ಮೌಳಂಗಿ ಇಕೋ ಪಾರ್ಕ
ಕರ್ನಾಟಕದ ಪಶ್ಚಿಮಘಟ್ಟಗಳು ಜಾಗತಿಕ ಮಟ್ಟದಲ್ಲಿ ಅಮೂಲ್ಯವಾದ ಅಪರೂಪದ ವನ್ಯಜೀವಿಗಳ ತಾಣಗಳಾಗಿವೆ. ಅದರಲ್ಲಿ ಮೌಳಂಗಿ ಇಕೋ ಪಾರ್ಕಕೂಡ ಒಂದಾಗಿದೆ.ಅಲ್ಲಲ್ಲಿ ವನಪಾಲಕರ ಅರಣ್ಯ ಇಲಾಖೆಯ ರಕ್ಷಣಾ ಗೇಟ್ ,ದಾಂಡೇಲಿ. ಹೀಗೆ ಎಲ್ಲ ಮಾರ್ಗಗಳಲ್ಲಿಯೂ ತಪಾಸಣಾ ಚೌಕಿಗಳಿಂದ ನಿರ್ಭಂದಿತ ಪ್ರದೇಶವಾಗಿ ಈ ಸ್ಥಳಗಳು ರಕ್ಷಣೆಯ ಮೂಲಕ ಪರಿಸರ ಜಾಗೃತಿಯಲ್ಲಿ ತೊಡಗಿವೆ.ಹಳಿಯಾಳದಿಂದ ಬರ್ಚಿ ಮಾರ್ಗವಾಗಿ ದಾಂಡೇಲಿ ತಲುಪಿದರೆ ಅಲ್ಲಿಂದ ೪ ಕಿ.ಮೀ ಅಂತರದಲ್ಲಿ ಮೌಳಂಗಿ ಇಕೋ ಪಾರ್ಕ ಇದೆ.
ದಾರವಾಡದಿಂದ ದಾಂಡೇಲಿ ೭೦ ಕಿ.ಮೀ. ಬೆಳಗಾವಿಯಿಂದ ೯೩ ಕಿ.ಮೀ.ಹುಬ್ಬಳ್ಳಿಯಿಂದ ೭೪ ಕಿ.ಮೀ ಅಂತರದಲ್ಲಿರುವ ಈ ಸ್ಥಳ ಪ್ರೇಮಿಗಳಿಗಂತೂ ಹೇಳಿ ಮಾಡಿಸಿದ ತಾಣ.ಕುಟುಂಬ ಸಹಿತ ಬರುವವರಿಗೂ ಕೂಡ ಮಕ್ಕಳಿಗೆ ಆಟವಾಡಲು ಅಲ್ಲಲ್ಲಿ ಇಳಿಜಾರಿನ ಜಾರುಬಂಡಿ,ಜೋಕಾಲಿ.ಗುಡಿಸಿಲಿನ ಆಕಾರದ ಟೆಂಟ್. ಟೈಯರ್ ಹಗ್ಗ ಕಟ್ಟಿ ಜೋತು ಬೀಳಿಸಿದ್ದು ಅವುಗಳ ಮೂಲಕ ಜೀಕಬಹುದು.
ರಜೆಯ ಮಜ ಅನುಭವಿಸುವವರಿಗೆ ಇದೊಂದು ಹೇಳಿ ಮಾಡಿಸಿದ ಜಾಗ. ದಟ್ಟವಾದ ಕಾಡು.ಇಲ್ಲಿನ ಅಪರಿಮಿತ ಪ್ರಕೃತಿ ಸೌಂದರ್ಯವನ್ನು ಮತ್ತೆ ಮತ್ತೆ ನೋಡಬೇಕೆನ್ನುವಂತೆ ಬೆಳೆದುನಿಂತ ಹಸಿರುಟ್ಟ ಅರಣ್ಯರಾಶಿ.ವಿಶಾಲವಾದ ಜಾಗೆಯಲ್ಲಿ ಹರಿದಿರುವ ಕಾಳಿ ನದಿಯು ನೋಡುಗರನ್ನು ತನ್ನತ್ತ ಕೈ ಬೀಸಿ ಕರೆಯುವಂತೆ ಇದೊಂದು ಪ್ರವಾಸೀ ತಾಣವಾಗಿ ನಿರ್ಮಾಣವಾಗಿರುವುದು ವಿಶೇಷ.
ಈಗ ನಾನು ಹೇಳ ಹೊರಟಿರುವುದು ನಮ್ಮ ಆಫೀಸ್ ಸಿಬ್ಬಂಧಿಯೊಡನೆ ೨೦೨೦ ರಲ್ಲಿ ಹೋಗಿ ಬಂದ ಮೌಲಂಗಿ ಪಾಲ್ಸ(ಇಕೋ ಕ್ಲಬ್.) ದಾಂಡೇಲಿ ಕುರಿತು. ನಮ್ಮ ಆಫೀಸಿನ ಸಿಬ್ಬಂಧಿಗಳಾದ ಮಲ್ಲಿಕಾರ್ಜುನ ಹೂಲಿ. ವಿನೋದ ಹೊಂಗಲ.ಜಗದೀಶ ಗೋರೋಬಾಳ.ಮಂಜುನಾಥ ಕಮ್ಮಾರ.ಕಮ್ಮಾರ ಗುರುಗಳ ಅಳಿಯ ವಿಶಾಲ್ ಎಲ್ಲರೂ ಸೇರಿ ದಾಂಡೇಲಿಗೆ ಹೋಗುವ ತಯಾರಿ ನಡೆಸಿದೆವು. ಕಮ್ಮಾರ್ ಸರ್ ಕಾರಿನಲ್ಲಿ ನಾಲ್ಕು ಜನ.ಅವರ ಅಳಿಯನ ಕಾರಿನಲ್ಲಿ ಉಳಿದವರು. ಹೀಗೆ ಯೋಜನೆ ರೂಪಿಸಿದ್ದೆವು. ರವಿವಾರ ಸವದತ್ತಿಯಿಂದ ಎಲ್ಲರೂ ಬೇಗ ಹೊರಟೆವು. ಹಳಿಯಾಳದಲ್ಲಿ ಕಮ್ಮಾರ ಸರ್ ಮಾವನವರ ಮನೆಗೆ ಹೋಗಿ ಅಲ್ಲಿ ಟಿಫಿನ್ ಮಾಡೋದು ನಂತರ ದಾಂಡೇಲಿಯತ್ತ ಪ್ರಯಾಣ ನಮ್ಮ ಯೋಜನೆ.
ಹಳಿಯಾಳ ನಾವು ತಲುಪುವಷ್ಟರಲ್ಲಿ ಕಮ್ಮಾರ ಸರ್ ಅತ್ತಿಗೆ(ಅವರ ಅಕ್ಕ) ನಮಗೆ ಸಿಹಿ ಅಡುಗೆ ಮಾಡಿದ್ದರು. ನಾವೆಲ್ಲ ಸಿಹಿ ಭೋಜನ ಸ್ವೀಕರಿಸಿ ದಾಂಡೇಲಿಯತ್ತ ಪ್ರಯಾಣ ಬೆಳೆಸಿದೆವು.ಅಲ್ಲಿ ನದಿಯಲ್ಲಿ ಈಜಲೆಂದು ಮೊದಲೇ ನಮ್ಮ ಬಟ್ಟೆಬರೆಗಳನ್ನು ಜೊತೆಗೆ ಇರಿಸಿಕೊಂಡಿದ್ದೆವು. ಇದು ವೈಟ್ ವಾಟರ್ ರಾಪ್ಟಿಂಗಗೆ ಹೇಳಿ ಮಾಡಿಸಿದ ತಾಣವಾಗಿದ್ದು ಮೊದಲು ಕಾರುಗಳನ್ನು ನಿಲುಗಡೆ ಜಾಗದಲ್ಲಿ ನಿಲ್ಲಿಸಿ ಪ್ರವೇಶ ಹಣವನ್ನು ತುಂಬಿ ಒಳಗೆ ಪ್ರವೇಶಿದೆವು. ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆಗಳ ತಾಣವನ್ನು ವೀಕ್ಷಿಸಿ ಕಾಳಿ ನದಿಗೆ ಇಳಿಯಲು ನಮ್ಮ ನಮ್ಮ ಬಟ್ಟೆಗಳನ್ನು ಹೊರತೆಗೆದುಕೊಂಡು ತಯಾರಾದೆವು. ಮೊದಲು ಬೋಟಿಂಗ್ ಮಾಡುವುದು ಎಂದು ತೀರ್ಮಾನಿಸಿದೆವು. ಇಲ್ಲಿಗೆ ಬಂದೊಡನೆ ಪ್ರವೇಶದ್ವಾರ ಕಾಣ ಸಿಗುತ್ತದೆ.ಅಲ್ಲಿ ನಿಮ್ಮ ಪ್ರವೇಶ ಖಚಿತಪಡಿಸಿಕೊಂಡು ವಾಹನ ತಂದಿದ್ದಲ್ಲಿ ಅಲ್ಲಿಯೇ ಪಾರ್ಕಿಂಗ ವ್ಯವಸ್ಥೆ ಕೂಡ ಇದ್ದು ಒಂದೆಡೆ ನಿಲ್ಲಿಸಿ. ಇಲ್ಲಿ ಯಾವುದೇ ಹೊಟೇಲ್ ಅಥವ ತಿಂಡಿತಿನಿಸುಗಳು ಸಿಗುವುದಿಲ್ಲ. ಹೀಗಾಗಿ ಬರುವಾಗ ದಾಂಡೇಲಿಯಲ್ಲಿಯೇ ಏನಾದರೂ ತಿನ್ನಲು, ಅಥವ ಒಂದೆಡೆ ಮನೆಮಂದಿಯೆಲ್ಲ ಕುಳಿತು ಊಟ ಮಾಡಲು ಅವಕಾಶ ಸಾಕಷ್ಟಿದ್ದು ಮುಂಚಿತವಾಗಿಯೇ ತಮಗೇನು ಬೇಕೋ ಅದನ್ನು ತಂದಿದ್ದರೆ ಒಳ್ಳೆಯದು
ನೈಸರ್ಗಿಕವಾಗಿ ಸೂಪಾ ಅನೆಕಟ್ಟೆಯಿಂದ ಹರಿದು ಬರುವ ಕಾಳಿ ನದಿಯು ಎರಡು ಬದಿಯ ಬೆಟ್ಟದ ನಡುವಿನ ವಿಶಾಲವಾದ ಕಲ್ಲುಬಂಡೆಗಳಿಂದ ಕೂಡಿದ ಸ್ಥಳದಲ್ಲಿ ಜುಳುಜುಳು ನಿನಾದ ಮಾಡುತ್ತ ಹರಿದು ಸಾಗುವ ಸ್ಥಳವಿದು.ಸುತ್ತಲೂ ಬಿದಿರು ಬೊಂಬುಗಳು,ಹಸಿರುಟ್ಟ ಗಿಡಮರಗಳು ಆಕಾಶವನ್ನು ಚುಂಬಿಸುತ್ತಿವೆಯೇನೋ ಎನ್ನುವಂತೆ ಕಂಡು ಬರುವ ಪ್ರಕೃತಿ ನೋಡುಗರನ್ನು ಮಂತ್ರಮುಗ್ದವಾಗಿಸುತ್ತವೆ..
ಹಾಗೆ ಗೇಟ್ ದಾಟಿ ಒಳಗೆ ಬಂದರೆ ಜುಳು ಜುಳು ನಿನಾದದ ಕಾಳಿ ಒಂದೆಡೆ ಕಂಡು ಬಂದರೆ ಮತ್ತೊಂದೆಡೆ ಕಾಡು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಕಾಡಿನೊಳಗಡೆ ಸಂಚರಿಸುತ್ತ ಪ್ರಕೃತಿಯನ್ನು ಆಸ್ವಾದಿಸುತ್ತ ನದಿಯೆಡೆಗೆ ಬಂದರೆ ಮಕ್ಕಳ ಜೊತೆಗೆ ಬಂದಿದ್ದರೆ ಅವರನ್ನು ನದಿಯೆಡೆಗೆ ಬಿಡದಂತೆ ಜಾಗರೂಕತೆ ಕೂಡ ವಹಿಸತಕ್ಕದ್ದು.
ನಾವು ಬೋಟ್ ಆಯ್ದುಕೊಂಡೆವುಸುಮಾರು ೩೦ ನಿಮಿಷಗಳವರೆಗೆ ನಮ್ಮನ್ನು ಅವರು ಬೋಟಿಂಗ್ ಗೆ ಕರೆದೊಯ್ಯುವರು. ಮೊದಲಿಗೆ ನಮಗೆ ನೀರಿನಲ್ಲಿ ಏನಾದರೂ ಅನಾಹುತ ಸಂಭವಿಸಬಾರದು ಎಂದು ಮುನ್ನೆಚ್ಚರಿಕೆ ಸಲುವಾಗಿ ಈಜುಗವಚಗಳನ್ನು ನಮಗೆ ಒದಗಿಸಿದರು.ನಮ್ಮ ಕೈಯಲ್ಲಿ ನೀರನ್ನು ಮುನ್ನುಗ್ಗಿಸಿ ಬೋಟ್ ಚಲಿಸುವಂತೆ ಮಾಡಲು ಕೈಯಲ್ಲಿ ಕಟ್ಟಿಗೆಯ ಹಿಡಿಯಿರುವ ಕವಚಗಳನ್ನು ನೀಡಿದರು.
ಈ ಬೋಟಿಂಗ್ ತುಂಬ ಅಪಾಯಕಾರಿ ಕೂಡ ನಮ್ಮನ್ನು ಅವರು ನದಿಯಲ್ಲಿ ಕರೆದೊಯುಯವಾಗ ಎಷ್ಟು ಖುಷಿ ಇತ್ತೋ ನಂತರ ನಟ್ಟ ನಡುವೆ ನೀರಿನಲ್ಲಿ ಕರೆದೊಯ್ದಾಗ ಕಾಳಿ ನದಿಯ ರಭಸ ಮತ್ತು ಅಲ್ಲೊಂದು ಮರವಿದೆ.ಅದರ ಕೆಳಗೆ ಕರೆದೊಯ್ದಾಗ ನೀರಿನಿಂದ ಉಂಟಾದ ಜಲಪಾತ ತುಂಬ ಹತ್ತಿರದಲ್ಲಿರುವುದನ್ನು ಕಂಡಾಗ ನಮ್ಮ ಬೋಟ್ ಏನಾದರೂ ಆಯತಪ್ಪಿದರೆ ನಮ್ಮ ಗತಿ ಎಂದು ಭಯವಾಗತೊಡಗಿತು.ಅದೊಂದು ರುದ್ರರಮಣೀಯ ಸನ್ನಿವೇಶ. ಬೇಗ ನಮ್ಮನ್ನು ದಡದ ಕಡೆಗೆ ಕರೆದೊಯ್ಯುವುದು ಸೂಕ್ತವೇನೋ ಅನ್ನಿಸತೊಡಗಿತು.
ನಮ್ಮ ಜೊತೆಗೆ ಕಮ್ಮಾರ ಸರ್ ಅಳಿಯ ವಿಶಾಲ್ ಹಾಗೂ ಮಲ್ಲಿಕಾರ್ಜುನ ಹೂಲಿ. ವಿನೋದ ಹೊಂಗಲ್ ವಯಸ್ಸಿನಲ್ಲಿ ಚಿಕ್ಕವರಿದ್ದ ಕಾರಣ ಅವರಿಗೆ ಇದರ ಮಜಾ ಸವಿಯಬೇಕು ಎಂದು ಪೆಡಲ್ ಗಳನ್ನು ತುಳಿಯುವ ಕುತೂಹಲ. ನಮಗೆ ಬೇಗ ದಡದತ್ತ ಸಾಗಬೇಕು ಎಂಬ ಕನವರಿಕೆ. ಗಟ್ಟಿಜೀವ ಮಾಡಿ ಅಲ್ಲಿನ ಪ್ರಕೃತಿ ನದಿಯ ಆಳದ ರಮಣೀಯ ನೋಟವನ್ನು ನೋಡಿದೆವು.ಅವರು ಮಕ್ಕಳಂತೆ ಗಿಡದ ಟೊಂಗೆಗಳನ್ನು ಮುಟ್ಟುತ್ತ ಪೋಟೋ ತಗೆದುಕೊಂಡರು. ಈ ಸವಿ ಅನುಭವಿಸಿ ದಡಕ್ಕೆ ಬಂದೆವು. ದಡದಲ್ಲಿ ನೀರಿನಲ್ಲಿ ಈಜಾಟ ನಡೆಸಿದೆವು. ನಂತರ ಮಕ್ಕಳಾಟದತ್ತ ನಮ್ಮ ದೃಷ್ಟಿ ಹೊರಟಿತು.
ಮಕ್ಕಳಿಗಾಗಿ ಇರುವ ಜಾರುಬಂಡಿ,ಟಾಯರ್ ಜೋಕಾಲಿ ಇತ್ಯಾದಿಗಳೆಡೆಗೆ ಉಲ್ಲಾಸಭರಿತರಾಗಿ ನಾವು ಮಕ್ಕಳಾಗಿ ಖುಷಿ ಅನುಭವಿಸಿದೆವು.. ಹೀಗೆ ದೇಹದ ಆಯಾಸವನ್ನೆಲ್ಲ ತಣಿಸಿಕೊಂಡು.ಮನಮೋಹಕ ದೃಶ್ಯದಲ್ಲಿ ಕಾಳಿ ನದಿಯ ಹಾಗೂ ಸುತ್ತಲಿನ ಬೆಟ್ಟಗುಡ್ಡಗಳ ಪ್ರಕೃತಿರಾಶಿಯನ್ನು ಗಮನಿಸುತ್ತ ಒಂದೆಡೆ ಬಂದು ಕುಳಿತುಕೊಂಡು ಊಟ,ತಿಂಡಿ ತಿನಿಸುಗಳ ಸವಿಯನ್ನು ಸವಿದೆವು ನಿಜಕ್ಕೂ ಇದೊಂದು ಅದ್ಬುತ ಪ್ರಕೃತಿ ತಾಣ. ಈ ಸ್ಥಳದಲ್ಲಿ ಹೆಚ್ಚು ಜನಸಂದಣಿ ಇರುವ ಸಮಯವೆಂದರೆ ಮಕರ ಸಂಕ್ರಾಂತಿ ಹಾಗೂ ಮಹಾ ಶಿವರಾತ್ರಿ ಈ ಸಂದರ್ಭದಲ್ಲಿ ದಾಂಡೇಲಿ ಸುತ್ತಮುತ್ತಲಿನ ಜನರೆಲ್ಲ ಇಲ್ಲಿಗೆ ಬಂದು ಸ್ನಾನ ಮಾಡಿ ಹೋಗುವುದು ವಾಡಿಕೆ.
ಇನ್ನುಳಿದಂತೆ ಪ್ರತಿ ದಿನವೂ ಪ್ರವಾಸಿಗರು,ಪ್ರೇಮಿಗಳು ಭೇಟಿ ನೀಡುವುದಂತೂ ಸಾಮಾನ್ಯ. ವರ್ಷವಿಡೀ ಯಾವುದೇ ಸಮಯದಲ್ಲಿ ಬಂದರೂ ಈ ಸ್ಥಳ ವೀಕ್ಷಣೆಗೆ ಲಭ್ಯ.ಆದರೆ ಕಾಳಿ ನದಿಯ ನೀರನ್ನು ಆಣೆಕಟ್ಟೆಯಿಂದ ಹೊರಬಿಟ್ಟಾಗಲಂತೂ ಇದರ ಸೌಂದರ್ಯ ಇಮ್ಮಡಿಗೊಂಡಿರುತ್ತದೆ. ಆ ಸಮಯ ಹೊಂದಿಸಿಕೊಂಡು ಅಂದರೆ ಮಳೆಗಾಲದ ಅವಧಿ ಜೂನ್ ದಿಂದ ಡಿಸೆಂಬರ್ವರೆಗೂ ಬಂದಲ್ಲಿ ಇನ್ನೂ ಹೆಚ್ಚಿನ ಪ್ರಕೃತಿ ನಿರ್ಮಿತ ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಇಲ್ಲಿ ತಲುಪುವಷ್ಟರಲ್ಲಿ ವಿಶಾಲವಾಗಿ ಆಳೆತ್ತರದಲ್ಲಿ ಆಕಾಶಕ್ಕೆ ಮುತ್ತಿಕ್ಕುವಂತೆ ನಿಂತ ಮರಗಳು.ನಿಮ್ಮನ್ನು ಸ್ವಾಗತಿಸತೊಡಗುತ್ತವೆ,ಪ್ರೇಮಿಗಳಿಗಂತೂ ಇದು ಹೇಳಿ ಮಾಡಿಸಿದ ಜಾಗ.ದಿನವಿಡೀ ಅರಣ್ಯದಲ್ಲಿ ಸುತ್ತಾಡಿ ನೀರಿನಲ್ಲಿ ಮಿಂದು ತಣಿಯಲು ಪ್ರೇಮಿಗಳ ತಾಣವೂ ಕೂಡ.ಕೇವಲ ಪ್ರೇಮಿಗಳಿಗಷ್ಟೇ ಅಲ್ಲ ಕುಟುಂಬದ ಎಲ್ಲ ಸದಸ್ಯರೊಂದಿಗೂ ಬಂದು ಇಲ್ಲಿ ವಿಶ್ರಮಿಸಿ ಹೋಗಬಹುದು.
ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ-೫೯೧೧೧೭
ತಾಲೂಕ ಃ ಸವದತ್ತಿ ಜಿಲ್ಲೆಃ ಬೆಳಗಾವಿ
೯೪೪೯೫೧೮೪೦೦ ೮೧೪೭೨೭೫೨೭೭