ನೆಲಮಂಗಲ: ದ್ವೇಷದ ರಾಜಕಾರಣ ಮಾಡದೇ ಅಭಿವೃದ್ಧಿಗೆ ಆದ್ಯತೆ ನೀಡುವೆ- ಶಾಸಕ ಎನ್.ಶ್ರೀನಿವಾಸಯ್ಯ ಭರವಸೆ.
ದ್ವೇಷದ ರಾಜಕಾರಣ ಮಾಡದೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ ನೂತನ ಶಾಸಕ ಎನ್.ಶ್ರೀನಿವಾಸಯ್ಯ ಅವರು ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಕಾಲಹರಣ ಮಾಡುವ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೆ ಗೇಟ್ ಪಾಸ್ ನೀಡುವುದಾಗಿ ಎಚ್ಚರಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿ ಮೈಲನಹಳ್ಳಿ ಗ್ರಾಮದ ವಿವಿಧ ದೇಗುಲಗಳ ದರ್ಶನ ಪಡೆದು ಅತ್ಯಧಿಕ ಮತಗಳಿಂದ ಆಶೀರ್ವದಿಸಿ ನೂತನ ಶಾಸಕನನ್ನಾಗಿ ಆಯ್ಕೆ ಮಾಡಿದ ಮತದಾರರು ಹಾಗೂ ತನ್ನ ಗೆಲುವಿಗಾಗಿ ಶ್ರಮಿಸಿದ ಮುಖಂಡರುಗಳಿಗೆ ಕೃತಜ್ಞತಾಪೂರಕ ನಮನಗಳನ್ನು ಸಲ್ಲಿಸಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ದ್ವೇಷ ರಾಜಕಾರಣ ಮಾಡದೇ ರಾಜಕೀಯವಾಗಿ ಸಾಕಷ್ಟು ಅನುಭವವಿದ್ದು ಎಲ್ಲರ ಮನಗೆದ್ದು ವಿಶೇಷ ಅನುದಾನಗಳನ್ನು ತಂದು ಹಂತ ಹಂತವಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು, ಸೋಂಪುರ, ತ್ಯಾಮಗೊಂಡ್ಲು ಹಾಗೂ ಕಸಬಾ ಹೋಬಳಿಯಲ್ಲೂ ಶಾಸಕರ ಕಛೇರಿ ತೆರೆದು ಆಯಾ ಭಾಗದ ಜನತೆಯ ಕಷ್ಟ ಕರ್ಪಣ್ಯಾಗಳಿಗೆ ಸದಾ ಸ್ಪಂದಿಸುವ ಮೂಲಕ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದಾಗಿ ತಿಳಿಸಿದರು.
ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ಕರೆದು ಬಾಕಿ ಉಳಿದಿರುವ ಕಾಮಗಾರಿಗಳ ಕೈಗೆತ್ತಿಕೊಳ್ಳುವ ಜೊತೆಗೆ ಬಸ್ ನಿಲ್ದಾಣ ಕಾಮಗಾರಿ, ಒಳಚರಂಡಿ ವ್ಯವಸ್ಥೆ, ಶಾಶ್ವತ ಕುಡಿಯುವ ನೀರು ಯೋಜನೆಗಾಗಿ ಕೆರೆಗಳ ಪುನಶ್ಚೇತನದೊಂದಿಗೆ ಹೇಮಾವತಿ, ಕಾವೇರಿ ನೀರನ್ನು ತರಲು ಶ್ರಮವಹಿಸುವುದಾಗಿ ತಿಳಿಸಿದ ಅವರು ಸರ್ಕಾರದ ಗಮನ ಸೆಳೆದು ಮೆಟ್ರೋ ರೈಲು ಯೋಜನೆ ನೆಲಮಂಗಲ ನಗರದವರೆಗೂ ತರಲು ಹೋರಾಟ ನಡೆಸುವುದಾಗಿ ತಿಳಿಸಿದರು.
ಚುನಾವಣೆಗೂ ಮುನ್ನ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಗ್ಯಾರಂಟಿ ಈಡೇರಿಸುವುದಾಗಿ ತಿಳಿಸಿದರು.
ಚುನಾವಣೆಯಲ್ಲಿ ಇತರೇ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತ ಕೆಲವರು 32 ಸಾವಿರಕ್ಕೂ ಅಧಿಕ ಮತಗಳಿಂದ ತಾನು ಶಾಸಕನಾಗಿ ಆಯ್ಕೆಯಾಗಿರುವುದನ್ನು ಮನಗಂಡು ಹಾರ ತುರಾಯಿ ಹಾಕಿ ಹೂವಿನ ಬೊಕ್ಕೆ ನೀಡಲು ಬಂದ ಕೆಲವರಿಗೆ ನೇರವಾಗಿಯೇ ಚಾಟಿ ಬೀಸಿ ಅವರ ಆತ್ಮಕ್ಕೆ ತಟ್ಟುವಂತೆ ಮಾತನಾಡಿದ ನಂತರ ಸಮಾಧಾನಗೊಂಡ ಶಾಸಕರು ದ್ವೇಷದ ರಾಜಕಾರಣ ನನಗಿಷ್ಟವಿಲ್ಲ ಎಲ್ಲರೂ ಪಕ್ಷಬೇಧ ಮರೆತು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಸೂಕ್ತ ಸಲಹೆ, ಸಹಕಾರ ನೀಡಬೇಕೆಂದು ಕೋರಿದರು.
ಸಂದರ್ಭದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಆರ್. ಗೌಡ, ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ. ನಾಗರಾಜು, ನಗರಸಭೆ ಅಧ್ಯಕ್ಷರಾದ ಲತಾ ಹೇಮಂತಕುಮಾರ್, ಬಿ ಎಂ ಟಿ ಸಿ ಮಾಜಿ ನಿರ್ದೇಶಕ ಮಿಲ್ಟ್ರಿ ಮೂರ್ತಿ ಮಾಮ, ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ನಾಗರಾಜು, ಎಂ.ಕೆ. ಆಂಜನಮೂರ್ತಿ, ಕೆ.ಕೃಷ್ಣಪ್ಪ, ಪಿ.ನಟರಾಜು, ಸಿದ್ದಗಂಗಪ್ಪ, ಶೇಖರಪ್ಪ, ಎಂ.ಆರ್, ಲೋಕೇಶ್, ಪ್ರಶಾಂತ್, ಶ್ರೀಮತಿ ಹೊನ್ನಾಚಾರ್, ಜಗದಾಂಬ ಪುಟ್ಟಸ್ವಾಮಿ, ರಂಗನಾಥ್, ಮಂಜುನಾಥ್ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಶಾಸಕರ ಅನುಯಾಯಿಗಳು ಹಾಗೂ ಕೆಲ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದು ನೂತನ ಶಾಸಕರಿಗೆ ಪುಷ್ಪಗುಚ್ಛ ಹಾಗೂ ಶಾಲು, ಹಾರ, ಹಣ್ಣಿನ ಬುಟ್ಟಿ ನೀಡಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಿದರು.