ಮುರ್ಡೇಶ್ವರ ಸಂಜೆಯ ಸೊಬಗು
5 ವರ್ಷದ ಹಿಂದಿನ ಪ್ರವಾಸದ ಪುಟಗಳ ಎರಡನೇ ಕಂತಿನ ಲೇಖನ ಸೋಮವಾರ ಸಂಜೆ ಸಿದ್ಧಪಡಿಸಿದೆ.ನನ್ನ ಪ್ರವಾಸ ಕಥನದ ನನ್ನ ಜೊತೆ ಸವದತ್ತಿ ಬಿ. ಆರ್. ಸಿ ಯ ಎಲ್ಲಾ ಸ್ನೇಹಿತರು ಮಂಜುನಾಥ ಕಮ್ಮಾರ .ಮಲ್ಲಿಕಾರ್ಜುನ ಹೂಲಿ ಮನೋಹರ ಚೀಲದ. ನಿರಂಜನ್ ಮೆಳವಂಕಿ
ಚಿದಾನಂದ ಬಾರ್ಕಿ.ಜಗದೀಶ ಗೋರೋಬಾಳ. ಜೆ. ಎಸ್. ಸಿದ್ಲಿಂಗನವರ.ಮಹಾಂತೇಶ ಬೋಳೇತ್ತಿನ. ವಿನೋದ ಹೊಂಗಲ್ .ಮುನವಳ್ಳಿಯ ನನ್ನ ಸಂಬಂಧಿಕ ಟ್ರ್ಯಾಕ್ಸ ಮಾಲೀಕ ಹಾಗೂ ಚಾಲಕ ಜಿಡ್ಡೀಮನಿ ನಾಗರಾಜ್. ಇವರೆಲ್ಲರೂ ಒಂದು ಟೀಂ ರೂಪದಲ್ಲಿ ಇರುತ್ತಿದ್ದ ಕಾರಣ ಆ ಪ್ರವಾಸದ ಮಜವೇ ಮಜ.
ಯುವ ತರುಣರಾದ ವಿನೋದ ಮತ್ತು ಮಲ್ಲಿಕಾರ್ಜುನ ಹೂಲಿ. ನಿರಂಜನ ಮೆಳವಂಕಿ. ದಾರಿಯುದ್ದಕ್ಕೂ ಚೇಷ್ಟೆ ಹರಟೆಯಲ್ಲಿ ತೊಡಗಿದ್ದರೆ ಮುಗೀತು. ಸಮಯದ ಪರಿವೆಯೇ ಇರ್ತಿರಲಿಲ್ಲ. ಜೊತೆಗೆ ನಾಗರಾಜ್ ಜಿಡ್ಡೀಮನಿ ಅಲ್ಲಲ್ಲಿ ಚಹಾ ಸೇವನೆ ಹಾಗೂ ಒಳ್ಳೆಯ ಪರಿಸರ ಪೋಟೋ ಸಲುವಾಗಿ ವಾಹನ ನಿಲ್ಲಿಸಿ ನಮಗೆ ಪ್ರವಾಸದ ಸವಿಯನ್ನು ಸವಿಯಲು ಅನುವು ಮಾಡಿ ಕೊಡುತ್ತಿದ್ದನು. ಹೀಗಾಗಿ ಪ್ರವಾಸದ ಸವಿ ನಮಗೆ ನಿರಂತರವಾಗಿ ನೆನಪಿನ ಕ್ಷಣಗಳನ್ನು ಈಗಲೂ ಮರೆಯದಂತೆ ಮಾಡಿ ಈ ಬರಹ ಹಳೆಯ ಅಲ್ಬಂ ತೆಗೆದಾಗ ಲೇಖನ ಆಗಲು ಸಹಾಯಕ.
ನಾವೆಲ್ಲರೂ ಗೋಕರ್ಣ ನೋಡಿ ನಂತರ ಮಿರ್ಜಾನ್ ಕೋಟೆ ನೋಡಿದಾಗ ಮದ್ಯಾಹ್ನ ಸಮಯ ದಾರಿಯಲ್ಲಿ ಚಿದಾನಂದ ಬಾರ್ಕಿಯವರು ತಂದಿದ್ದ ರವೆ ಉಂಡಿ. ಚಕ್ಕುಲಿ. ಚುರುಮುರಿ. ಪೇಪರ್ ಅವಲಕ್ಕಿ ಸವಿದೆವು.ಮುಂದಿನ ಪ್ರಯಾಣ ಇಡಗುಂಜಿ. ಅಲ್ಲಿ ಪ್ರಸಾದ ವ್ಯವಸ್ಥೆ ಇರುವುದು ಮೊದಲೇ ಗೊತ್ತಿದ್ದ ಕಾರಣ ಇಡಗುಂಜಿ ಯತ್ತ ಪ್ರಯಾಣ ಬೆಳೆಸಿದೆವು.
ಸುಂದರ ಪ್ರಕೃತಿಯ ನಡುವೆ ಇಡಗುಂಜಿ ಗಣೇಶನ ದರ್ಶನದಿಂದ ಪುನೀತರಾದೆವು. ಅಲ್ಲಿ ಪ್ರಸಾದ ಸೇವಿಸಿ ಇಡಗುಂಜಿ ಪ್ರಕೃತಿ ರಮಣೀಯ ತಾಣದಲ್ಲಿ ಪೋಟೋ ಗಳನ್ನು ತಗೆದದ್ದೇ ತೆಗೆದದ್ದು. ಅದರಲ್ಲೂ ಜಗದೀಶ್ ಗೋರಾಬಾಳ ಅವರ ಜೊತೆ ಮಲ್ಲಿಕಾರ್ಜುನ ಹೂಲಿ ಹಾಗೂ ವಿನೋದ ಹೊಂಗಲ ಅವರ ಹರಟೆಯ ಮಾತುಗಳು ನಮಗೆ ಹಾಸ್ಯ ವನ್ನುಂಟು ಮಾಡುತ್ತಿದ್ದವು.
ಹೀಗೆ ಮಾತು ಪೋಟೋ ಮನರಂಜನೆ ಮುರ್ಡೇಶ್ವರ ಸಮುದ್ರ ಕಿನಾರೆ ಯತ್ತ ಸಾಗಿತು.
ಮುರ್ಡೇಶ್ವರ..
ಮುರುಡೇಶ್ವರ ಶಿವನ ಬೃಹತ್ ಮೂರ್ತಿ ಹಾಗೂ ಬೀಚ್ ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಸೌಮ್ಯವಾದ ಬೆಟ್ಟಗಳು ಮತ್ತು ಹಚ್ಚ ಹಸಿರಿನ ಎಲೆಗೊಂಚಲುಗಳಿಂದ ಆವೃತವಾಗಿರುವ ಈ ಸ್ಥಳ ಯಾವಾಗಲೂ ಚಟುವಟಿಕೆಯಿಂದ ಕೂಡಿರುತ್ತದೆ.
ಈ ಸ್ಥಳದ ಸ್ಥಳೀಯ ತೆಂಗಿನ ಮರಗಳು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿವೆ.
ಮುಂಜಾನೆ ಹಾಗೂ ಸಾಯಂಕಾಲದ ಸಮಯ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯ,
ಸಮುದ್ರದ ಕಿನಾರೆಯಲ್ಲಿ ನೀವು ಹಾರುವ ಸೀಗಲ್ಗಳು ಮತ್ತು ಮಿಂಚುಳ್ಳಿ ಪಕ್ಷಿಗಳ ಸಹವಾಸವನ್ನು ಸಹ ಕಾಣಬಹುದು. ಕಡಲತೀರದ ಮೇಲ್ಮೈಗೆ ಅದರ ಪ್ರಬಲವಾದ ಸಮುದ್ರದ ನೀರು ಸ್ಪ್ಲಾಶ್ ಮಾಡುವುದರಿಂದ, ಈ ತಾಣದ ಒಟ್ಟಾರೆ ದೃಶ್ಯಾವಳಿಗಳು ಭೇಟಿಗೆ ಯೋಗ್ಯವಾಗಿದೆ.
ಮುರುಡೇಶ್ವರ’ ಹಿಂದೂಗಳ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಕಂಡುಕಾಗಿರಿ ಶಿಖರದಲ್ಲಿ ನೆಲೆಸಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯವು ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಇಲ್ಲಿ ಗಣೇಶನು ಬ್ರಾಹ್ಮಣ ಹುಡುಗನ ಅವತಾರದಲ್ಲಿದ್ದಾಗ ರಾವಣನ ಬೇಡಿಕೆಯಂತೆ ಹಿಡಿದುಕೊಂಡಿದ್ದ ಆತ್ಮಲಿಂಗವನ್ನು ಕೆಳಗಿಟ್ಟ ಸ್ಥಳವಿದು ಎಂದು ಹೇಳಲಾಗಿದೆ. ಭಗವಾನ್ ಶಿವನಿಗೆ ಅರ್ಪಿತವಾದ 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ನಾವು ಕಾಣಬಹುದು.
ಶಿವನ ವಿಗ್ರಹ..
ನಮ್ಮ ಪ್ರಯಾಣ ಸಮುದ್ರದ ಕಿನಾರೆಯತ್ತ ಸಾಗತೊಡಗಿದಾಗ ದೂರದಲ್ಲಿ ಮುರುಡೇಶ್ವರದಲ್ಲಿ ಶಿವನ ದೈತ್ಯ ವಿಗ್ರಹವು ಕಾಣತೊಡಗಿತು. ಅಂಕಿ ಅಂಶಗಳ ಪ್ರಕಾರ, ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಇದು. ಈ ಶಿವ ಪ್ರತಿಮೆಯು ಸರಿಸುಮಾರು 123 ಅಡಿ ಎತ್ತರವನ್ನು ಹೊಂದಿದೆ.
ರಾಜಗೋಪುರ.
ರಾಜ ಗೋಪುರ ಎಂದರೆ ‘ಕಿಂಗ್ ಆಫ್ ಟವರ್ಸ್’, ಮುರುಡೇಶ್ವರದಲ್ಲಿರುವ ಈ ದೇವಾಲಯದ ಗೋಪುರವು ಅದರ ಹೆಸರೇ ಸೂಚಿಸುವಂತೆ ಮುರುಡೇಶ್ವರದ ರಾಜನಿದ್ದಂತಿದೆ. ರಾಜ ಗೋಪುರದಲ್ಲಿ 20 ಮಹಡಿಗಳಿದ್ದು, ಜನರು ಲಿಫ್ಟ್ಗಳನ್ನು ಬಳಸುವ ಮೂಲಕ ಗೋಪುರದ ಮೇಲ್ಭಾಗವನ್ನೂ ತಲುಪಬಹುದು. ಗೋಪುರದ ಕೊನೆಯ ಮಹಡಿಯಲ್ಲಿ ನಿಂತು ನೋಡಿದರೆ ನಾವು ಮುರುಡೇಶ್ವರದ ಸಂಪೂರ್ಣ ಸೌಂದರ್ಯವನ್ನು ಸವಿಯಬಹುದು. ಗೋಪುರದ ತುದಿಗೆ ಹೋಗುತ್ತಿದ್ದಂತೆ ಆಕಾಶದಲ್ಲಿ ಹಾರಾಡುತ್ತಿರುವ ಅನುಭವ ಸಿಗುವುದು.
ಕಂಡುಕಾ ಬೆಟ್ಟ
ಮುರುಡೇಶ್ವರದಲ್ಲಿನ ಕಂಡುಕಾ ಬೆಟ್ಟವು ಒಂದು ಪರ್ಯಾಯ ದ್ವೀಪವಾಗಿದೆ. ಮುರುಡೇಶ್ವರ ದೇವಾಲಯ ಮುರುಡೇಶ್ವರನ್ನು ಹೊತ್ತಿರುವ ಈ ಕಂಡುಕಾ ಬೆಟ್ಟವು 3 ದಿಕ್ಕಿನಿಂದಲೂ ಅರೇಬಿಯನ್ ಸಮುದ್ರದಿಂದ ಆವೃತವಾಗಿದೆ.
.ಮುರುಡೇಶ್ವರ ದೇವಸ್ಥಾನವು ಕರ್ನಾಟಕದ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಆಧುನಿಕ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿದೆ. ಈ ಪ್ರತಿಮೆಯನ್ನು ಕಾಶಿನಾಥ ಎಂಬಾತ ನಿರ್ಮಿಸಿದ್ದು, ಆರ್.ಎನ್.ಶೆಟ್ಟಿ ಉದ್ಯಮಿಯವರು ಈ ದೇವಾಲಯದ ನಿರ್ಮಾಣಕ್ಕೆ ಆರ್ಥಿಕ ಸಹಕಾರವನ್ನು ನೀಡಿದ್ದಾರೆ.
ಹೀಗೆ ಇತಿಹಾಸ ಕೆದಕುತ್ತಾ ನಾವು ನಮ್ಮ ವಾಹನದಲ್ಲಿ ಬಂದಾಗ ಮುರ್ಡೇಶ್ವರ ಸಮುದ್ರ ತೀರದಲ್ಲಿ ನಿಂತಿದ್ದೆವು.ಮೊದಲು ದೇವಾಲಯದ ದರ್ಶನ ಪಡೆಯೋಣ ನಂತರ ಶಿವನ ಸನ್ನಿಧಿಯಲ್ಲಿ ಹೋಗಿ ರಾಜಗೋಪುರ ಬಂದು ಸಮುದ್ರದ ಕಿನಾರೆಯತ್ತ ಸಾಗೋಣ ಎಂದು ಮಾರ್ಗ ಹಾಕಿಕೊಂಡು ತೆರಳಿದೆವು.
ದೇವಾಲಯ
ದೈತ್ಯಾಕಾರದ ಶಿವ ಪ್ರತಿಮೆಯ ಬುಡದಲ್ಲಿ ಮೃದೇಶ್ವರ ದೇವಸ್ಥಾನವನ್ನು ನಾವು ನೋಡಬಹುದು. ಆತ್ಮ-ಲಿಂಗದ ಮೂಲ ತುಣುಕನ್ನು ಮೃದೇಶ ಲಿಂಗ ಎಂದು ಕರೆಯಲಾಗುತ್ತದೆ. ಈಗ ಇದನ್ನು ಮುರುಡೇಶ್ವರ ಎಂದು ಮರುನಾಮಕರಣ ಮಾಡಲಾಗಿದೆ.ಮೆಟ್ಟಿಲುಗಳನ್ನು ಹತ್ತುತ್ತಾ ಹತ್ತಿರ ದಲ್ಲಿ ಕಾಣುವ ನಲ್ಲಿ ಗಳ ನೀರನ್ನು ಕೈಕಾಲುಗಳನ್ನು ತೊಳೆದು ಕೊಂಡು ಸರತಿಯ ಸಾಲಿನಲ್ಲಿ ನಿಂತೆವು.
ಮುರುಡೇಶ್ವರ ದೇವಾಲಯದ ರಚನೆಯು ಹಿಂದೂ ಮಹಾಕಾವ್ಯ ರಾಮಾಯಣದ ಕಾಲಕ್ಕೆ ಸಂಬಂಧಿಸಿದೆ. ಈ ದೇವಾಲಯದಲ್ಲಿ ನಾವು ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಘಟನೆಗಳನ್ನು, ದೃಶ್ಯಗಳನ್ನು ನೋಡ್ತಾ ಸಾಗಿದೆವು ದೇವಾಲಯದ ಗುಹೆಯಲ್ಲಿ ರಾಮಾಯಣದ ದೃಶ್ಯವನ್ನು, ಗೋಡೆಗಳ ಮೇಲಿನ ಚಿತ್ರಗಳಲ್ಲಿ ನಾವು ರಾಮಾಯಣದ ದೃಶ್ಯಗಳನ್ನು ನೋಡಿದೆವು.
ರಾವಣನ ಕಥೆ
ನಮ್ಮ ಅನೇಕ ತಾಣಗಳು ಇತಿಹಾಸ ಮತ್ತು ಪುರಾಣ ಐತಿಹ್ಯ ಹೊಂದಿವೆ. ಮುರ್ಡೇಶ್ವರ ಕೂಡ ರಾಮಾಯಣ ಘಟನೆ ನಡೆದ ಬಗ್ಗೆ ಉಲ್ಲೇಖ ಹೊಂದಿದೆ.
ದಂತಕಥೆಯ ಪ್ರಕಾರ, ರಾವಣನು ಲಂಕಾ ತಲುಪುವ ಮೊದಲು ಅದನ್ನು ನೆಲದ ಮೇಲೆ ಇಟ್ಟುಕೊಳ್ಳಬಾರದು ಎಂಬ ಷರತ್ತಿನ ಮೇರೆಗೆ ಶಿವನಿಂದ ಆತ್ಮ-ಲಿಂಗವನ್ನು ಸಂಪಾದಿಸಿದ್ದನು. ರಾವಣನು ಅನೈತಿಕತೆಯಿಂದ ಶಕ್ತಿಶಾಲಿಯಾಗಿ ದೇವತೆಗಳನ್ನು ಆಳುವುದು ದೇವಾನುದೇವತೆಗಳಿಗೆ ಇಷ್ಟವಿರಲಿಲ್ಲ. ಹೇಗಾದರೂ ಮಾಡಿ ರಾವಣನನ ಕೈಲಿದ್ದ ಆತ್ಮಲಿಂಗವನ್ನು ನೆಲಕ್ಕಿಡುವಂತೆ ಮಾಡಲು ದೇವಾನುದೇವತೆಗಳು ಒಂದು ಯೋಜನೆಯನ್ನು ರೂಪಿಸಿದರು.
ದೇವಾನು ದೇವತೆಗಳು ಗಣೇಶನ ಬಳಿ ಬಂದು ರಾವಣನು ಶಿವನ ಆತ್ಮಲಿಂಗವನ್ನು ಪಡೆದುಕೊಂಡಿರುವುದರ ಬಗ್ಗೆ ಮತ್ತು ಅದನ್ನು ಹಿಂಪಡೆಯಲು ಕೇಳಿಕೊಳ್ಳುತ್ತಾರೆ. ದೇವಾನುದೇವತೆಗಳ ಕೋರಿಕೆಯ ಮೇರೆಗೆ ಗಣೇಶನು ಹುಡುಗನ ರೂಪದಲ್ಲಿ ವೇಷ ಧರಿಸಿ ರಾವಣನಿಂದ ಆತ್ಮಲಿಂಗವನ್ನು ಪಡೆದುಕೊಳ್ಳಲು ಉಪಾಯ ಮಾಡುತ್ತಾನೆ. ಸಂಧ್ಯಾವಂದನೆ ಮಾಡಲೆಂದು ರಾವಣನು ತನ್ನ ಕೈಲಿದ್ದ ಆತ್ಮಲಿಂಗವನ್ನು ಬ್ರಾಹ್ಮಣ ಬಾಲಕನ ವೇಷಧರಿಸಿದ್ದ ಗಣೇಶನಿಗೆ ನೀಡುತ್ತಾನೆ. ರಾವಣನು ಸಂಧ್ಯಾವಂದನೆಯನ್ನು ಮುಗಿಸಿ ಬರುವಷ್ಟರಲ್ಲಿ ಗಣೇಶನು ತನ್ನ ಕೈಲಿದ್ದ ಆತ್ಮಲಿಂಗವನ್ನು ನೆಲದ ಮೇಲೆ ಇಡುತ್ತಾನೆ. ಈ ಸ್ಥಳವೇ ಗೋಕರ್ಣ.
ರಾವಣನು ಬಂದು ನೋಡಿದಾಗ ಆತ್ನಲಿಂಗ ಅದಾಗಲೇ ನೆಲದಲ್ಲಿ ಸ್ಥಿರವಾಗಿತ್ತು. ರಾವಣನು ಬಾಲಕನ ಮೇಲಿನ ಕೋಪದಲ್ಲಿ ರಾವಣನು ಲಿಂಗವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಪ್ರಯತ್ನದ ಬಲದಿಂದ ಆತ್ಮಲಿಂಗ ಮುರಿದು ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಲಿಂಗದ ತುಣುಕುಗಳು ಗೋಕರ್ಣದ ಸುತ್ತ ಹರಡಿಕೊಂಡಿತು. ಮುಖ್ಯ ಆತ್ಮ-ಲಿಂಗವೆಂದರೆ ಮಹಾಬಲೇಶ್ವರ ದೇವಸ್ಥಾನ (ಗೋಕರ್ಣ), ಸಜ್ಜೇಶ್ವರ, ಧರೇಶ್ವರ, ಗುಣವಂತೇಶ್ವರ ಮತ್ತು ಆತ್ಮ-ಲಿಂಗಕ್ಕೆ ಹೊದಿಸಿದ್ದ ಬಟ್ಟೆ ಈ ಪವಿತ್ರ ಮುರುಡೇಶ್ವರದಲ್ಲಿ ಬಿದ್ದಿತು ಎಂಬ ದೃಷ್ಟಾಂತ ನಮಗೆ ದೊರೆಯುತ್ತದೆ.. ಈ ಕಥೆ ನೆನಪಿಸುತ್ತಾ ದೇವರ ದರ್ಶನ ಪಡೆದು ಹೊರಗೆ ಬಂದು ಶಿವನ ಸನ್ನಿಧಿಯಲ್ಲಿ ಹೋಗುವ ಮಾರ್ಗದಲ್ಲಿ ನಾವು ನೋಡಿದ್ದು ಸೂರ್ಯ ರಥ
ಸೂರ್ಯ ರಥ
ಶಿವ ಪ್ರತಿಮೆಯ ಪಕ್ಕದಲ್ಲಿ ಚಿನ್ನದ ಬಣ್ಣದ ಸೂರ್ಯ ರಥವು ಶ್ರೀಕೃಷ್ಣನಿಂದ ಅರ್ಜುನನು ಗೀತೋಪದೇಶವನ್ನು (ಭಗವದ್ಗೀತೆಯ ಬೋಧನೆ) ಸ್ವೀಕರಿಸುವುದನ್ನು ಚಿತ್ರಿಸಲಾಗಿದೆ.
ಶಿವನ ಪ್ರತಿಮೆ
ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆ ಜಗತ್ತಿನ ಅತಿ ಎತ್ತರದ ಶಿವ ಪ್ರತಿಮೆ. ಈ ಪಟ್ಟಿಯಲ್ಲಿ ಮುರುಡೇಶ್ವರ ಶಿವನ ಪ್ರತಿಮೆಗೆ ಎರಡನೇ ಸ್ಥಾನ. ಇದು ಸರಿ ಸುಮಾರು 123 ಅಡಿ ಎತ್ತರವನ್ನು ಹೊಂದಿದೆ.
ಶಿವನ ಪ್ರತಿಮೆ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಸದಾ ಹೊಳೆಯುತ್ತಿರುತ್ತದೆ ಶಿವನ ಪ್ರತಿಮೆ. ಈ ಶಿವನ ಪ್ರತಿಮೆ ಕಂಡು ಸುತ್ತಲೂ ಕಾಣುವ ಸಮುದ್ರದ ಅಲೆಗಳ ರಮಣೀಯ ನೋಟವನ್ನು ಕಣ್ತುಂಬಿಕೊಂಡು ರಾಜ ಗೋಪುರಕ್ಕೆ ಬಂದೆವು.
ರಾಜ ಗೋಪುರ
20 ಅಂತಸ್ತಿನ ರಾಜ ಗೋಪುರವೂ ದೇವಾಲಯದ ಸಂಕೀರ್ಣದ ಭಾಗವಾಗಿದೆ. ದೇವಾಲಯವು ಚೌಕಾಕಾರದ ಅಭಯಾರಣ್ಯದ ಆಕಾರದಲ್ಲಿದೆ, ಎತ್ತರದ ಮತ್ತು ಚಿಕ್ಕದಾದ ಕುಟಿನಾ ಶೈಲಿಯ ಶಿಖರಗಳನ್ನು ಹೊಂದಿದೆ. ಕಥೆಗಳ ಜೋಡಣೆಯು ಪಿರಮಿಡ್ ಮಾದರಿಯಲ್ಲಿದೆ, ಕಥೆಗಳು ಕ್ರಮೇಣ ಹಿಮ್ಮೆಟ್ಟುತ್ತವೆ. ಗೋಪುರದ ಮೇಲ್ಭಾಗದಲ್ಲಿ, ಒಂದು ಅಂತಿಮ, ಸಣ್ಣ ದೇವಾಲಯಗಳನ್ನು ಹೊಂದಿರುವ ಪ್ಯಾರಪೆಟ್ ಮತ್ತು ಗುಮ್ಮಟದ ಆಕಾರದ ಗುಮ್ಮಟವಿದೆ.ಇದನ್ನೆಲ್ಲ ವೀಕ್ಷಿಸಲು ಬಹಳ ಸಮಯ ಬೇಕು. ಸಂಜೆ ಆಗುತ್ತಿರುವ ಕಾರಣ ಸೂರ್ಯಾಸ್ತದ ರಮಣೀಯ ದೃಶ್ಯ ಕಣ್ತುಂಬಿಕೊಂಡು ನಮ್ಮ ಪ್ರವಾಸ ಮುಂದುವರೆಸಬೇಕಿತ್ತು. ರಾಜ ಗೋಪುರ ದಿಂದ ಕೆಳಗೆ ಬಂದೆವು.
ಮುರ್ಡೇಶ್ವರ ಸಮುದ್ರ ಕಿನಾರೆಯಲ್ಲಿ
ಮುರುಡೇಶ್ವರ ಬೀಚ್ನಲ್ಲಿ ಪ್ರಸಿದ್ಧವಾದ ಸೂರ್ಯಾಸ್ತದ ತಾಣವಿದೆ ಮತ್ತು ನಮ್ಮ ಆಶ್ಚರ್ಯಕ್ಕೆ, ನಾವು ತಲುಪುವ ಹೊತ್ತಿಗೆ ಸ್ಥಳವು ಜನರಿಂದ ತುಂಬಿತ್ತು. ಸೂರ್ಯಾಸ್ತದ ದೃಶ್ಯಗಳು ಬಹಳ ಸುಂದರವಾಗಿತ್ತು.ಮೊದಲು ಬೋಟಿಂಗ್ ಹೋಗಿ ಬಂದು ನಂತರ ಅಲ್ಲಿ ಬೈಕ್ ರೈಡಿಂಗ್ ಮಾಡಿದೆವು. ಅಲ್ಲಿನ ಅಂಗಡಿಗೆ ತೆರಳಿ ತಿಂಡಿ ತಿನಿಸುಗಳನ್ನು ತಿನ್ನುತ್ತಾ ಸಮುದ್ರದ ತಟದಲ್ಲಿ ಓಡಾಡಿ ಮಜ ಅನುಭವಿಸಿದೆವು.ಕರಾವಳಿ ಪ್ರದೇಶಗಳು ತೆಂಗಿನಕಾಯಿಯಲ್ಲಿ ಸಮೃದ್ಧವಾಗಿವೆ ಮತ್ತು ಆದ್ದರಿಂದ ಸ್ಥಳೀಯ ತೆಂಗಿನಕಾಯಿಯಿಂದ ತಯಾರಿಸಿದ ಸಿಹಿತಿಂಡಿಗಳು ಮತ್ತು ಅನ್ನ ಮತ್ತು ಮೀನಿನ ಮೇಲೋಗರದ ಇತರ ಸುವಾಸನೆಗಳು ಗಮನ ಸೆಳೆಯುವ ತಿನ್ನುವ ಹುಚ್ಚು ಇದ್ದವರಿಗೆ ತಿನ್ನಲು ಬಯಸುತ್ತವೆ. ಹಲಸಿನ ಹಣ್ಣುಗಳು, ಸ್ಥಳೀಯ ಮಾವಿನ ಹಣ್ಣುಗಳು ಮತ್ತು ಗೋಡಂಬಿಗಳ ಸವಿರುಚಿ ಚೀಪ್ಸಗಳು ಇಲ್ಲಿ ದೊರೆಯುತ್ತದೆ ಆಗ ನಮಗೊಬ್ಬರು ನೇತ್ರಾಣಿ ದ್ವೀಪ ಕ್ಕೆ ಹೋಗ್ತೀರ ಎಂದರು. ನನಗೆ ಹೋಗೋ ಆಸಕ್ತಿ. ಆದರೆ ಮುಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕ್ಕೆ ಹೋಗುವ ನಮ್ಮ ಯೋಜನೆ ತಪ್ಪತ್ತೆ ಹೀಗಾಗಿ ಸಮುದ್ರದ ಕಿನಾರೆಯಲ್ಲಿ ಸೌಂದರ್ಯ ಸವಿದು ಮುಂದೆ ಹೊರಡಲನುವಾಗೋಣ ಎಂದು ಯೋಚಿಸಿದೆವು.ಆದರೆ ಮಾಹಿತಿಯನ್ನು ಪಡೆದುಕೊಂಡೆನು.
ನೇತ್ರಾಣಿ ದ್ವೀಪ
.ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಅರಬ್ಬೀ ಸಮುದ್ರದಲ್ಲಿರುವ ಭಾರತದ ಒಂದು ದ್ವೀಪ. ಇದು ಕರ್ನಾಟಕದ ಕರಾವಳಿಯ ಬದಿಯಲ್ಲಿದೆ. ಮುರುಡೇಶ್ವರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಇಲ್ಲಿ ಪಾರಿವಾಳಗಳಲ್ಲದೆ, ಕಾಡು ಮೇಕೆಗಳು ಕಂಡು ಬರುತ್ತವೆ ಇಲ್ಲಿನ ಬೋಟ್ ನವರು ತಮ್ಮ ದರವನ್ನು ನಿಗದಿ ಪಡಿಸಿದ್ದು ಅಲ್ಲಿ ಕರೆದುಕೊಂಡು ಹೋಗಿ ಬರುವರು.
*ಮುರುಡೇಶ್ವರ ದೇವಸ್ಥಾನದಲ್ಲಿ ಹಬ್ಬ ಹರಿದಿನಗಳು*
ಫೆಬ್ರವರಿ ಅಥವಾ ಫಾಲ್ಗುಣದಲ್ಲಿ ಬರುವ ಮಹಾ ಶಿವರಾತ್ರಿಯ ಹಬ್ಬವು ಮುರುಡೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಏಕೆಂದರೆ ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.
ಪ್ರತೀ ತಿಂಗಳು ಶಿವರಾತ್ರಿಯು ಹದಿನಾಲ್ಕನೆಯ ದಿನ ಅಥವಾ ಚತುರ್ದಶಿ ತಿಥಿಯಂದು ಬರುತ್ತದೆ ಎಂಬುದು ನಂಬಿಕೆ. ಈ ದಿನ ಭಕ್ತರು ಮುರ್ಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ಶಿವ ಮತ್ತು ಪಾರ್ವತಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಅವರು ಉಪವಾಸವನ್ನು ಇಟ್ಟುಕೊಳ್ಳುತ್ತಾರೆ ಮತ್ತು ಹಲವಾರು ಶಿವ ಭಜನೆಗಳನ್ನು ಪಠಿಸುತ್ತಾರೆ. ಶಿವರಾತ್ರಿ ಮಹತ್ವದ್ದಾಗಿದೆ ಏಕೆಂದರೆ ಭಕ್ತರು ಇಡೀ ರಾತ್ರಿ ದೇವಸ್ಥಾನದಲ್ಲಿ ಭಕ್ತಿ ಸ್ತೋತ್ರಗಳನ್ನು ಪಠಿಸುತ್ತಾರೆ. ಈ ದಿನ, ದೇವಾಲಯವು ವಿಶೇಷ ಪೂಜೆಗಳನ್ನು ಮಾಡುತ್ತದೆ ಅದಕ್ಕೆ ತಮ್ಮ ಸಂಕಲ್ಪ ದ ಪ್ರಕಾರ ತಾವೂ ಕೂಡ ಪೂಜೆ ಮಾಡಿಸಬಹುದು.
ಕಾರ್ತಿಕ ಪೂರ್ಣಿಮಾ ಮತ್ತೊಂದು ಹಬ್ಬವಾಗಿದ್ದು, ಮುರುಡೇಶ್ವರ ದೇವಸ್ಥಾನದಲ್ಲಿ ಇದರ ಆಚರಣೆ ಬಹಳ ಮುಖ್ಯವಾಗಿದೆ. ಆಚರಣೆಗಳು ನವೆಂಬರ್ ಅಥವಾ ಡಿಸೆಂಬರ್ನಲ್ಲಿ ನಡೆಯುತ್ತವೆ. ಸಂಪ್ರದಾಯದ ಪ್ರಕಾರ, ತ್ರಿಪುರಾಸುರ ಎಂಬ ರಾಕ್ಷಸನಿಂದ ನಿರ್ಮಿಸಲಾದ ಮೂರು ಮಾಂತ್ರಿಕ ನಗರಗಳನ್ನು ಶಿವನು ಕೆಡವಿದನು, ಆದರೆ ಇನ್ನೊಂದು ಆವೃತ್ತಿಯು ಈ ಹಬ್ಬವು ಭಗವಾನ್ ಶಿವನ ಮಗ ಶ್ರೀ ಮುರುಗನ್ ಜನ್ಮವನ್ನು ನೆನಪಿಸುತ್ತದೆ ಎಂದು ಹೇಳುತ್ತಾರೆ.
ಮುರುಡೇಶ್ವರ ದೇವಸ್ಥಾನದ ಸಮಯ
ಮುರುಡೇಶ್ವರ ದೇವಸ್ಥಾನವು ದರ್ಶನಕ್ಕಾಗಿ ಮತ್ತು ಮುಂಜಾನೆ ಭೇಟಿಗಾಗಿ 6:00 ಗಂಟೆಗೆ ತೆರೆದು ಮಧ್ಯಾಹ್ನ 1:00 ಗಂಟೆಗೆ ಮುಚ್ಚುತ್ತದೆ, ಬೆಳಿಗ್ಗೆ 6:30 ರಿಂದ 7:00 ರವರೆಗೆ ಬೆಳಗಿನ ಪೂಜೆಯ ಪ್ರದರ್ಶನವು ಮಧ್ಯಾಹ್ನದ ಸಮಯದಲ್ಲಿ ಮಹಾಪೂಜೆಯನ್ನು 12:15 ರವರೆಗೆ ನಡೆಸಲಾಗುತ್ತದೆ. 1 ಗಂಟೆಗೆ ನಂತರ, ಸಂಜೆ 3 ಗಂಟೆಗೆ ದೇವಾಲಯವು ಮತ್ತೆ ತೆರೆಯುತ್ತದೆ ಮತ್ತು ರಾತ್ರಿ ಪೂಜೆಯ ನಂತರ ರಾತ್ರಿ 8.30 ಕ್ಕೆ ಮುಚ್ಚುತ್ತದೆ.
ದೇವಸ್ಥಾನದಲ್ಲಿ ಪ್ರತಿದಿನವೂ ಸೇವಾಕಾರ್ಯ ನಡೆಯುತ್ತದೆ. ರುದ್ರಾಭಿಷೇಕ, ಪಂಚಕಜ್ಜಾಯ, ಬಿಲ್ವಾರ್ಚನೆ, ನವಗ್ರಹ ಪೂಜೆ, ಭಸ್ಮಾರ್ಚನೆ ಇವು ಅತ್ಯಂತ ಜನಪ್ರಿಯವಾಗಿವೆ.
*ಮುರುಡೇಶ್ವರವನ್ನು ತಲುಪುವುದು ಹೇಗೆ* ಮುರುಡೇಶ್ವರ ಬೆಂಗಳೂರಿನಿಂದ 490 ಕಿ.ಮೀ ಮತ್ತು ಮಂಗಳೂರಿನಿಂದ 155 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮುರುಡೇಶ್ವರ ರೈಲ್ವೆ ನಿಲ್ದಾಣವು ಪಟ್ಟಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಕರಾವಳಿಯು ಎಲ್ಲಾ ಪ್ರಮುಖ ನಗರಗಳಿಂದ ಮುರುಡೇಶ್ವರ ತಲುಪಲು ನಿಯಮಿತ ಬಸ್ ಸೇವೆ ಲಭ್ಯವಿದೆ.ನಾವು ಇಡಗುಂಜಿ ಯಿಂದ ಹೊರಟ ಕಾರಣ ಅಲ್ಲಿಂದ ಮುರುಡೇಶ್ವರವು 15 ಕಿ. ಮಿ ಅಂತರವಿತ್ತು. ಮುರುಡೇಶ್ವರವು ಗೋಕರ್ಣದಿಂದ 78 ಕಿಮೀ ದೂರದಲ್ಲಿದೆ ಮತ್ತು ರಸ್ತೆ ಅಥವಾ ರೈಲಿನ ಮೂಲಕ ತಲುಪಬಹುದು. ಲಭ್ಯವಿರುವ ರೈಲುಗಳೆಂದರೆ ಮತ್ಸ್ಯಗಂಧ ಎಕ್ಸ್ಪ್ರೆಸ್ ಮತ್ತು ಮಾವೋ ಮ್ಯಾಕ್ ಪಾಸ್, ಅವುಗಳ ದರ ಕ್ರಮವಾಗಿ ರೂ.105 ಮತ್ತು ರೂ.85. ಗೋಕರ್ಣ ಟೌನ್ನ ಮುಖ್ಯ ಬಸ್ ನಿಲ್ದಾಣದಿಂದ ಮುರುಡೇಶ್ವರಕ್ಕೆ ಪ್ರತಿದಿನ ಬೆಳಿಗ್ಗೆ ಬಸ್ಸುಗಳು ಹೊರಡುತ್ತವೆ
ಈ ಎಲ್ಲಾ ಮಾಹಿತಿಯನ್ನು ಪಡೆದ ನಾವು ನಮ್ಮ ಪ್ರವಾಸ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದತ್ತ ಸಾಗಿಸಿದ್ದೆವು.
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್. ಸಿಂದೋಗಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨