ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗದಂತೆ ವೇತನ ಪಾವತಿಗಳನ್ನು ಜಾರಿಗೊಳಿಸುವಂತೆ ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಮುಂದೆ ಒತ್ತಾಯಿಸಲಾಗಿತ್ತು. ಆ ವೇಳೆ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಲಾಗಿತ್ತು.ಆ ಬಗ್ಗೆ ಇದೀಗ ಮಹತ್ವದ ಸ್ಪಷ್ಟೀಕರಣವನ್ನು ಇದೀಗ ರಾಜ್ಯ ಸರ್ಕಾರ ನೀಡಿದೆ. ಆ ಬಗ್ಗೆ ಮುಂದೆ ಓದಿ.
ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಶೇ.17ರಷ್ಟು ತಾತ್ಕಾಲಿಕ ಪರಿಹಾರವನ್ನು ಸ್ಥಳೀಯ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಮಹತ್ವದ ಸ್ಪಷ್ಠೀಕರಣವನ್ನು ಯೋಜನಾ ನಿರ್ದೇಶಕರಿಗೆ ನೀಡಿದ್ದಾರೆ.
ಅವರು ಯೋಜನಾ ನಿರ್ದೇಶಕರಿಗೆ ಬರೆದಿರುವಂತ ಪತ್ರದಲ್ಲಿ ರಾಜ್ಯ ಸರ್ಕಾರ 7ನೇ ರಾಜ್ಯ ವೇತನದ ಆಯೋಗದ ತಿಮ ವರದಿಯನ್ನು ಕಾಯ್ದಿರಿಸಿ, ದಿನಾಂಕ 01-03-2023ರ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ, ನಿವೃತ್ತ ನೌಕರರಿಗೆ ದಿನಾಂಕ 01-04-2023ರಿಂದ ಜಾರಿಗೆ ಬರುವಂತೆ ಮೂಲ ವೇತನದ, ಮೂಲ ಪಿಂಚಮಿಯ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.
ಈ ಆದೇಶದಂತೆ ರಾಜ್ಯ ಸರ್ಕಾರಿ ನೌಕರರಿಗೆ, ನಿವೃತ್ತ ನೌಕರರಿಗೆ ತಾತ್ಕಾಲಿಕ ಪರಿಹಾರ ಭತ್ಯೆಯನ್ನು ಮಂಜೂರು ಮಾಡಿ, ಹೊರಡಿಸಲಾದ ಉಲ್ಲೇಖಿತ ಆದೇಶದ ಕಂಡಿಕೆ 5 ಮತ್ತು 6ರ ಅವಕಾಶಗಳ ಕಡೆ ಗಮನ ಸೆಳೆಯುತ್ತಾ ಈ ಕೆಳಕಂಡ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ನೌಕರರ ಪ್ರಕರಣಗಳಲ್ಲಿ, ಮಧ್ಯಂತರ ಪರಿಹಾರ ಸೌಲಭ್ಯವನ್ನು ಮಂಜೂರು ಮಾಡುವುದರಿಂದ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಅನ್ವಯಿಸುವ ಸಂಸ್ಥೆಗಳ ಸ್ವಂತ ನಿಧಿ, ಸಂಪನ್ಮೂಲಗಳಿಂದ ಭರಿಸತಕ್ಕದ್ದು ಎಂದಿದ್ದಾರೆ.
ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಅಂದರೆ ಶಾಲಾ, ಕಾಲೇಜುಗಳು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ರಾಜ್ಯ ವೇತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ನೌಕರರಿಗೆ ಮಧ್ಯಂತ ಪರಿಹಾರ ಭತ್ಯೆಯನ್ನು ಮಂಜೂರು ಮಾಡುವುದರಿಂದ, ಉಂಟಾಗುವ ವೆಚ್ಚವನ್ನು ಸರ್ಕಾರದ ಅನುದಾನದಡಿ ಭರಿತಕ್ಕದ್ದು ಎಂದು ನಿರ್ದೇಶಿಸಿದ್ದಾರೆ.
ಇನ್ನೂ ಗುತ್ತಿಗೆ ಹಾಗೂ ಹೊರ ಗುತ್ತಿಗೆ, ತಾತ್ಕಾಲಿಕ ನೇಮಕಾತಿಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ ಯುಜಿಸಿ, ಐಸಿಎಆರ್, ಎಐಸಿಟಿಇ ವೇತನ ಶ್ರೇಣಿ ಕಾರ್ಯನಿರತ ನೌಕರರುಗಳಿಗೆ ಉಲ್ಲೇಖಿತ ಆದೇಶವು ಅನ್ವಯಿಸುವುದಿಲ್ಲ ಎಂಬುದಾಗಿ ಸ್ಪಷ್ಟೀಕರಿಸಿದ್ದಾರೆ.