಂತೆ ಮತ್ತೆ ಕೇಳಿದೆ. ಆಗ ಅಲ್ಲಿಗೆ ಬಂದ ಶ್ರೀಕಾಂತ ದೇಸಾಯಿ ಅವರು ನನ್ನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದರು’ ಎಂದು ಆರೋಪಿಸಿದರು.
‘ಶಾಲೆಯಲ್ಲಿ ವಿಜ್ಞಾನ ಶಿಕ್ಷಕರು ಇಲ್ಲ. ಹೀಗಾಗಿ ಆ ವಿಷಯವನ್ನು ನಾನೇ ಬೋಧನೆ ಮಾಡಿದ್ದೇನೆ. ಈಗ ಸರಿಯಾಗಿ ಬೋಧನೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದರೆ ಸತ್ಯ ತಿಳಿಯುತ್ತದೆ’ ಎಂದು ಹೇಳಿದರು..ಶ್ರೀಕಾಂತ ದೇಸಾಯಿ ಅವರ ಕುಟುಂಬದ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಲು ನನ್ನನ್ನು ಡ್ರೈವರನ್ನಾಗಿ ಬಳಸಿಕೊಂಡಿದ್ದಾರೆ.ಅವರ ವೈಯಕ್ತಿಕ ಕೆಲಸಗಳಿಗೆ ನಾನು ಸಹಕರಿಸಿದೆ ಇರುವುದರಿಂದ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದರು..