SSLC ಟಾಪರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ: ಆತನ ಅಂಗಾಂಗ ದಾನ ಮಾಡಿದ್ದರಿಂದ ಆರು ಜನರ ಜೀವ ಉಳಿದಿದೆ.
ಆತನ ಅಂಗಾಂಗ ದಾನ ಮಾಡಿ ಆತನ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ತಿರುವನಂತಪುರ:
ಎಸ್ಎಸ್ಎಲ್ಸಿ ಟಾಪರ್ ಆದ ವಿದ್ಯಾರ್ಥಿಯೊಬ್ಬ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಆತನ ಅಂಗಾಂಗ ದಾನವನ್ನು ಮಾಡಿ ಪೋಷಕರು ಸಾರ್ಥಕತೆಯನ್ನು ಮೆರದಿದ್ದಾರೆ.
ಅಟ್ಟಿಂಗಲ್ನ ಸರ್ಕಾರಿ ಬಾಲಕರ ಎಚ್ಎಸ್ಎಸ್ ಶಾಲೆಯ ವಿದ್ಯಾರ್ಥಿಯಾಗಿದ್ದ ಬಿಆರ್ ಸಾರಂಗ್ (16) ಮೇ.6 ರಂದು ತನ್ನ ತಾಯಿಯೊಂದಿಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ವಡಕ್ಕೊಟ್ಟುಕಾವ್ನ ಕುಣಂತುಕೋಣಂ ಸೇತುವೆ ಬಳಿ ಅಪಘಾತವಾಗಿದೆ.
ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಬಿಆರ್ ಸಾರಂಗ್ ಬುಧವಾರ( ಮೇ.17 ರಂದು) ಮೃತಪಟ್ಟಿದ್ದಾನೆ.
ಇತ್ತ ಶುಕ್ರವಾರ (ಮೇ.19 ರಂದು) ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಸಾರಂಗ್ ಯಾವುದೇ ಗ್ರೇಸ್ ಮಾರ್ಕ್ಗಳ ಸಹಾಯವಿಲ್ಲದೆ A+ ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
ರಾಜ್ಯದ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶಗಳನ್ನು ಪ್ರಕಟಿಸುವಾಗ ಟಾಪ್ ಗ್ರೇಡ್ ನಲ್ಲಿ ಪಾಸ್ ಆದ ವಿದ್ಯಾರ್ಥಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಾ ಭಾವುಕರಾಗಿದ್ದರು.
ಸಾರಂಗ್ ಪೋಷಕರು ತನ್ನ ಮಗನ ಅಂಗಾಂಗವನ್ನು ದಾನ ಮಾಡಿದ್ದಾರೆ. ಸಾರಂಗ್ ಅವರ ಅಂಗಾಂಗ ದಾನದಿಂದ 6 ಮಂದಿಯ ಜೀವ ಉಳಿದಿದೆ.