ಕಿತ್ತೂರ ನಾಡಿನ ತಪೋನಿಧಿ ಜಚನಿ.
ಸಾಹಿತ್ಯ ಕ್ಷೇತ್ರದ ಸಮೃದ್ಧ ಬೆಳವಣಿಗೆಗೆ ಮಠಾಧಿಪತಿಗಳ ಪಾತ್ರ ಬಹುದೊಡ್ಡದು.12ನೇ ಶತಮಾನದ ಬಸವಾದಿ ಪ್ರಮಥರ ನಂತರ 20 ನೇ ಶತಮಾನದವರೆಗೂ ಅನೇಕ ಪುಣ್ಯ ಪುರುಷರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಶ್ರೇಷ್ಠ ಕೊಡುಗೆ ನೀಡಿದ್ದಾರೆ.
ಈ ಪರಂಪರೆಯಲ್ಲಿ 20ನೇ ಶತಮಾನದಲ್ಲಿ ಗುಳೂರಿನ ಡಾ.ಜಚನಿ ಅವರು ಅಗ್ರಗಣ್ಯರಾಗಿದ್ದಾರೆ.
ಶ್ರೀ ಜಚನಿ ಎಂಬುದು ಶ್ರೀ ಜ, ಪ, ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನಿಡುಮಾಮಿಡಿ ಸಂಸ್ಥಾನ ಗೂಳೂರು ಇವರ ಕಾವ್ಯನಾಮ.
ಕನ್ನಡನಾಡಿಗೆ ವೀರರತ್ನಗಳಿತ್ತಂತೆ ವೈರಾಗ್ಯ ತಪೋನಿಧಿಗಳನ್ನು ನೀಡಿದ ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನ ಅಂಬಡಗಟ್ಟಿಯಲ್ಲಿ 20-10-1909 ರಂದು ಜನಿಸಿದ ಶ್ರೀಗಳವರು ಕೋಲಾರ ಜಿಲ್ಲೆಯ ಗೂಳೂರಿನಲ್ಲಿ ನಿಡುಮಾಮಿಡಿ ಸಂಸ್ಥಾನದ ಪೀಠಾಧಿಪತಿಗಳಾಗದುದು ಈ ಕಿತ್ತೂರ ನಾಡಿನ ಭಾಗ್ಯವೇ ಸರಿ.
ಶ್ರೀಗಳವರು ಕಾವ್ಯ, ತತ್ವ ,ಚರಿತ್ರೆ, ನಾಟಕ, ಪ್ರಬಂಧ,ವಚನ ,ವಿಮರ್ಶೆ ,ಸಂಶೋಧನೆ, ಲಕ್ಷಣ ಶಾಸ್ತ್ರ ,ಅನುವಾದ ,ಪ್ರವಾಸ ಸಾಹಿತ್ಯ ,ಹಾಗೂ ಪತ್ರ ಸಾಹಿತ್ಯ ಹೀಗೆ ಸಾಹಿತ್ಯದ ಅನೇಕ ಪ್ರಾಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಇವರ ಸಾಹಿತ್ಯ ಕೃಷಿಗೆ ಇವರಿಗೆ ಅನೇಕ ಬಿರುದು ಪ್ರಶಸ್ತಿಗಳು ಒಲಿದು ಬಂದಿವೆ. ಅಲ್ಲದೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಲಿಟರೇಚರ್ ಗೌರವ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ತನ್ಮೂಲಕ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.ಶ್ರೀ ಜಚಣಿಯವರ ಜೀವನವೇ ಸಾಹಿತ್ಯವೆನಿಸುವಷ್ಟು ಸಾಹಿತ್ಯಕ್ಕೂ ಅವರ ಬದುಕಿಗೂ ಅವಿನಾವಭಾವ ಸಂಬಂಧವಿದೆ. ಶ್ರೀಗಳವರಿಗೆ ಸಾಹಿತ್ಯ ಸೇವೆಯೇ ಶಿವಪೂಜೆ ಸಾಹಿತ್ಯ ಸಂಗ್ರಹವೇ ಕಾಮಧೇನು, ಕಲ್ಪವೃಕ್ಷ ಸಾಹಿತ್ಯ ಅಭ್ಯಾಸವೇ ಚಿಂತಾಮಣಿ, ಪ್ರಾಣಶಕ್ತಿ ಐಕ್ಯದ ಆನಂದವಾಗಿತ್ತು. ಶ್ರೀಗಳವರು ಬರೆದಂತೆ ಬದುಕಿದರು ಬದುಕಿದಂತೆ ಬರೆದರು.
ಶ್ರೀಗಳವರ ಸಾಹಿತ್ಯ ರಚನಾಶೈಲಿ..
ಅರ್ಥಗರ್ಭಿತ ಚಿಕ್ಕ ಹಾಗೂ ಚೊಕ್ಕ ವಾಕ್ಯಗಳಿಂದೊಡಗೂಡಿದ ಪದ್ಯಮಯ ಪ್ರಾಸಭರಿತ ಹೃದ್ಯವಾದ ಗದ್ಯ ಶೈಲಿ ಕನ್ನಡಕ್ಕೆ ಅವರದೇ ಕಾಣಿಕೆಯಾಗಿದೆ.ಓದುಗನು ಇವರ ಗದ್ಯ ಪದ್ಯ ರಚನಾ ಶೈಲಿಯನ್ನು ಕೂಡಲೇ ಗುರುತಿಸಬಲ್ಲನು .ಹೊಸಗನ್ನಡದ ಗದ್ಯಕ್ಕೆ ಹದವನ್ನು ಹರಿತವನ್ನು ತಂದುಕೊಟ್ಟ ಹದವರಿತ ಲೇಖಕರಲ್ಲಿ ಶ್ರೀಗಳ ಹೆಸರನ್ನು ಮರೆಯುವಂತಿಲ್ಲ ಎಂಬುದನ್ನು ಆಧುನಿಕ ಸಾಹಿತ್ಯ ಚರಿತ್ರೆಗಾರರು ಗಮನಿಸಬೇಕು .
ಶ್ರೀಗಳ ಸಾಹಿತ್ಯ ಕೃಷಿ..
ಶ್ರೀಗಳಸಾಹಿತ್ಯ ಕೃಷಿ ಸಾಗರದಂತೆ ವಿಶಾಲ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಶ್ರೀಗಳವರು ಬರೆಯದ ಸಾಹಿತ್ಯ ಪ್ರಕಾರಗಳಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು.ಶ್ರೀಗಳು ತ್ರಿಭಾಷಾ ಪಂಡಿತರಾಗಿದ್ದರೂ ಕನ್ನಡದ ಮೇಲೆ ವಿಶೇಷ ಒಲವು .ಇವರು ಅಚ್ಚಗನ್ನಡದ ಪ್ರಬಂಧ ಸಾಹಿತ್ಯದ 50 ಕೃತಿಗಳು, 7,000 ವಚನಗಳು, ಅನೇಕ ಸಂಶೋಧನಾತ್ಮಕ ಲೇಖನ ಹಾಗೂ ಕೃತಿಗಳನ್ನು ರಚಿಸಿದ್ದಾರೆ .
ಜಚನಿ ಅವರ ಕಾವ್ಯ ಸಿದ್ಧಾಂತ ಸಾಹಿತ್ಯ, ಲಾಕ್ಷಣಿಕ ಸಾಹಿತ್ಯ ,ಪ್ರಬಂಧ ಸಾಹಿತ್ಯ ಚಾರಿತ್ರಿಕ ಸಾಹಿತ್ಯ ,ಸಂಶೋಧನಾ ಸಾಹಿತ್ಯ, ವಿಮರ್ಶಾ ಸಾಹಿತ್ಯ ,ಹೀಗೆ ಪ್ರತ್ಯೇಕವಾಗಿ ಮಹಾ ಪ್ರಬಂಧಗಳನ್ನು ಬರೆಯುವಷ್ಟು ಇವರು ಸಾಹಿತ್ಯ ಕೃಷಿ ವಿಶಾಲವಿದೆ ಹಾಗೂ ವೈವಿಧ್ಯಮಯವಾಗಿದೆ .ಸಂಶೋಧಕರು ಇತ್ತ ಗಮನಹರಿಸುವುದು ಅಗತ್ಯ.
ಶ್ರೀ ಗಳವರು ತಮ್ಮ ಬದುಕಿನ ಒಂದು ಸಂದರ್ಭದಲ್ಲಿ ಕನ್ನಡ ಭಾಷೆಗೆ ಆದ ಅವಮಾನವನ್ನು ಖಂಡಿಸಿ ಕನ್ನಡವನ್ನೇ ಓದುವುದು ಬರೆಯುವುದು ಹಾಗೂ ಜನಸಾಮಾನ್ಯರಲ್ಲಿ ಅಚ್ಚಗನ್ನಡದ ಬಳಕೆಯನ್ನು ರೂಢಿಸುವ ಪಣತೊಟ್ಟರು.
ಶ್ರೀಗಳವರು ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ತಮಿಳುನಾಡುಗಳಲ್ಲಿ ಸಂಚರಿಸಿ ಅಗಣಿತ ಕನ್ನಡ ಬರಹ ಭಾಷಣಗಳ ಮೂಲಕ ಜನರಲ್ಲಿ ಧರ್ಮ, ತತ್ವ ,ಸಾಹಿತ್ಯದ ಬಗೆಗೆ ಆದರ, ಅಭಿಮಾನ, ಆಸಕ್ತಿ ಮೂಡಿಸಿ ಜಾಗೃತಿ ಗೈದರು. “ಜೀವವಿರುವವರೆಗೆ ಬರೆಸು, ಬರೆಯುವವರೆಗೆ ಜೀವವಿರಿಸು” ಎಂದು ಪ್ರಾರ್ಥಿಸಿದ ಶ್ರೀಗಳವರು ತಮ್ಮ ಜೀವಮಾನದುದ್ದಕ್ಕೂ ಬಿಡುವಿಲ್ಲದೆ ಬರೆದರು. ಬರೆಯುವುದು ನಿಂತಾಗ 05 -11- 1996 ರಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.
“ಸೀಮಾತೀತ ಸಾಹಿತಿ ಸೀಮಾತೀತ ಸಾಹಿತ್ಯ” ಎಂಬ ಅವರ ವಚನವಾಣಿಗೆ ಅವರೇ ನಿದರ್ಶನರಾದರು.
ಶ್ರೀ ಗಳವರ ಸಾಹಿತ್ಯದ ಪರಿಚಯವನ್ನು ಈ ಪುಟ್ಟ ಲೇಖನದಲ್ಲಿ ಹಿಡಿದಿಡುವುದು ಅಸಾಧ್ಯ. ಅದನ್ನು ಪ್ರತ್ಯೇಕವಾಗಿ ತಿಳಿಯಬೇಕು ಎಂಬುದು ಓದುವಗರಲ್ಲಿ ವಿನಂತಿ. ಕನ್ನಡಕ್ಕಾಗಿ ಅವಿರತ ಶ್ರಮಿಸಿ ಕನ್ನಡ ಸಾಹಿತ್ಯದ ಲೋಕದಲ್ಲಿ ದ್ರುವ ತಾರೆಯಂದದಿ ಮಿನುಗುತ್ತಿರುವ ಜಚನಿ ಅವರು ಕಿತ್ತೂರು ನಾಡಿನವರು ಎಂಬುದು ನನಗೆ ಹೆಮ್ಮೆ. ಈ ನಾಲ್ಕು ನುಡಿಗಳನ್ನು ಅವರ ಪಾದಗಳಿಗೆ ಸಮರ್ಪಿಸುವೆನು.
( ಮೂಲ ಕೃತಿ:ಶ್ರೀಸಂಗಮೇಶ್ ಹಂಡಗಿ.)
ಶ್ರೀಮತಿ ಮೀನಾಕ್ಷಿ ಸುರೇಶ್ ಭಾಂಗಿ
ಕಿತ್ತೂರು