ಸೇವಾ ಮನೋಭಾವವನ್ನು ರಾಷ್ಟ್ರೀಯ ಸೇವಾ ಯೋಜನೆ ಬೆಳೆಸುತ್ತದೆ”
– ಶ್ರೀ ಪ್ರಶಾಂತ ತೋಟಗಿ, ಪಿಡಿಓ, ಗ್ರಾಮ ಪಂಚಾಯತಿ, ಅಸುಂಡಿ
ಸವದತ್ತಿ: ಯುವಕರಲ್ಲಿ ನಾಯಕತ್ವ ಗುಣ, ಸಂಘಟನಾ ಕೌಶಲ್ಯ, ಸಮಯದ ಸದುಪಯೋಗ, ಪರಿಸರ ನೈರ್ಮಲ್ಯದ ಅರಿವು ಮತ್ತು ಸೇವಾ ಮನೋಭಾವದಂತಹ ಗುಣಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ತಮ್ಮ ವ್ಯಕ್ತಿತ್ವದಲ್ಲಿ ಸಮರ್ಥವಾಗಿ ಅಳವಡಿಸಿಕೊಳ್ಳಬೇಕೆಂದು ಅಸುಂಡಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಪ್ರಶಾಂತ ತೋಟಗಿ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕವು ಏಳು ದಿನಗಳ ಕಾಲ ತಾಲೂಕಿನ ದತ್ತುಗ್ರಾಮ ಅಸುಂಡಿಯಲ್ಲಿ ಏರ್ಪಡಿಸಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಗ್ರಾಮಗಳನ್ನು ನಾವು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾಗಿದೆ. ಈ ದಿಸೆಯಲ್ಲಿ ಯುವಕರು ತಮ್ಮ ತಮ್ಮ ಗ್ರಾಮದ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳಲು ಸರಕಾರದ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ದಿನಾಂಕ: ೦೬-೦೬-೨೦೨೩ರಿಂದ ೧೨-೦೬-೨೦೨೩ರವರೆಗೆ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೃಷಿ ಉತ್ಪಾದನೆಯಲ್ಲಿ ತಾಂತ್ರಿಕತೆಯ ಬಳಕೆಯ ಮಹತ್ವ, ಬರಡು ದನಗಳ ಚಿಕಿತ್ಸೆ ಮತ್ತು ರೋಗದ ಮುನ್ನೆಚ್ಚರಿಕೆ ಕ್ರಮಗಳು, ಪರಿಸರ ರಕ್ಷಣೆಯಲ್ಲಿ ಯುವಕರ ಪಾತ್ರ, ರಕ್ತದಾನ, ಅಂಗದಾನ ಮತ್ತು ಆಹಾರ ದಾನದ ಮಹತ್ವ, ಕಾನೂನು ಅರಿವು, ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಎಂಬ ಘೋಷವಾಕ್ಯದಂತೆ ಜಲಸಂವರ್ಧನೆ, ಅರಣ್ಯ ರಕ್ಷಣೆ, ಐತಿಹಾಸಿಕ ಸ್ಮಾರಕಗಳ ರಕ್ಷಣೆಯಂತಹ ವಿಷಯಗಳ ಕುರಿತು ವಿಶೇಷ ಉಪನ್ಯಾಸ, ಪ್ರಾತ್ಯಕ್ಷಿಕೆ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎನ್.ಆರ್ ಸವತೀಕರ ವಹಿಸಿದ್ದರು, ರಾಮನಗೌಡ ನಾಯ್ಕರ್ ಸ್ವಾಗತಿಸಿದರು, ಶ್ರೀಮತಿ ಜಿ.ಕೆ.ಅಕ್ಕಿ ವರದಿ ವಾಚಿಸಿದರು, ಶಿಬಿರದ ಸಂಯೋಜಕರಾದ ಶಿವಾನಂದ ಹೊಳಿ ವಂದಿಸಿದರು, ನಜಿಯಾ ನದಾಫ್ ನಿರ್ವಹಿಸಿದರು.
ಈ ಶಿಬಿರದಲ್ಲಿ, ಗ್ರಾಮದ ಗಣ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಮಲಪ್ರಭಾ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಶಿಬಿರದ ಸಹ ಸಂಯೋಜಕರಾದ ಮೋಹನ ಬೆಣಚಮರಡಿ ಹಾಗೂ ಬೆಳ್ಳುಬ್ಬಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸ್ವಯಂ ಸೇವಕರು ಉಪಸ್ಥಿತರಿರುವರು.