ಮೋಡಗಳ ಸರಸ
ಮೋಡಗಳ ಸರಸಕ್ಕೆ
ಮಳೆ ಹನಿ ತಾನು ನಾಚಿ
ತುಂತುರು ಹನಿಯಾಗಿ
ಕಪ್ಪೆಚಿಪ್ಪಿನೊಳಗಡಗಿತು
ಅಡಗಿ ತಾನು ಮುತ್ತಾಗಿ
ನಾರಿಯ ಕೊರಳ ಸೇರಿತು ||೧||
ಮೋಡಗಳ ಸರಸಕ್ಕೆ
ಮಳೆಹನಿ ತಾನು ನಾಚಿ
ಭೂತಾಯಿಯ ಸೆರೆಗಲಡಗಿ
ಬೀಜಗಳ ಮೊಳೆವಂತೆ ಮಾಡಿ
ತಾನು ಮುದದಿ ನಲಿದು
ಎಲ್ಲೆಡೆ ಹಸಿರ ಪಸರಿಸಿತು ||೨||
ಮೋಡಗಳ ಸರಸಕ್ಕೆ
ಮಳೆಹನಿ ತಾನು ನಾಚಿ
ಸರೋವರದಲಿ ಒಂದಾಯಿತು
ಹಳ್ಳಕೊಳ್ಳಗಳ ಜೊತೆ ಸೇರಿ
ಜಲಪಾತವಾಗಿ ನರ್ತಿಸಿ
ಕಾಡು ಮೇಡುಗಳಲ್ಲಿ ಕಳೆದೋಯಿತು ||೩||
ಮೋಡಗಳ ಸರಸಕ್ಕೆ
ಮಳೆಹನಿ ತಾನು ನಾಚಿ
ಪಕ್ಷಿಗಳ ರೆಕ್ಕೆ ಪುಕ್ಕಗಳಲ್ಲಿ
ಅಡಗಿ ತಾ ಮೈ ಮರೆಯಿತು
ಮೃಗಗಳಿಗೆ ಮೈ ತಾಕಿಸಿ
ಮನ ಸೂರೆಗೊಂಡಿತು ||೪||
ಮೋಡಗಳ ಸರಸಕ್ಕೆ
ಮಳೆಹನಿ ತಾನು ನಾಚಿ
ಆಕಾಶದಿಂದ ನೆಗೆದು
ಫಲಫುಷ್ಪಗಳಲ್ಲೊಂದಾಯಿತು
ದಾಹದಿಂದ ಬಳಲುತ್ತಿರುವವರ
ದಾಹ ತೀರಿಸಿ ಸಂತೃಪ್ತಪಡಿಸಿತು ||೫||
ಮೋಡಗಳ ಸರಸಕ್ಕೆ
ಮಳೆಹನಿ ತಾನು ನಾಚಿ
ಪ್ರೇಮಿಗಳ ಮನ ಸೇರಿತು
ಉದ್ಯಾನ ವನದಲಿ ಸುತ್ತಾಡಿ
ಪ್ರೇಮದೊಲವಿನಲಿ ಬೆರೆತು
ತಂಗಾಳಿಯಲಿ ತೇಲಿಹೋಯಿತು ||೬||
ರಚನೆ ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ. ಆರ್. ಪಿ .ಚ .ಕಿತ್ತೂರು