ಮಂಗಳೂರು ವಿವಿ ಪಠ್ಯಪುಸ್ತಕ ಸೇರಿದ ಅಶೋಕ ಚಿಕ್ಕಪರಪ್ಪಾ ಲೇಖನ..
ಬೆಳಗಾವಿ ಸಮೀಪದ ಹಲಗಾ ಗ್ರಾಮದ ಹಿರಿಯ ಪತ್ರಕರ್ತರಾದ ಅಶೋಕ ಜಿ. ಚಿಕ್ಕಪರಪ್ಪಾ ಅವರು ೨೦೨೦ರಲ್ಲಿ ‘ಗೃಹಶೋಭಾ’ ಮಾಸಪತ್ರಿಕೆಯಲ್ಲಿ ಬರೆದ ‘ಬರಡು ಭೂಮಿಯಲ್ಲಿ ಶ್ರೀಗಂಧ ಬೆಳೆದ ಸಾಧಕಿ – ಕವಿತಾ ಮಿಶ್ರಾ’ ಲೇಖನವನ್ನು ಮಂಗಳೂರು ವಿಶ್ವ ವಿದ್ಯಾಲಯದ ಬಿ.ಎಸ್.ಸಿ ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕ ‘ವಿಜ್ಞಾನ ಮಂಗಳ-೨’ ದಲ್ಲಿ ಒಂದು ಪಾಠವಾಗಿ ಅಳವಡಿಸಿಕೊಳ್ಳಲಾಗಿದೆ. ಕವಿತಾ ಮಿಶ್ರಾ ಅವರು ರಾಯಚೂರು ಜಿಲ್ಲೆಯ ಪ್ರಗತಿಪರ ರೈತರಾಗಿದ್ದು, ‘ಲೇಡಿ ಬಂಗಾರದ ಮನುಷ್ಯ’ ಎಂದೇ ಜನಜನಿತರಾಗಿದ್ದಾರೆ…
ಅಶೋಕ ಚಿಕ್ಕಪರಪ್ಪ ಅವರ ಕುರಿತು
೧೯೮೯ ರ ಸಮಯ ನನ್ನ ಮಕ್ಕಳ ಕತೆ ಮಾತೆಯ ಮೌಲ್ಯ ಕನ್ನಡಮ್ಮ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕತೆ ಪ್ರಕಟವಾದ ಒಂದು ತಿಂಗಳ ನಂತರ ನಮ್ಮ ಮನೆಗೆ ಅಂಚೆ ಪತ್ರವೊಂದು ಬಂದಿತ್ತು. ಅದರಲ್ಲಿ “ನೀವು ಬೆಳಗಾವಿಗೆ ಬಂದರೆ ಕನ್ನಡಮ್ಮ ದಿನಪತ್ರಿಕೆಗೆ ಬಂದು ನನ್ನನ್ನು ಭೇಟಿಯಾಗಿರಿ” ಅಶೋಕ ಚಿಕ್ಕಪರಪ್ಪ.ಸಾಪ್ತಾಹಿಕ ಪುರವಣಿ ಸಂಪಾದಕ.ಬೆಳಗಾವಿ.
ಇಷ್ಟು ಅದರಲ್ಲಿ ವಿಷಯ.ನಾನು ಬೆಳಗಾವಿಗೆ ರವಿವಾರ ಹೋಗಿಯೇ ಬಿಟ್ಟೆ. ಬರವಣಿಗೆಯ ತುಡಿತ ನನ್ನಲ್ಲಿದ್ದ ಕಾರಣ ನನಗೆ ಪತ್ರಿಕಾ ರಂಗದ ಒಟನಾಟ ಬೇಕಾಗಿತ್ತು. ಅಪರಿಚಿತನಾದ ನನಗೆ ಪತ್ರಿಕಾಲಯದಲ್ಲಿ ಒಬ್ಬರ ಪತ್ರ ಬಂದಿದೆ ಎಂದರೆ ನನಗಾದ ಸಂತೋಷಕ್ಕೆ ಸಾಟಿಯೇ ಇರಲಿಲ್ಲ. ಅದು ನನ್ನ ಪಿ.ಯು.ಸಿ ಓದಿನ ಸಂದರ್ಭ ಕೂಡ.
ಬೆಳಗಾವಿಯಲ್ಲಿ ಕನ್ನಡಮ್ಮ ದಿನಪತ್ರಿಕೆ ಗಣಪತಿ ಗಲ್ಲಿಯಲ್ಲಿ ಅಟ್ಟದ ಮೇಲಿತ್ತು. ಆಗ ದಿವಂಗತ ಮಹಾದೇವ ಟೋಪನ್ನವರ ಪತ್ರಿಕಾ ಸಂಪಾದಕರಾಗಿದ್ದರು. ನಾನು ಕನ್ನಡಮ್ಮ ದಿನಪತ್ರಿಕೆಯ ಆಫೀಸಿಗೆ ಹೋಗಿ ಅಶೋಕ ಚಿಕ್ಕಪರಪ್ಪ ಅವರನ್ನು ಭೇಟಿಯಾಗಲು ಬಂದಿರುವುದಾಗಿ ತಿಳಿಸಿದೆ.ಅವರು ಅಶೋಕ ಅವರು ಕುಳಿತಿರುವ ಟೇಬಲ್ ಗೆ ನನ್ನನ್ನು ಕಳಿಸಿದರು.ಅದು ನನ್ನ ಮತ್ತು ಅಶೋಕ ಚಿಕ್ಕಪರಪ್ಪ ಅವರ ಮೊದಲ ಭೇಟಿ.
ಅವರು ನನ್ನನ್ನು ಕರೆದುಕೊಂಡು ಸಂತೋಷ ನಿರ್ಮಲ ಚಲನಚಿತ್ರ ಮಂದಿರವಿರುವ ಸ್ಥಳದಲ್ಲಿ ಹೊಟೇಲಿಗೆ ಬಂದರು.ಅಲ್ಲಿ ಪರಸ್ಪರ ಪರಿಚಯ ಮಾಡಿಕೊಳ್ಳುತ್ತ ಚಹಾ ಸೇವಿಸಿದೆವು. ಅದು ನಡೆದದ್ದು ೧೯೮೯ ಡಿಸೆಂಬರ್ ದಲ್ಲಿ. ಕನ್ನಡಮ್ಮದಲ್ಲಿ ಚಿತ್ರಕಲಾವಿದ ಕಾಡಪ್ಪನವರ(ಅವರೀಗ ನಿಧನರಾಗಿರುವರು) ಗೋವಿಂದ ಮಡಿವಾಳರ. ಬಟಕುರ್ಕಿ ಅಜ್ಜ. ಶಿವರಾಂ ಕಾರಂತರ ಮೊಮ್ಮಗಳು ಸುಧಾ.ಚಿಕ್ಕಮಠ.ಹೀಗೆ ಒಂದು ಟೀಂ ಇತ್ತು. ಅವರೆಲ್ಲರನ್ನು ಪರಿಚಯಿಸಿದರು. ೧೯೯೦ ಜನೇವರಿ ಮಕರ ಸಂಕ್ರಾಂತಿಗೆ ಅವರೆಲ್ಲ ನವಿಲುತೀರ್ಥ ನೋಡಲು ಬಂದಿದ್ದರು.ಅದಕ್ಕಿಂತ ಮೊದಲು ನನಗೆ ಪತ್ರ ಬರೆದಿದ್ದರು. ಈಗಿನಂತೆ ಆಗ ಮೋಬೈಲ್ ವ್ಯವಸ್ಥೆ ಇರಲಿಲ್ಲ. ಪೋನ್ ಸೌಲಭ್ಯ ಕೂಡ ಅಪರೂಪವಾಗಿತ್ತು. ಆ ಪತ್ರಕ್ಕೆ ನಾನು ಕೂಡ ನವಿಲುತೀರ್ಥಕ್ಕೆ ಬಂದರೆ ನಮ್ಮ ಮುನವಳ್ಳಿಗೂ ಬನ್ನಿ ಇಲ್ಲಿ ತೆಪ್ಪೋತ್ಸವ ನೋಡಿಕೊಂಡು ನಮ್ಮ ಮನೆಯ ಆತಿಥ್ಯ ಸ್ವೀಕರಿಸಿ ಹೋಗಬೇಕು ಎಂದು ಬರೆದಿದ್ದೆ. ಅವರೆಲ್ಲ ಸಂಜೆಯ ಹೊತ್ತಿಗೆ ನಮ್ಮ ಮನಗೆ ಬಂದರು.ಎಲ್ಲರೂ ಸೇರಿ ತೆಪ್ಪೋತ್ಸವ ನೋಡಿಕೊಂಡು ಅದರ ವಿಶೇಷ ವರದಿ ಕೂಡ ಸಿದ್ದಪಡಿಸಿಕೊಂಡು ಬೆಳಗಾವಿಗೆ ತೆರಳಿದರು.
ನಂತರದ ದಿನಗಳಲ್ಲಿ ಅಶೋಕ ಮತ್ತು ನನ್ನ ನಡುವೆ ಸ್ನೇಹ ಗಾಢವಾಗುತ್ತ ಸಾಗಿತು.ನನಗೆ ಅವರು ಸಿನಿಮಾ ಪುರವಣಿಗೆ ಬರಹಗಳನ್ನು ರೂಪಿಸಲು ಸಲಹೆ ನೀಡತೊಡಗಿದರು.ಅದರಂತೆ ನಾನು ಪ್ರತಿ ಶುಕ್ರವಾರ ಕನ್ನಡ ಚಲನಚಿತ್ರರಂಗ ಮತ್ತು ಸಿನಿಮಾ ಸಾಹಿತ್ಯ ಕುರಿತು ಅಂಕಣ ನಿರ್ವಹಿಸತೊಡಗಿದೆ.ಆ ಅಂಕಣ ೬೦ ಶುಕ್ರವಾರಗಳು ಪ್ರಕಟವಾಯಿತು.ಇದರಿಂದ ಸಿನಿಮಾ ಸಾಹಿತ್ಯದಲ್ಲಿ ನನ್ನ ಬರವಣಿಗೆಯ ಮೊದಲ ಘಟ್ಟ ಆರಂಭಗೊಂಡಿತು. ಈ ನಡುವೆ ಅಶೋಕ ಅವರ ಕೃಪೆಯಿಂದ ಸೊಗಲದಲ್ಲಿ ಆಗ ಚಿತ್ರೀಕರಣವಾಗುತ್ತಿದ್ದ ಅಮೃತ ಸಿಂಧು ಚಲನಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಿತು.ನಟಿ ಶ್ರುತಿ ಅವರ ಸಂದರ್ಶನ ಅಶೋಕ ಮಾಡಿದರೆ ನಾನು ನಟ ಅರವಿಂದ್ ಅವರ ಸಂದರ್ಶನ ಮಾಡಿದೆ.ಬೈಲಹೊಂಗಲದಲ್ಲಿ ಮಹಾಂತೇಶ ತುರುಮರಿಯವರು ಆಗ ನಮಗೆ ಪೋಟೋಗಳನ್ನು ತಗೆದುಕೊಡುತ್ತಿದ್ದರು.
ಹೀಗೆ ನನ್ನ ಮತ್ತು ಅಶೋಕ ಅವರ ಸ್ನೇಹ ಬರವಣಿಗೆಯ ಮಜಲುಗಳನ್ನು ಹೊರಳಿಸುತ್ತ ಸಾಗಿತು.ನನಗೆ ಸಾಹಿತ್ಯದಲ್ಲಿ ಒಲವು ಮೂಡಲು ಕಾರಣವಾಗತೊಡಗಿತು. ಅವರು ದಿನನಿತ್ಯವೂ ಹಲಗಾ ಗ್ರಾಮದಿಂದ ಬೆಳಗಾವಿಗೆ ಸೈಕಲ್ ಮೂಲಕ ಬರುತ್ತಿದ್ದರು.ನನಗೆ ಅವರ ಮನೆಗೆ ಕರೆದುಕೊಂಡು ಹೋದರು.ನಾನಾಗ ಎರಡು ಮೂರು ದಿನಗಳ ಕಾಲ ಅವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದೆ.ನಾವಿಬ್ಬರೂ ಒಂದೊಂದು ಸೈಕಲ್ ತಗೆದುಕೊಂಡು ಹಲಗಾದಿಂದ ಬೆಳಗಾವಿಗೆ ಬಂದು ಬೆಳಗಾವಿಯ ವಿವಿಧ ಸ್ಥಳಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದೆವು.
ಬಡತನದಲ್ಲಿ ಅರಳಿದ ಪ್ರತಿಭೆ ಅಶೋಕ
ಅಶೋಕ ಅವರ ಮನೆ ಇರುವುದು ಹಲಗಾದ ಊರ ಹೊರಗಿನ ಬಡಾವಣೆಯಲ್ಲಿ.ಅವರದ್ದು ಒಂದು ಅಟ್ಟವಿತ್ತು. ಜೊತೆಗೆ ಪಿಲಿಪ್ಸ ರೇಡಿಯೋ ಅದರಲ್ಲಿ ರಾತ್ರಿ ಪ್ರಸಾರವಾಗುತ್ತಿದ್ದ ಅಮೀನ್ ಸಯಾನಿಯವರ ನಿರೂಪಣೆಯ ಹಳೆಯ ಹಿಂದಿ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಕೇಳುತ್ತ ನಮ್ಮ ಬರವಣಿಗೆಯ ಗತಿಯನ್ನು ಚರ್ಚಿಸುತ್ತಿದ್ದೆವು.ರಾತ್ರಿ ೧೨ ರ ವರೆಗೂ ಬರವಣಿಗೆ ಮಜಲುಗಳೇ ನಮ್ಮ ವಿಷಯ.ಅವರ ಮನೆಯವರೆಲ್ಲ ಕೆಳಗಿನ ಮನೆಯಲ್ಲಿ ಮಲಗಿದರೆ ನಾವಿಬ್ಬರೂ ಮಹಡಿಯ ಮೇಲೆ ಅನೇಕ ಸಂಗತಿಗಳನ್ನು ಚರ್ಚಿಸುತ್ತ ಮಲಗುವುದು ರೂಢಿಸಿಕೊಂಡಿದ್ದೆವು.ಅಶೋಕ ಅವರ ತಂದೆ ಬಾಲ್ಯದಲ್ಲಿಯೇ ನಿಧನರಾಗಿದ್ದರು.ಸಹೋದರ ತನ್ನ ಪತ್ನಿಯೊಂದಿಗೆ ಅದೇ ಮನೆಯಲ್ಲಿ ಬೇರೆ ಇದ್ದರು.ಅಶೋಕ ತನ್ನ ತಾಯಿಯ ಜೊತೆಗೆ ಅವರ ನೋಡಿಕೊಳ್ಳುವ ಮೂಲಕ ಹಲಗಾದಲ್ಲಿ ಪತ್ರಿಕಾ ವಿತರಕರಾಗಿ ಸೇವೆ ಮಾಡುತ್ತ. ಸಹರಾ ಇಂಡಿಯ ಏಜೆನ್ಸಿ ಮಾಡುತ್ತ ಕನ್ನಡಮ್ಮದಲ್ಲಿ ಸಹ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರ ತಾಯಿ ಕೂಡ ನನ್ನನ್ನು ತಮ್ಮ ಮನೆಯ ಮಗನಂತೆ ನೋಡಿಕೊಳ್ಳುತ್ತಿದ್ದರು. ನಾನು ನನ್ನ ಪದವಿ ಶಿಕ್ಷಣಕ್ಕೆ ಧಾರವಾಡಕ್ಕೆ ಹೋದೆ.ಧಾರವಾಡದ ನನ್ನ ಕಾಲೇಜಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಅಶೋಕ ಕನ್ನಡಮ್ಮದಲ್ಲಿ ಪ್ರಕಟಿಸುತ್ತಿದ್ದರು. ನಾನು ಆಗ ಬಸ್ ಡ್ರೈವ್ ರ್ ರ ಹತ್ತಿರ ವರದಿಗಳನ್ನು ಪೋಟೋ ಸಹಿತ ಕವರ್ ನಲ್ಲಿ ಕಳಿಸುತ್ತಿದ್ದೆ. ಬಸ್ ನಿಲ್ದಾಣದಲ್ಲಿ ಕನ್ನಡಮ್ಮ ಪತ್ರಿಕೆಯ ಡಬ್ಬಿಯೊಂದಿತ್ತು. ಅದರಲ್ಲ ಬಸ್ ಚಾಲಕರು ಅದನ್ನು ಹಾಕುತ್ತಿದ್ದರು. ಮರುದಿನದ ದಿನಪತ್ರಿಕೆಯಲ್ಲಿ ಪೋಟೋ ಸಹಿತ ನನ್ನ ವರದಿಗಳನ್ನು ಬಹಳ ಮುತುವರ್ಜಿಯಿಂದ ಅಶೋಕ ಪ್ರಕಟಿಸಿರುತ್ತಿದ್ದರು.ಆ ದಿನಗಳನ್ನು ನೆನಪು ಮಾಡಿಕೊಂಡರೆ ಪತ್ರಿಕೋದ್ಯಮದ ವಾತಾವರಣ ಅಂದು ಹೇಗಿತ್ತು ಎಂಬುದು ಕಂಡು ಬರುತ್ತದೆ.
ಅಶೋಕ ಚಿಕ್ಕಪರಪ್ಪಾ ಅವರು ಆರಂಭದಲ್ಲಿ ಬೆಳಗಾವಿಯ ‘ನಾಡೋಜ’ದಿಂದ ತಮ್ಮ ಪತ್ರಿಕಾ ಜೀವನ ಆರಂಭಿಸಿ ನಂತರ ಕನ್ನಡಮ್ಮ, ಸಂಯುಕ್ತ ಕರ್ನಾಟಕ, ಕರ್ಮವೀರ, ನೂತನ, ದಿಕ್ಸೂಚಿ- ಜೀವನಾಡಿ, ಗೃಹಶೋಭಾ ಹೀಗೆ ವಿವಿಧ ಪತ್ರಿಕೆಗಳಲ್ಲಿ ಪತ್ರಿಕೋದ್ಯಮದ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನಾಡಿನ ಪ್ರಖ್ಯಾತ ವ್ಯಕ್ತಿಗಳನ್ನು ಸಂದರ್ಶಿಸಿ ಲೇಖನ ಗಳನ್ನು ಬರೆದಿದ್ದಾರೆ. ಕನ್ನಡದ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ, ಶತಾಯುಷಿ ಎ.ಎನ್. ಮೂರ್ತಿರಾವ್, ಚೆನ್ನವೀರ ಕಣವಿ, ಎಚ್. ನರಸಿಂಹಯ್ಯ, ಎಚ್. ಎಸ್. ದೊರೆಸ್ವಾಮಿ, ಹೆಸರಾಂತ್ ನಿರೂಪಕಿ ಅಪರ್ಣಾ, ಲಕ್ಷ್ಮೀ ಚಂದ್ರಶೇಖರ್, ವೈಜಯಂತಿ. ಮಾಲತಿ ಸುಧೀರ್.ಕಾಶಿ ಹೀಗೆ ಸಂದರ್ಶನ ಮಾಡಿದವರ ಪಟ್ಟಿ ಬಹಳ ಉದ್ದವಾಗಿದೆ.
ಅವರು ಯಾವ ಯಾವ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೋ ಆ ಎಲ್ಲ ಪತ್ರಿಕೆಗಳಲ್ಲಿ ನನ್ನ ಬರಹಗಳಿಗೆ ಆಧ್ಯತೆ ನೀಡಿ ನನ್ನನ್ನು ಕೂಡ ತಮ್ಮೊಂದಿಗೆ ಬರವಣಿಗೆ ಕ್ಷೇತ್ರದಲ್ಲಿ ಕರೆದುಕೊಂಡು ಹೋಗಿರುವರು.ಅವರು ಕರ್ಮವೀರ ಪತ್ರಿಕೆಯಲ್ಲಿ ಸೇರಿದ ನಂತರ ವೈವಾಹಿಕ ಜೀವನದೊಂದಿಗೆ ಬೆಂಗಳೂರಿಗೆ ತೆರಳಿ ಕೋಣನಕುಂಟೆ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡತೊಡಗಿದರು. ಪ್ರತಿ ವರ್ಷ ರಜೆ ಬಂದರೆ ನಾನು ಬೆಂಗಳೂರಿಗೆ ಹೋಗಿ ಅವರ ಮನೆಯಲ್ಲಿ ಇದ್ದು ಬೆಂಗಳೂರಿನ ಪರಿಸರವನ್ನು ಅವರೊಂದಿಗೆ ಪ್ರವಾಸ ಮಾಡುವ ಮೂಲಕ ಕಳೆಯುತ್ತಿದ್ದೆ. ಹೀಗೆ ನನ್ನ ಮತ್ತು ಭಾವಲೋಕ ಪ್ರಪಂಚದ ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಪರಿಚಯವನ್ನು ಅಶೋಕ ಮೂಲಕ ಮಾಡಿಕೊಂಡೆನು.ಏಣಗಿ ಬಾಳಪ್ಪನವರ ಸಂದರ್ಶನದ ಅವಕಾಶವನ್ನು ಅಶೋಕ ನನಗೆ ಜೀವನಾಡಿ ಪತ್ರಿಕೆಯಲ್ಲಿ ಇದ್ದಾಗ ಒದಗಿಸಿಕೊಟ್ಟರು. ಈಗ ಅವರ ಗೃಹಶೋಭಾದಿಂದ ನಿವೃತ್ತರಾಗಿದ್ದರೂ ಕೂಡ ಬರವಣಿಗೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವರು.ಅವರಿಗೆ ಮೂರು ಜನ ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ. ಹಿರಿಯ ಮಗಳು ಕಾವೇರಿಯ ವಿವಾಹ ಕೂಡ ಬೆಳಗಾವಿರ ವರನೊಂದಿಗೆ ಮಾಡಿದ್ದು ಬೆಳಗಾವಿಯ ನಂಟನ್ನು ಉಳಿಸಿಕೊಂಡಿರುವರು. ರಜೆಗೆ ಹಲಗಾಕ್ಕೆ ಬಂದು ನಮ್ಮ ಊರಿಗೂ ಅನುಕೂಲ ಇದ್ದಲ್ಲಿ ಬಂದು ಹೋಗುವರು.
ಸ್ನೇಹ ಅಮರ ಸ್ನೇಹ ಅದು ಮಧುರ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಎಂಬ ಗೀತೆ ನಿಜಕ್ಕೂ ನಮ್ಮ ಸ್ನೇಹವನ್ನು ಸದಾ ಅಮರವಾಗಿಟ್ಟಿದೆ.ನನ್ನೊಳಗಿನ ಓರ್ವ ಬರಹಗಾರ ಇಂದು ಅಶೋಕ ಎಂಬ ಮಾರ್ಗದರ್ಶಕನ ಸ್ನೇಹದ ಮೂಲಕ ಹಚ್ಚ ಹಸಿರಾಗಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ನನ್ನ ಮೊಟ್ಟ ಮೊದಲ ಕಥಾ ಸಂಕಲನ ಸಾವು ಬದುಕಿನ ನಡುವೆ ನಾನು ಅರ್ಪಿಸಿದ್ದು ಅಶೋಕ ಚಿಕ್ಕಪರಪ್ಪ ಅವರಿಗೆ ಅಂತಹ ಓರ್ವ ಹಿರಿಯ ಸಾಹಿತಿಗೆ ಇಂದು ಮಂಗಳೂರು ವಿಶ್ವವಿದ್ಯಾಲಯ ತನ್ನ ಪಠ್ಯದಲ್ಲಿ ಅವರ ಲೇಖನ ಪ್ರಕಟಿಸುವ ಮೂಲಕ ಅವರನ್ನು ಗುರುತಿಸಿದೆ ಎಂದರೆ ಅದು ನನ್ನ ಬೆಳವಣಿಗೆಗೆ ಕಾರಣರಾದ ವ್ಯಕ್ತಿಯನ್ನು ಅಭಿನಂದಿಸುವ ಮೂಲಕ ಅವರ ಜೊತೆಗೆ ಆ ಸಂತೋಷವನ್ನು ನಾನು ಕೂಡ ಹಂಚಿಕೊಂಡು ಹೆಮ್ಮೆ ಪಡುತ್ತಿರುವೆ. ಯಾವುದೇ ಪ್ರಚಾರ ಬೆಳೆಸದ ಒಬ್ಬ ಸೃಜನಶೀಲ ಬರಹಗಾರನಿಗೆ ಸಿಗಬಹುದಾದ ಗೌರವವನ್ನು ಮಂಗಳೂರು ವಿಶ್ವವಿದ್ಯಾಲಯ ನೀಡಿರುವುದು ಹೆಮ್ಮೆಯ ಸಂಗತಿ.
೧೯೯೬ರಲ್ಲಿ ‘ಕನ್ನಡಪ್ರಭ’ದಲ್ಲಿ ಬರೆದ ಪರಿಸರ ಕಾಳಜಿ ಕುರಿತಾದ ಒಂದು ಬರಹಕ್ಕೆ ಅವರಿಗೆ ‘ಶ್ರೀ ರಮೇಶ್ ಶಿಪ್ಪೂರಕರ್ ಬೆಳಗಾವಿ ಜಿಲ್ಲಾ ಮಟ್ಟದ ಅತ್ಯುತ್ತಮ ಪತ್ರಕರ್ತ’ ಪ್ರಶಸ್ತಿ ಬಂದಿತ್ತು.
2021ರಲ್ಲಿ ಸುವರ್ಣಾ ಟಿ.ವಿ.ಗಾಗಿ 5 ಕಂತುಗಳ ಮಹಾಗಣಪತಿ ಚರಿತೆ’ಯನ್ನು ಮರಾಠಿಯಿಂದ ಕನ್ನಡಕ್ಕೆ ಡಬ್ ಮಾಡಿಕೊಟ್ಟಿದ್ದರು. ಇದು ಅವರ ವೈವಿಧ್ಯಮಯ ಚಟುವಟಿಕೆಗೆ ಸಾಕ್ಷಿ.
ಪ್ರಸ್ತುತ ಅಶೋಕ ಅವರು ದೃಷ್ಟಿ ವಿಕಲಚೇತನ ಸಾಧಕರ ಬಗೆಗೆ ಒಂದು ಪುಸ್ತಕ ರೂಪಿಸುವ ಕೆಲಸದಲ್ಲಿ ಮಗ್ನರಾಗಿದ್ದು, ಅದರ ಜತೆಗೆ ಪಿ.ಸಿ., ಪಿಎಸ್ ಐ ಗ್ರೂಪ್ ‘ಸಿ’, ಪಿಡಿಒ, ಬಿಎಂಆರ್’ಸಿಎಲ್ ಕೆಎಎಸ್ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆ ಪುಸ್ತಕಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸ್ಪರ್ಧಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಅವರಿಗೆ ರವಾನಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦..